Idli rava kadubu: ಬೆಳಗಿನ ಉಪಾಹಾರಕ್ಕೆ ಅಕ್ಕಿ ನೆನೆಸುವ, ಹಿಟ್ಟು ರುಬ್ಬುವ ಸಮಯವಿಲ್ಲದಿದ್ದಾಗ ಕೇವಲ 15 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದಾದ ಹೆಲ್ತಿ ಬ್ರೇಕ್‌ಫಾಸ್ಟ್ ಇದು. ತರಕಾರಿ ಮತ್ತು ಸೊಪ್ಪಿನ ಪೌಷ್ಟಿಕಾಂಶವಿರುವ ಕಡುಬು ಹಾಗೂ ಅದಕ್ಕೆ ಹೊಂದುವಂತಹ ಘಮಘಮಿಸುವ ಕೆಂಪು ಚಟ್ನಿ ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ.
ಅಕ್ಕಿ ನೆನೆಸುವ, ರುಬ್ಬುವ ಜಂಜಾಟವಿಲ್ಲದೆ ಕೇವಲ 15-20 ನಿಮಿಷಗಳಲ್ಲಿ ಮಾಡಬಹುದಾದ ಆರೋಗ್ಯಕರ ತರಕಾರಿ ಮತ್ತು ಸೊಪ್ಪಿನ ಕಡುಬು ಹಾಗೂ ಅದಕ್ಕೆ ಹೇಳಿಮಾಡಿಸಿದ ಕೆಂಪು ಚಟ್ನಿ ಮಾಡುವ ಸರಳ ವಿಧಾನ ಇಲ್ಲಿದೆ..
ಬೇಕಾಗುವ ಸಾಮಗ್ರಿಗಳು
ಕಡುಬು ಮಾಡಲು
ಇಡ್ಲಿ ರವೆ: 2 ಕಪ್ (ಇಡ್ಲಿ ರವೆ ಇಲ್ಲದಿದ್ದರೆ ದೋಸೆ ಅಕ್ಕಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಬಹುದು)
ನೀರು: 3 ಕಪ್ (1 ಕಪ್ ರವೆಗೆ 1½ ಕಪ್ ನೀರು)
ತರಕಾರಿಗಳು: ಕ್ಯಾರೆಟ್, ಬೀನ್ಸ್, ಈರುಳ್ಳಿ (ಸಣ್ಣದಾಗಿ ಹೆಚ್ಚಿದ್ದು)
ನುಗ್ಗೆ ಸೊಪ್ಪು ಅಥವಾ ಸಬ್ಬಸಿಗೆ ಸೊಪ್ಪು-ಸ್ವಲ್ಪ
ಒಗ್ಗರಣೆಗೆ: ಎಣ್ಣೆ – 2 ಚಮಚ, ಸಾಸಿವೆ – ½ ಚಮಚ, ಕಡಲೆಬೇಳೆ – 1 ಚಮಚ, ಉದ್ದಿನಬೇಳೆ – 1 ಚಮಚ, ಸಣ್ಣಗೆ ಹೆಚ್ಚಿದ ಶುಂಠಿ – ಸ್ವಲ್ಪ, ಕರಿಬೇವು, ಒಣಮೆಣಸಿನಕಾಯಿ – 2
ಇತರ: ತೆಂಗಿನಕಾಯಿ ತುರಿ – 2-3 ಚಮಚ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು
ಕೆಂಪು ಚಟ್ನಿಗೆ
ಒಣಮೆಣಸಿನಕಾಯಿ – 5 ರಿಂದ 6 (ಎಣ್ಣೆಯಲ್ಲಿ ಹುರಿದಿದ್ದು)
ತೆಂಗಿನಕಾಯಿ ತುರಿ – ½ ಕಪ್
ಹುಣಸೆಹಣ್ಣು – ಸಣ್ಣ ಗೋಲಿ ಗಾತ್ರದ್ದು
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು ಮತ್ತು ಸಣ್ಣದಾಗಿ ಹೆಚ್ಚಿದ ಈರುಳ್ಳಿ (ಅರ್ಧ ಕಪ್)
ಮಾಡುವ ಹಂತ-ಹಂತದ ವಿಧಾನ
ಹಂತ 1: ರವೆ ನೆನೆಸಿ ತರಕಾರಿ ಬೇಯಿಸಿಕೊಳ್ಳಿ
ಇಡ್ಲಿ ರವೆಗೆ ನೀರು ಹಾಕಿ 5 ನಿಮಿಷ ನೆನೆಯಲು ಬಿಡಿ. ನಂತರ ಚೆನ್ನಾಗಿ ತೊಳೆದು, ನೀರನ್ನೆಲ್ಲಾ ಗಟ್ಟಿಯಾಗಿ ಹಿಂಡಿ ರವೆಯನ್ನು ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಕಾಯಿಸಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ನಂತರ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಹುರಿದು, ಹೆಚ್ಚಿದ ಈರುಳ್ಳಿ, ಕ್ಯಾರೆಟ್ ಮತ್ತು ಬೀನ್ಸ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಲಘುವಾಗಿ ಬಾಡಿಸಿ.
ಹಂತ 2: ರವೆ ಬೇಯಿಸಿ ಹಿಟ್ಟು ಸಿದ್ಧಪಡಿಸಿಕೊಳ್ಳಿ
ಬಾಡಿಸಿದ ತರಕಾರಿಗೆ 3 ಕಪ್ ನೀರು, ನುಗ್ಗೆ ಸೊಪ್ಪು ಅಥವಾ ಸಬ್ಬಸಿಗೆ ಸೊಪ್ಪು, ತೆಂಗಿನತುರಿ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರನ್ನು ಚೆನ್ನಾಗಿ ಕುದಿಯಲು ಬಿಡಿ.
ನೀರು ಕುದಿಯಲು ಆರಂಭಿಸಿದಾಗ, ಹಿಂಡಿಟ್ಟಿರುವ ಇಡ್ಲಿ ರವೆಯನ್ನು ಹಾಕಿ ಚೆನ್ನಾಗಿ ತಿರುವಿ.
ಉಪ್ಪಿಟ್ಟಿನಂತೆ ನೀರೆಲ್ಲಾ ಆರಿ ಗಟ್ಟಿಯಾಗುವವರೆಗೆ (3-4 ನಿಮಿಷ) ಬೇಯಿಸಿ, ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ (ಹಿಟ್ಟು ಸಂಪೂರ್ಣ ತಣ್ಣಗಾಗಬೇಕು).
ಹಂತ 3: ಕೆಂಪು ಚಟ್ನಿ ತಯಾರಿಸಿಟ್ಟುಕೊಳ್ಳಿ
ಮಿಕ್ಸಿ ಜಾರಿಗೆ ಹುರಿದ ಒಣಮೆಣಸಿನಕಾಯಿ, ತೆಂಗಿನತುರಿ, ಹುಣಸೆಹಣ್ಣು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ.
ಒಗ್ಗರಣೆ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಕರಿಬೇವು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ, ಈರುಳ್ಳಿ ತಿಳಿ ಕಂದು ಬಣ್ಣ ಬರುವವರೆಗೆ ಹುರಿದು ಚಟ್ನಿಗೆ ಸೇರಿಸಿ ಮಿಕ್ಸ್ ಮಾಡಿ.
ಹಂತ 4: ಕಡುಬು ಶೇಪ್ ಮಾಡಿ ಆವಿಯಲ್ಲಿ ಬೇಯಿಸಿ
ತಣ್ಣಗಾದ ರವೆಯ ಹಿಟ್ಟನ್ನು ಕೈಗೆ ಸ್ವಲ್ಪ ನೀರು ಸವರಿಕೊಂಡು ನಾದಿಕೊಳ್ಳಿ.
ಸಣ್ಣ ಉಂಡೆಗಳನ್ನು ಮಾಡಿ, ಕೈಯಲ್ಲೇ ಓವಲ್ (Oval) ಆಕಾರಕ್ಕೆ ತಟ್ಟಿ, ಬೆರಳಿನಿಂದ ಮಧ್ಯದಲ್ಲಿ ಲಘುವಾಗಿ ಪ್ರೆಸ್ ಮಾಡಿ (ಅಥವಾ ವಡೆ/ಉಂಡೆ ಆಕಾರದಲ್ಲೂ ಮಾಡಬಹುದು).
ಇಡ್ಲಿ ಪಾತ್ರೆ ಅಥವಾ ಸ್ಟೀಮರ್‌ನಲ್ಲಿ ನೀರು ಕಾಯಲು ಇಟ್ಟು, ಈ ಕಡುಬುಗಳನ್ನು ಇಡ್ಲಿ ತಟ್ಟೆಯಲ್ಲಿಟ್ಟು ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಆವಿಯಲ್ಲಿ (Steam) ಬೇಯಿಸಿ.
ಬಿಸಿಬಿಸಿ ಸೊಪ್ಪಿನ ಕಡುಬಿನ ಮೇಲೆ ಸ್ವಲ್ಪ ತುಪ್ಪ ಹಾಕಿ, ಈರುಳ್ಳಿ ಒಗ್ಗರಣೆಯ ಕೆಂಪು ಚಟ್ನಿಯೊಂದಿಗೆ ತಿಂದರೆ ರುಚಿ ಅದ್ಭುತವಾಗಿರುತ್ತದೆ!
ಎರಡು ಮುಖ್ಯ ಟಿಪ್ಸ್
ನೀರಿನ ಅಳತೆ ಸರಿಯಾಗಿರಲಿ: 1 ಕಪ್ ರವೆಗೆ 1½ ಕಪ್ ನೀರು ಮಾತ್ರ ಬಳಸಬೇಕು. ನೀರು ಹೆಚ್ಚಾದರೆ ಹಿಟ್ಟು ಮುದ್ದೆಯಾಗಿ, ಆವಿಯಲ್ಲಿ ಬೇಯಿಸುವಾಗ ಕೈಗೆ ಅಂಟಿಕೊಳ್ಳುತ್ತದೆ.
ಹಿಟ್ಟು ತಣ್ಣಗಾದ ಮೇಲೆಯೇ ಶೇಪ್ ಮಾಡಿ: ಹಿಟ್ಟು ಸಂಪೂರ್ಣವಾಗಿ ತಣ್ಣಗಾದ ನಂತರವೇ ಕಡುಬಿನ ಆಕಾರ ನೀಡಬೇಕು. ಬಿಸಿ ಇರುವಾಗ ಮಾಡಿದರೆ ಸರಿಯಾದ ಆಕಾರ ಬರುವುದಿಲ್ಲ.