ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ಹಂಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರವಾಗಿ ವಿರೋಧಿಸಿದ್ದಾರೆ. ಇದೊಂದು ಬೃಹತ್ ಅಕ್ರಮವಾಗಿದ್ದು, ಉಳಿದ ಭೂಮಿಯನ್ನು ಲಪಟಾಯಿಸುವ ದುರುದ್ದೇಶವಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಬೆಂಗಳೂರು: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ (ಬಿಎಂಐಸಿ) ಭೂಮಿ ಕಳೆದುಕೊಂಡಿರುವ ರೈತರಿಗೆ ನಿವೇಶನಗಳ ಹಂಚಿಕೆ ಸಂಬಂಧ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರದ ಬಗ್ಗೆ ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಗೌಡರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮೂರು ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ಸೋಮವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಪತ್ರ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ 1,453 ನಿವೇಶನಗಳ ಹಂಚಿಕೆ ಸಂಬಂಧ ನೈಸ್ ಸಂಸ್ಥೆಗೆ ಅನುಮತಿ ನೀಡುವ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪುಗಳ ಸಹಮತವಿದೆ ಎಂದು ಸರ್ಕಾರ ಜನತೆಗೆ ತಪ್ಪು ಮಾಹಿತಿ ನೀಡಿದೆ. ಈ ನಿರ್ಧಾರ ರಾಜ್ಯ ಹೈಕೋರ್ಟಿನ ಅಭಿಪ್ರಾಯಗಳಿಗೆ ಹಾಗೂ ಸುಪ್ರೀಂ ಕೋರ್ಟಿನ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ನೈಸ್ ಯೋಜನೆ ಇಡೀ ದೇಶದಲ್ಲೇ ಅತಿ ದೊಡ್ಡ ಅಕ್ರಮವಾಗಿದೆ. ರೈತರಿಗೆ 1,453 ನಿವೇಶನ ಕೊಟ್ಟು ಉಳಿದ ಅಷ್ಟು ಭೂಮಿಯನ್ನೂ ಲಪಟಾಯಿಸುವ ದುರುದ್ದೇಶವಿದೆ. ಈ ಭಾಗದಲ್ಲಿ ಒಂದು ಚದರ ಅಡಿ ಭೂಮಿಯ ಬೆಲೆ 10 ಸಾವಿರ ರು.ನಿಂದ 15 ಸಾವಿರ ರು. ಇದೆ. ಬಂಗಾರಕ್ಕೂ ಮೀರಿದ ಬೆಲೆ ಹೊಂದಿರುವ ಈ ಭೂಮಿ ಲೂಟಿ ಹೊಡೆಯಲು ಹೊರಟವರು ಯಾರು? ಈ ಅಕ್ರಮದ ಹಿಂದೆ ಯಾರಿದ್ದಾರೆ? ಯಾರು ಏನೇ ಮಾಡಿದರೂ ಇದನ್ನು ಮುಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಇದು ಬಯಲಿಗೆ ಬರಲೇಬೇಕು ಎಂದು ಕಿಡಿಕಾರಿದರು.

ಅಗ್ರಿಮೆಂಟ್ ಉಲ್ಲಂಘನೆ:

ನಾನು ಮುಖ್ಯಮಂತ್ರಿ ಆಗಿದ್ದಾಗ ನೈಸ್ ಸಂಸ್ಥೆಯೊಂದಿಗೆ ಯೋಜನಾ ಚೌಕಟ್ಟು ಒಪ್ಪಂದ ಮಾಡಿಕೊಳ್ಳಲಾಯಿತು. ಅದರ ಅನ್ವಯ ರಸ್ತೆ ಮತ್ತು ಅದಕ್ಕೆ ಪೂರಕ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಭೂಸ್ವಾಧೀನ ಮಾಡಿಕೊಳ್ಳಲಾಯಿತು. ಆದರೆ ನನ್ನ ನಂತರ ಬಂದ ಸರ್ಕಾರಗಳು ಹಾಗೂ ಅಂದಿನ ಅಧಿಕಾರಿಗಳು ನೈಸ್ ಸಂಸ್ಥೆ ಜತೆ ಶಾಮೀಲಾಗಿ ನಿರಂತರವಾಗಿ ಅಕ್ರಮಗಳನ್ನು ಎಸಗುತ್ತಾ ಬಂದಿವೆ ಎಂದು ಗೌಡರು ಆರೋಪಿಸಿದರು.

ಹಳೆಯ ನಿರ್ಧಾರಕ್ಕೆ ವಿರುದ್ಧ ತೀರ್ಮಾನ:

2016ರಲ್ಲಿ ಡಿ.ಕೆ.ಶಿವಕುಮಾರ್ ಅವರ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಆಂತರಿಕ ಬದಲಾವಣೆ (ಇಂಟೆರ್ ಚೇಂಜ್) ಜಾಗಗಳಲ್ಲಿ ನಿವೇಶನ ನಿರ್ಮಾಣ ಮಾಡುವ ಒಪ್ಪಂದಕ್ಕೆ ವಿರುದ್ಧ ಮತ್ತು ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಅದೇ ಪಕ್ಷದ ಸರ್ಕಾರ ತನ್ನ ಹಳೆಯ ನಿರ್ಧಾರಕ್ಕೆ ವಿರುದ್ಧವಾಗಿ ತೀರ್ಮಾನ ಕೈಗೊಳ್ಳುತ್ತಿರುವುದು ಒಪ್ಪಲು ಸಾಧ್ಯವಿಲ್ಲ ಎಂದರು.

ನಿವೇಶನ ಹಂಚಿಕೆ ನ್ಯಾಯಾಂಗ ನಿಂದನೆ:

ನೈಸ್ ಸಂಸ್ಥೆ ಅಕ್ರಮಗಳ ಆಗರವಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳು ಹಲವು ಬಾರಿ ನೈಸ್ ಸಂಸ್ಥೆಗೆ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ನೀಡಿವೆ. ಯೋಜನೆಗೆ ಮೀಸಲಿಟ್ಟ ಪ್ರದೇಶಗಳಲ್ಲಿ ನಿವೇಶನಗಳನ್ನು ನಿರ್ಮಿಸುವುದು ಕಾನೂನಿಗೆ ವಿರುದ್ಧ ಮತ್ತು ಯೋಜನಾ ಚೌಕಟ್ಟು ಒಪ್ಪಂದದ ಉಲ್ಲಂಘನೆ ಎಂದು ಪದೇ ಪದೆ ಹೇಳಿವೆ. ಆದರೆ ಈಗ ರಾಜ್ಯ ಸರ್ಕಾರ ರೈತರ ಕಣ್ಣೊರೆಸುವ ತಂತ್ರವಾಗಿ ನಿವೇಶನಗಳ ಹಂಚಿಕೆಗೆ ಹೊರಟಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ದೇವೇಗೌಡರು ಎಚ್ಚರಿಸಿದರು.

ವಾಣಿಜ್ಯ ಉದ್ದೇಶಕ್ಕೆ ಬಳಕೆ ಸರಿಯಲ್ಲ:

ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನ ಮಾಡಿಕೊಳ್ಳಲಾದ ಜಾಗದಲ್ಲಿ ಅಭಿವೃದ್ಧಿಯ ನೆಪವೊಡ್ಡಿ ಆ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕೋರ್ಟುಗಳು ನೀಡಿರುವ ಆದೇಶಗಳನ್ನು ಉದ್ದೇಶಪೂರ್ವಕವಾಗಿಯೇ ರಾಜ್ಯ ಸರ್ಕಾರ ನಿರ್ಲಕ್ಷ ಮಾಡಿದೆ. ನಿವೇಶನಗಳ ಹಂಚಿಕೆಗೆ ಗುರುತಿಸಿರುವ ಗ್ರಾಮಗಳು ರಸ್ತೆ ನಿರ್ಮಾಣದ ಯೋಜನೆಯ ಭಾಗವಾಗಿವೆ. ಆದರೂ, ನಿಮ್ಮ ಸಚಿವ ಸಂಪುಟವು ನಿವೇಶನ ಹಂಚಿಕೆಗೆ ಅನುಮೋದನೆ ನೀಡಿದೆ. ಅದು ಹೇಗೆ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಪ್ರಶ್ನಿಸಿದರು.

ನೈಸ್‌ ಕಂಪನಿಯ ಬ್ಯಾಲೆನ್ಸ್‌ಶೀಟ್‌ ಗಮನ:

2026ರ ಜುಲೈನಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಕಂಪನಿಯ ಬ್ಯಾಲೆನ್ಸ್ ಶೀಟ್‌ಗಳು ಭೂಮಿ ಮಾರಾಟದ ಮುಂಗಡ ಮತ್ತು 36 ಕೋಟಿ ರು.ನಿಂದ 48 ಕೋಟಿ ರು.ವರೆಗಿನ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ನಿರಂತರವಾಗಿ ಬಹಿರಂಗಪಡಿಸಿವೆ ಎಂದು ಗಮನಿಸಿದೆ. ಅನಧಿಕೃತ ಮತ್ತು ಅತಿಯಾದ ಟೋಲ್ ಸಂಗ್ರಹ ಗಮನಾರ್ಹ ಆದಾಯದ ಮೂಲಗಳಾಗಿವೆ. ಲಿಂಕ್ ರಸ್ತೆ ಮತ್ತು ಪೆರಿಫೆರಲ್ ರಸ್ತೆಯ ಪೂರ್ಣಗೊಂಡ ಭಾಗಗಳನ್ನು ಕಂಪನಿಯ ಹಣಕಾಸು ಹೇಳಿಕೆಗಳಲ್ಲಿ ಆಸ್ತಿಗಳಾಗಿ ಬಂಡವಾಳೀಕರಣ ಮಾಡಲಾಗಿದೆ. ಇದು ಕಾನೂನು ಮತ್ತು ಸಂವಿಧಾನಕ್ಕೆ ಮಾಡಿದ ವಂಚನೆ ಎಂದು ದೇವೇಗೌಡರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು.

ನೈಸ್‌ ಸಂಸ್ಥೆ ಲಾಭ ಗಳಿಸಲು ಸರ್ಕಾರವೇ ಅವಕಾಶ:

ಈ ಯೋಜನೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಥವಾ ಸಾರ್ವಜನಿಕ ಉದ್ದೇಶ ಪೂರೈಸಿಲ್ಲ ಮತ್ತು ಯೋಜನೆಯ ಪ್ರವರ್ತಕರ ಖಾಸಗಿ ಹಿತಾಸಕ್ತಿಗಳನ್ನು ಮಾತ್ರ ಪೂರೈಸಿದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ನ್ಯಾಯಾಲಯವು ಕಂಪನಿಯ ಖಾತೆಗಳ ವಿಧಿವಿಜ್ಞಾನ ಲೆಕ್ಕಪರಿಶೋಧನೆ ಮಾಡಬೇಕು ಎಂದೂ ಹೇಳಿದೆ, ಆದರೆ ರಾಜ್ಯ ಸರ್ಕಾರವೇ ಯೋಜನೆಯ ಪ್ರತಿಪಾದಕರಿಗೆ ತನ್ನ ಆಸ್ತಿಗಳನ್ನು ಬಂಡವಾಳೀಕರಣ ಮಾಡುವ ಮೂಲಕ ಅಕ್ರಮವಾಗಿ ಭಾರೀ ಲಾಭ ಗಳಿಸಲು ಅವಕಾಶ ನೀಡುವಲ್ಲಿ ಸಹಕಾರ ನೀಡುತ್ತಿದೆ ಎಂದು ನ್ಯಾಯಾಲಯವೇ ಅನುಮಾನ ವ್ಯಕ್ತಪಡಿಸಿದೆ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು.

ನೈಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ.

- ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ