- Home
- Karnataka Districts
- ಮಲೆನಾಡಿನ ಈ ಹಳ್ಳಿ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಕ್ತಿಲ್ಲ; ಕಾರಣ ಈ ಊರಿಗೆ ರಸ್ತೆಯೇ ಸರಿಯಿಲ್ಲ!
ಮಲೆನಾಡಿನ ಈ ಹಳ್ಳಿ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಕ್ತಿಲ್ಲ; ಕಾರಣ ಈ ಊರಿಗೆ ರಸ್ತೆಯೇ ಸರಿಯಿಲ್ಲ!
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕದ ದುಸ್ಥಿತಿಯಿಂದಾಗಿ ಮದುವೆ ಸಂಬಂಧವೊಂದು ಮುರಿದುಬಿದ್ದಿದೆ. ಸುಮಾರು 20 ವರ್ಷಗಳಿಂದ ಡಾಂಬರು ಕಾಣದ ಈ ರಸ್ತೆಗಳಿಂದಾಗಿ ಗ್ರಾಮಸ್ಥರು, ಶಾಲಾ ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ.

ನಿಮ್ಮೂರಿನಲ್ಲಿ ರಸ್ತೆ ಸರಿ ಇಲ್ಲ, ಹೆಣ್ಣು ಕೊಡಲ್ಲ
ಚಿಕ್ಕಮಗಳೂರು: ‘ನಿಮ್ಮೂರಿನಲ್ಲಿ ರಸ್ತೆ ಸರಿ ಇಲ್ಲ, ಹೆಣ್ಣು ಕೊಡಲ್ಲ’ ಎಂಬ ಮಾತು ಕೇಳಿಬರುವ ಪರಿಸ್ಥಿತಿ ಇದೀಗ ಮಲೆನಾಡಿನ ಕೆಲವು ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ರಸ್ತೆ ಸಂಪರ್ಕದ ದುಸ್ಥಿತಿಯಿಂದಾಗಿ ಒಂದು ಮದುವೆ ಸಂಬಂಧವೇ ಕಳೆದುಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಎದುರಾಗಿರುವ ತೀವ್ರ ರಸ್ತೆ ಸಮಸ್ಯೆ ಇದೀಗ ಸಾಮಾಜಿಕ ಸಮಸ್ಯೆಯ ರೂಪವನ್ನೂ ಪಡೆದುಕೊಂಡಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಕಳಸ ತಾಲೂಕಿನ ಎಡೆಯೂರು, ಮರಸಣಿಗೆ, ಮಾವಿನಕೆರೆ ಹಾಗೂ ಕೆ.ಕೆಳಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿವೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಗ್ರಾಮಸ್ಥರ ಸಂಚಾರವೇ ದುಸ್ತರವಾಗಿದೆ ಎನ್ನಲಾಗಿದೆ.
ರಸ್ತೆ ಸರಿಯಿಲ್ಲವೆಂದು ವಧು ನೀಡಲು ನಿರಾಕರಣೆ?
ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಈ ಭಾಗದ ರಸ್ತೆಗಳ ಸ್ಥಿತಿ ಕಂಡು ಹೊರಗಿನ ಕುಟುಂಬವೊಂದು ವಿವಾಹ ಸಂಬಂಧ ಮುಂದುವರಿಸಲು ಹಿಂದೇಟು ಹಾಕಿದೆ. ‘ರಸ್ತೆ ಸರಿಯಿಲ್ಲದ ಊರಿಗೆ ಹೆಣ್ಣು ಕೊಡುವುದಿಲ್ಲ’ ಎಂಬ ಮನೋಭಾವ ವ್ಯಕ್ತವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ವಿವಾಹದಂತಹ ವೈಯಕ್ತಿಕ ಸಂಬಂಧಕ್ಕೂ ಗ್ರಾಮದಲ್ಲಿನ ರಸ್ತೆ ಸಮಸ್ಯೆ ಅಡ್ಡಿಯಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
20 ವರ್ಷಗಳಿಂದ ಟಾರ್ ಕಂಡಿಲ್ಲ!
ಸ್ಥಳೀಯರ ಪ್ರಕಾರ, ಈ ಗ್ರಾಮಗಳ ರಸ್ತೆಗೆ ಸುಮಾರು 20 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಅನುದಾನದ ಮೂಲಕ ಡಾಂಬರೀಕರಣವಾಗಿತ್ತು. ಅದಾದ ಬಳಿಕ ಸಮರ್ಪಕವಾಗಿ ಟಾರ್ ಕಾಮಗಾರಿ ನಡೆದಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಕಳೆದ 10 ವರ್ಷಗಳಿಂದ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಸುಮಾರು 450–500 ಮನೆಗಳ ಗ್ರಾಮಗಳು
ಎಡೆಯೂರು, ಮರಸಣಿಗೆ, ಮಾವಿನಕೆರೆ ಹಾಗೂ ಕೆ.ಕೆಳಗೂರು ಭಾಗದಲ್ಲಿ ಸುಮಾರು 450ರಿಂದ 500 ಮನೆಗಳು ಇದ್ದು, ಹೆಚ್ಚಿನ ಕುಟುಂಬಗಳು ಕೂಲಿ ಕೆಲಸ ಸೇರಿದಂತೆ ವಿವಿಧ ಜೀವನೋಪಾಯಗಳ ಮೇಲೆ ಅವಲಂಬಿತವಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ದಿನನಿತ್ಯದ ಅಗತ್ಯ ಸೇವೆಗಳಿಗೂ ತೊಂದರೆ ಎದುರಾಗುತ್ತಿದೆ. ಮಳೆಗಾಲದಲ್ಲಿ ವಾಹನ ಸಂಚಾರ ಮತ್ತಷ್ಟು ಅಪಾಯಕಾರಿಯಾಗುತ್ತದೆ ಎಂಬುದು ಸ್ಥಳೀಯರ ಅಳಲು.
ಶಾಲಾ-ಕಾಲೇಜು ಮಕ್ಕಳಿಗೂ ನಿತ್ಯ ಪರದಾಟ
ರಸ್ತೆ ಸಮಸ್ಯೆಯ ಪರಿಣಾಮ ಶಿಕ್ಷಣಕ್ಕೂ ತಟ್ಟಿದೆ ಎನ್ನಲಾಗಿದೆ. ಈ ಭಾಗದಲ್ಲಿ ಸುಮಾರು 70ರಿಂದ 80 ಮಕ್ಕಳು ಶಾಲಾ-ಕಾಲೇಜುಗಳಿಗೆ ತೆರಳಲು ಪ್ರತಿದಿನವೂ ಕಷ್ಟಪಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸಮರ್ಪಕ ರಸ್ತೆ ಇಲ್ಲದ ಕಾರಣ ಮಳೆಗಾಲದಲ್ಲಿ ವಾಹನ ಸೌಲಭ್ಯ, ಶಾಲಾ-ಕಾಲೇಜಿಗೆ ತೆರಳುವಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚುನಾವಣೆಯ ವೇಳೆ ಮಾತ್ರ ಭರವಸೆ?
ಗ್ರಾಮಸ್ಥರ ಪ್ರಕಾರ, ಚುನಾವಣೆ ಬಂದಾಗ ರಸ್ತೆ ಸಮಸ್ಯೆಗೆ ಪರಿಹಾರ ನೀಡುವುದಾಗಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಭರವಸೆ ನೀಡಿದ್ದರು. ಚುನಾವಣೆ ಗೆದ್ದ ಬಳಿಕ ‘ಹಣ ಮಂಜೂರಾಗಿದೆ’, ‘ಸ್ಯಾಂಕ್ಷನ್ ಆಗಿದೆ’ ಎಂಬ ಮಾತುಗಳನ್ನು ಹೇಳುತ್ತಾ ವರ್ಷಗಳು ಕಳೆದಿವೆ. ಆದರೆ ನೆಲಮಟ್ಟದಲ್ಲಿ ರಸ್ತೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದಾಗಿ ರಾಜಕಾರಣಿಗಳ ಭರವಸೆಗಳ ಬಗ್ಗೆ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿದ್ದು, ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
‘ಭರವಸೆ ಸಾಕು, ರಸ್ತೆ ಬೇಕು’ ಎನ್ನುತ್ತಿರುವ ಗ್ರಾಮಸ್ಥರು
ವರ್ಷಗಳಿಂದ ಮನವಿ, ಪ್ರತಿಭಟನೆ ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಸಮಸ್ಯೆ ಬಗೆಹರಿಯದಿರುವುದರಿಂದ ಇದೀಗ ಕಠಿಣ ನಿರ್ಧಾರಕ್ಕೆ ಮುಂದಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ‘ರಸ್ತೆ ಅಭಿವೃದ್ಧಿ ಆಗುವವರೆಗೂ ಚುನಾವಣಾ ಸಂದರ್ಭದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳನ್ನು ಪ್ರಶ್ನಿಸುತ್ತೇವೆ’ ಎಂಬ ಸಂದೇಶವನ್ನು ಗ್ರಾಮಸ್ಥರು ನೀಡಿದ್ದಾರೆ. ರಸ್ತೆ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಂಡು, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

