ನಿಯಮಿತವಾಗಿ ಕನ್ನಡಕ ಧರಿಸುವುದರಿಂದ ಕಣ್ಣಿನ ಪವರ್ ಹೆಚ್ಚಾಗುವುದಿಲ್ಲ. ಕಣ್ಣಿನ ಸ್ನಾಯುಗಳೂ ದುರ್ಬಲಗೊಳ್ಳುವುದಿಲ್ಲ; ಕನ್ನಡಕ ಕೇವಲ ಬೆಳಕನ್ನು ಸರಿಯಾಗಿ ದೃಷ್ಟಿಯನ್ನು ಸ್ಪಷ್ಟಪಡಿಸುತ್ತದೆ. ಕಣ್ಣಿನ ನಂಬರ್ ಬದಲಾಗಲು ದೇಹದ ನೈಸರ್ಗಿಕ ಬೆಳವಣಿಗೆ, ಆನುವಂಶಿಕತೆ ಮತ್ತು ವಯಸ್ಸಾಗುವಿಕೆಯಂತಹ ದೈಹಿಕ ಬದಲಾವಣೆಗಳು ನಿಜವಾದ ಕಾರಣಗಳಾಗಿವೆ.
ಕನ್ನಡಕ ಧರಿಸುವ ಬಹುತೇಕರಲ್ಲಿ ಒಂದು ಗೊಂದಲವಿರುತ್ತದೆ. ಪ್ರತಿದಿನ ಕನ್ನಡಕ ಧರಿಸುವುದರಿಂದ ಕಣ್ಣುಗಳು ಅದರ ಮೇಲೆ ಅವಲಂಬಿತವಾಗುತ್ತವೆ ಮತ್ತು ಕ್ರಮೇಣ ಕಣ್ಣಿನ ನಂಬರ್ (ಪವರ್) ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತದೆ ಎಂದು ನಂಬುತ್ತಾರೆ. ಈ ಕಾರಣದಿಂದಲೇ ಕಣ್ಣಿನ ದೃಷ್ಟಿ ದೋಷವಿದ್ದರೂ ಕನ್ನಡಕ ಧರಿಸದೆ ಇರುವವರು ಅನೇಕರಿದ್ದಾರೆ. ಇದು ಸಂಪೂರ್ಣ ಸುಳ್ಳು ಎಂದು ಕಣ್ಣಿನ ತಜ್ಞರು ಸ್ಪಷ್ಟಪಡಿಸುತ್ತಾರೆ. ಕನ್ನಡಕಗಳು ಕಣ್ಣಿನ ಪವರ್ ಹೆಚ್ಚಿಸುವುದಿಲ್ಲ. ಅವು ಕಣ್ಣಿನೊಳಗೆ ಪ್ರವೇಶಿಸುವ ಬೆಳಕನ್ನು ಸರಿಯಾದ ರೀತಿಯಲ್ಲಿ ದೃಷ್ಟಿ ಸರಿಪಡಿಸುವ ಸಾಧನವಷ್ಟೇ.
ಕನ್ನಡಕ ಕಣ್ಣಿನ ಪವರ್ ಹೆಚ್ಚಿಸುತ್ತಾ?
ಖಂಡಿತ ಇಲ್ಲ. ಸರಿಯಾದ ಪವರ್ ಇರುವ ಕನ್ನಡಕಗಳು ಕಣ್ಣಿನ ದೃಷ್ಟಿಯನ್ನು ಸ್ಪಷ್ಟಪಡಿಸಲು ಮಾತ್ರ ಸಹಾಯ ಮಾಡುತ್ತವೆ. ಅವು ಕಣ್ಣಿನ ನೈಸರ್ಗಿಕ ಆಕಾರವನ್ನು ಬದಲಾಯಿಸುವುದಿಲ್ಲ ಅಥವಾ ಕಣ್ಣಿನ ಸ್ನಾಯುಗಳನ್ನು ದುರ್ಬಲಗೊಳಿಸುವುದಿಲ್ಲ. ಕನ್ನಡಕವನ್ನು ತೆಗೆದಾಗ ದೃಷ್ಟಿ ಮೊದಲಿನಂತೆ ಮಸುಕಾಗಿ ಕಾಣಿಸುವುದರಿಂದ ಕನ್ನಡಕ ಧರಿಸಿದ್ದಕ್ಕೆ ಪವರ್ ಹೆಚ್ಚಾಗಿದೆ ಎಂದು ಭಾವಿಸುವುದು ತಪ್ಪು ಕಲ್ಪನೆಯಷ್ಟೇ.
ಕಣ್ಣಿನ ನಂಬರ್ ಬದಲಾಗಲು ಕಾರಣವೇನು?
ಕಣ್ಣಿನ ಪವರ್ ಬದಲಾಗಲು ನೈಸರ್ಗಿಕ ಕಾರಣಗಳಿವೆ. ಮುಖ್ಯವಾಗಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ದೇಹದ ಬೆಳವಣಿಗೆಯ ಜೊತೆಗೆ ಕಣ್ಣಿನ ನೈಸರ್ಗಿಕ ಬೆಳವಣಿಗೆಯೂ ನಡೆಯುವುದರಿಂದ ಮಯೋಪಿಯಾ (ಹತ್ತಿರದ ದೃಷ್ಟಿ ದೋಷ) ಪವರ್ ಬದಲಾಗುವ ಸಾಧ್ಯತೆಯಿರುತ್ತದೆ. ಅನುವಂಶಿಕ ಕಾರಣಗಳು, ವಯಸ್ಸಾಗುವಿಕೆ ಮತ್ತು ದೀರ್ಘಕಾಲದವರೆಗೆ ಹತ್ತಿರದ ವಸ್ತುಗಳನ್ನು ಸೂಕ್ಷ್ಮವಾಗಿ ನೋಡುವ ಕೆಲಸಗಳು ದೃಷ್ಟಿಯಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತವೆ.
ಕನ್ನಡಕ ಧರಿಸದಿದ್ದರೆ ಕಣ್ಣಿನ ಪವರ್ ಕಡಿಮೆಯಾಗುತ್ತದೆಯೇ?
ಕನ್ನಡಕ ಧರಿಸದಿದ್ದರೆ ಕಣ್ಣಿನ ಪವರ್ ತಾನಾಗಿಯೇ ಕಡಿಮೆಯಾಗುತ್ತದೆ ಎನ್ನುವುದು ಕೇವಲ ಅಂಧಶೃದ್ಧೆ. ಅಗತ್ಯವಿರುವ ಕನ್ನಡಕ ಧರಿಸದೆ ಇರುವುದರಿಂದ ಕಣ್ಣಿನ ದೋಷ ನಿವಾರಣೆಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ವಿಶೇಷವಾಗಿ ಬೆಳೆಯುವ ಮಕ್ಕಳಲ್ಲಿ ದೃಷ್ಟಿ ಸ್ಪಷ್ಟವಾಗಿರುವುದು ಅತ್ಯಂತ ಮುಖ್ಯವಾಗಿರುವುದರಿಂದ ವೈದ್ಯರು ಸೂಚಿಸಿದ ಕನ್ನಡಕವನ್ನು ಧರಿಸಲೇಬೇಕು.
ಕಣ್ಣಿನ ಪವರ್ ಪದೇ ಪದೇ ಬದಲಾಗುತ್ತಿದ್ದರೆ ಏನು ಮಾಡಬೇಕು?
ನಿಮ್ಮ ಕಣ್ಣಿನ ನಂಬರ್ ಪದೇ ಪದೇ ಬದಲಾಗುತ್ತಿರುವಂತೆ ಅನಿಸಿದರೆ ಕೇವಲ ಕನ್ನಡಕವನ್ನು ಬದಲಾಯಿಸುವುದಷ್ಟೇ ಪರಿಹಾರವಲ್ಲ. ತಕ್ಷಣ ಕಣ್ಣಿನ ವೈದ್ಯರನ್ನು ಭೇಟಿಯಾಗಿ ಕಣ್ಣಿನ ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳಬೇಕು. ಪದೇ ಪದೇ ತಲೆನೋವು ಬರುವುದು, ಕಣ್ಣುಗಳು ಆಯಾಸಗೊಳ್ಳುವುದು, ದೃಷ್ಟಿ ಹಠಾತ್ತಾಗಿ ಮಸುಕಾಗುವುದು ಅಥವಾ ಕನ್ನಡಕ ಧರಿಸಿದರೂ ಸ್ಪಷ್ಟವಾಗಿ ಕಾಣಿಸದಿರುವ ಸಮಸ್ಯೆಗಳಿದ್ದರೆ ನಿರ್ಲಕ್ಷಿಸಬೇಡಿ.
ಅತಿಯಾದ ಸ್ಕ್ರೀನ್ ಟೈಮ್ ಕೂಡ ಕಾರಣವೇ?
ಮೊಬೈಲ್, ಕಂಪ್ಯೂಟರ್, ಇತರ ಡಿಜಿಟಲ್ ಸ್ಕ್ರೀನ್‌ಗಳನ್ನು ದೀರ್ಘಕಾಲದವರೆಗೆ ನೋಡುವುದರಿಂದ ಕಣ್ಣುಗಳು ಆಯಾಸಗೊಳ್ಳುವುದು ಕಣ್ಣು ಒಣಗುವುದು (Dry eyes) ಮತ್ತು ತಾತ್ಕಾಲಿಕವಾಗಿ ದೃಷ್ಟಿ ಮಸುಕಾಗುವ ಸಮಸ್ಯೆಗಳು ಎದುರಾಗಬಹುದು. ವಿಶೇಷವಾಗಿ ಮಕ್ಕಳಲ್ಲಿ ನಿರಂತರವಾಗಿ ಸ್ಕ್ರೀನ್ ನೋಡುವ ಅಭ್ಯಾಸವು ಮಯೋಪಿಯಾ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಸಂಶೋಧನೆಗಳು ತಿಳಿಸುತ್ತವೆ. ಆದ್ದರಿಂದ ಸ್ಕ್ರೀನ್ ಬಳಸುವಾಗ ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳುವುದು ಮತ್ತು ಮಕ್ಕಳು ಹೊರಾಂಗಣ ಆಟಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಒಳ್ಳೆಯದು.
ಕನ್ನಡಕಗಳು ನಿಮ್ಮ ಕಣ್ಣುಗಳನ್ನು ದುರ್ಬಲಗೊಳಿಸುವುದಿಲ್ಲ. ಅವು ಕಣ್ಣಿನೊಳಗೆ ಬರುವ ಬೆಳಕನ್ನು ಸರಿಯಾದ ರೀತಿಯಲ್ಲಿ ದೃಷ್ಟಿಯನ್ನು ಸರಾಗಗೊಳಿಸುವ ಸಾಧನವಷ್ಟೇ. ವೈದ್ಯರ ಸಲಹೆಯಿಲ್ಲದೆ ಸ್ವಯಂ ನಿರ್ಧಾರದಿಂದ ಕನ್ನಡಕ ಧರಿಸುವುದನ್ನು ನಿಲ್ಲಿಸುವುದು ಅಥವಾ ಪವರ್ ಬದಲಾಯಿಸುವುದು ಮಾಡಬಾರದು.


