Jalebi Recipe: ಮೈದಾ ಹಿಟ್ಟಿನಿಂದ ತಯಾರಿಸಿದ ಜಲೇಬಿ ತಿನ್ನುವುದನ್ನು ಅವಾಯ್ಡ್ ಮಾಡುತ್ತಿದ್ದರೆ, ಆಲೂಗಡ್ಡೆಯಿಂದ ತಯಾರಿಸಿದ ಜಿಲೇಬಿ ಒಂದ್ಸಲ ತಿಂದು ನೋಡಿ. ಇದರ ವಿಶೇಷತೆಯೆಂದರೆ, ಆಲೂಗಡ್ಡೆಯಿಂದ ತಯಾರಿಸಿದರೂ ಈ ಜಲೇಬಿಗಳು ಗರಿಗರಿಯಾಗಿರುತ್ತೆ. ಹೇಗೆ ಮಾಡೋದು ನೋಡಿ.
ನಿಮಗೂ ಜಿಲೇಬಿ ಅಂದ್ರೆ ಇಷ್ಟವೇ?
'ಜಲೇಬಿ'ಯ ಹೆಸರನ್ನು ಕೇಳಿದರೇನೇ ಬಾಯಲ್ಲಿ ನೀರೂರುತ್ತೆ ಅಲ್ವಾ?. ಹೊರಭಾಗದಲ್ಲಿ ಕ್ರಿಸ್ಪಿಯಾಗಿ, ಒಳಗೆ ಸಿಹಿಯಾದ ಪಾಕವನ್ನು ತುಂಬಿಕೊಂಡಿರುವ ಜಲೇಬಿ ಭಾರತದ ಅತ್ಯಂತ ಜನಪ್ರಿಯ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಹಬ್ಬಹರಿದಿನಗಳು ಮತ್ತು ವಿಶೇಷ ಸಂದರ್ಭಗಳ ಸಂಭ್ರಮಾಚರಣೆಯಲ್ಲಿ ಇದನ್ನು ತಪ್ಪದೆ ಸೇರಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಜಲೇಬಿಯನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುವುದರಿಂದ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಜನ ತಿನ್ನುವುದಿಲ್ಲ.
ಆಲೂಗಡ್ಡೆ ಜಿಲೇಬಿ ತಿಂದಿದ್ದೀರಾ?
ನೀವು ವಿಶಿಷ್ಟ ಮತ್ತು ರುಚಿಕರವಾದ ಜಿಲೇಬಿ ಟ್ರೈ ಮಾಡಲು ಬಯಸುತ್ತಿದ್ದರೆ, ಬೇಯಿಸಿದ ಆಲೂಗಡ್ಡೆಯಿಂದ ತಯಾರಿಸಿದ ಜಿಲೇಬಿ ಬೆಸ್ಟ್ ಆಯ್ಕೆ. ಈ ತಿನಿಸನ್ನು ತಯಾರಿಸುವುದು ಸುಲಭ ಮತ್ತು ಇದಕ್ಕೆ ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಸಾಮಗ್ರಿಗಳನ್ನೇ ಬಳಸಲಾಗುತ್ತದೆ. ಹೊರಗಡೆ ಕ್ರಿಸ್ಪಿ, ಒಳಗಡೆ ಪಾಕ ತುಂಬಿದ ಆಲೂಗಡ್ಡೆ ಜಲೇಬಿ ತಯಾರಿಸುವುದು ಹೇಗೆ ನೋಡೋಣ.
ಆಲೂಗಡ್ಡೆ ಜಿಲೇಬಿ ಮಾಡುವ ವಿಧಾನ
- ಬೇಕಾಗುವ ಸಾಮಗ್ರಿಗಳು
- 2 ಮಧ್ಯಮ ಗಾತ್ರದ ಬೇಯಿಸಿದ ಆಲೂಗಡ್ಡೆ
- 1/2 ಕಪ್ ಮೈದಾ ಹಿಟ್ಟು
- 2 ದೊಡ್ಡ ಚಮಚ ಕಾರ್ನ್ ಫ್ಲೋರ್ ಅಥವಾ ಅಕ್ಕಿ ಹಿಟ್ಟು
- 2 ದೊಡ್ಡ ಚಮಚ ಮೊಸರು
- ಒಂದು ಚಿಟಿಕೆ ಅಡುಗೆ ಸೋಡಾ
- ಅಗತ್ಯವಿರುವಷ್ಟು ನೀರು
- 1 ಕಪ್ ಸಕ್ಕರೆ
- 1 ಕಪ್ ನೀರು (ಪಾಕಕ್ಕಾಗಿ)
- ಸ್ವಲ್ಪ ಕೇಸರಿ ಅಥವಾ ಆಹಾರದ ಬಣ್ಣ (ಐಚ್ಛಿಕ)
- ಕರಿಯಲು ತುಪ್ಪ ಅಥವಾ ಎಣ್ಣೆ
ತಯಾರಿಸುವ ವಿಧಾನ
- ಮೊದಲಿಗೆ, ಸಕ್ಕರೆ ಪಾಕ ತಯಾರಿಸಿ. ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಸೇರಿಸಿ ಕುದಿಯಲು ಇಡಿ. ಸಕ್ಕರೆ ಸಂಪೂರ್ಣವಾಗಿ ಕರಗಿ, ಪಾಕವು ಸ್ವಲ್ಪ ಜಿಗುಟಾದ ಹದಕ್ಕೆ ಬಂದ ನಂತರ ಉರಿಯನ್ನು ಆಫ್ ಮಾಡಿ. ಬೇಕಿದ್ದರೆ, ನೀವು ಈ ಪಾಕಕ್ಕೆ ಕೇಸರಿ ಅಥವಾ ಏಲಕ್ಕಿ ಪುಡಿಯನ್ನು ಸೇರಿಸಬಹುದು.
- ನಂತರ, ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ; ಅದರಲ್ಲಿ ಗಂಟುಗಳಿಲ್ಲದಂತೆ ನೋಡಿಕೊಳ್ಳಿ. ಇದಕ್ಕೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಮತ್ತು ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ, ದಪ್ಪ ಹಾಗೂ ನಯವಾದ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿಕೊಳ್ಳಿ.
- ಜಲೇಬಿ ಕರಿಯುವ ಸ್ವಲ್ಪ ಮೊದಲು, ಹಿಟ್ಟಿಗೆ ಅಡುಗೆ ಸೋಡಾ ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು 'ಸ್ಕ್ವೀಝ್ ಬಾಟಲ್' ಅಥವಾ 'ಪೈಪಿಂಗ್ ಬ್ಯಾಗ್'ಗೆ ವರ್ಗಾಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ.
- ಮಧ್ಯಮ ಉರಿಯಲ್ಲಿ ಹಿಟ್ಟನ್ನು ಸುರುಳಿಯಾಕಾರದಲ್ಲಿ ಬಿಡುತ್ತಾ ಜಲೇಬಿಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.
- ಕರಿದ ಬಿಸಿ ಜಲೇಬಿಗಳನ್ನು ತಕ್ಷಣವೇ ಬೆಚ್ಚಗಿನ ಸಕ್ಕರೆ ಪಾಕದಲ್ಲಿ ಅದ್ದಿ, 1 ರಿಂದ 2 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ, ಅವುಗಳನ್ನು ಪಾಕದಿಂದ ಹೊರತೆಗೆದು ಸರ್ವ್ ಮಾಡಿ.
ನೆನಪಿಡಬೇಕಾದ ಪ್ರಮುಖ ಅಂಶಗಳು:
ಹಿಟ್ಟಿನಲ್ಲಿ ಗಂಟುಗಳಿಲ್ಲದಂತೆ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ. ಜಲೇಬಿಗಳು ಚೆನ್ನಾಗಿ ಮತ್ತು ಗರಿಗರಿಯಾಗಿ ಬರಲು ಎಣ್ಣೆ ಅಥವಾ ತುಪ್ಪವನ್ನು ಮಧ್ಯಮ ಉಷ್ಣತೆಯಲ್ಲಿ ಕಾಯಿಸಿ. ಸಕ್ಕರೆ ಪಾಕವು ಅತಿಯಾದ ಬಿಸಿಯೂ ಅಥವಾ ತಣ್ಣಗೂ ಇರಬಾರದು; ಸ್ವಲ್ಪ ಬೆಚ್ಚಗಿರುವ ಪಾಕದಲ್ಲಿ ಜಲೇಬಿಗಳನ್ನು ಹಾಕುವುದರಿಂದ ಅವುಗಳ ರುಚಿ ಹೆಚ್ಚುತ್ತದೆ.


