ರಾಷ್ಟ್ರೀಯ ಪೋಷಕಾಂಶ ಸಪ್ತಾಹದ ಹೊತ್ತಿನಲ್ಲಿ, ಯೀಸ್ಟ್‌ನಿಂದ ತಯಾರಿಸಿದ ಪ್ರೊಟೀನ್ ಬಗ್ಗೆ ಚರ್ಚೆ ಶುರುವಾಗಿದೆ. ಯಾವುದೇ ರುಚಿ ಇಲ್ಲದ, ಸುಲಭವಾಗಿ ಕರಗುವ ಈ ಹೊಸ ಬಗೆಯ ಪ್ರೊಟೀನ್, ನಮ್ಮ ದೈನಂದಿನ ಆಹಾರ ಪದ್ಧತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಪ್ರೊಟೀನ್ ಎಂದ ತಕ್ಷಣ ನಮ್ಮ ಕಣ್ಣಮುಂದೆ ಬರುವುದು ಜಿಮ್‌ನಲ್ಲಿ ಬೆವರು ಇಳಿಸ್ತಾ ಕಟ್ಟುಮಸ್ತಾದ ದೇಹದ ಯುವಕನೋರ್ವ ಕುಡಿಯುವ ಪ್ರೊಟೀನ್ ಶೇಕ್‌ಗಳು, ದುಬಾರಿ ಪ್ರೊಟೀನ್ ಬಾರ್‌ಗಳು. ಆದರೆ, ಇನ್ಮುಂದೆ ನಮ್ಮ ದಿನನಿತ್ಯದ ಊಟ, ತಿಂಡಿಯಲ್ಲೇ ಸುಲಭವಾಗಿ ಪ್ರೊಟೀನ್ ಸೇರಿಸಿಕೊಳ್ಳುವ ಕಾಲ ಬಹುಶಃ ದೂರವಿಲ್ಲ. ರಾಷ್ಟ್ರೀಯ ಪೋಷಕಾಂಶ ಸಪ್ತಾಹ ಆಚರಣೆಯ ಈ ಸಂದರ್ಭದಲ್ಲಿ, 'ಯೀಸ್ಟ್ ಪ್ರೊಟೀನ್' ಎಂಬ ಹೊಸ ತಂತ್ರಜ್ಞಾನವು ಆಹಾರ ಉದ್ಯಮದಲ್ಲಿ ಸದ್ದಿಲ್ಲದೆ ಸಂಚಲನ ಸೃಷ್ಟಿಸುತ್ತಿದೆ. ಅದೇನೆಂದು ಈ ಲೇಖನದಲ್ಲಿ ತಿಳಿಯೋಣ.
ಪ್ರೊಟೀನ್ ಅಂದ್ರೆ ಕೆಲವರ ಸ್ವತ್ತಲ್ಲ
ಈ ತಂತ್ರಜ್ಞಾನವು ಪ್ರೊಟೀನ್ ಅನ್ನು ಕೆಲವರಿಗಷ್ಟೇ ಸೀಮಿತವಾದ ಪೂರಕಾಂಶ ಎನ್ನುವ ಕಲ್ಪನೆಯನ್ನ ಬ್ರೇಕ್ ಮಾಡಿದೆ. ಅಷ್ಟೇ ಅಲ್ಲದೆ ಅದನ್ನು ಎಲ್ಲರ ಅಡುಗೆಮನೆಗೂ ತಲುಪಿಸುವ ಗುರಿ ಹೊಂದಿದೆ. ಸದ್ಯ ಗ್ರಾಹಕರು ಕೇವಲ ಸ್ನಾಯುಗಳ ಬೆಳವಣಿಗೆಗೆ ಮಾತ್ರವಲ್ಲ, ಶಕ್ತಿ, ಆರೋಗ್ಯ ಮತ್ತು ಹೊಟ್ಟೆ ತುಂಬಿದ ಅನುಭವಕ್ಕಾಗಿಯೂ ಪ್ರೊಟೀನ್ ಬಯಸುತ್ತಿದ್ದಾರೆ. ಈ ಬದಲಾದ ಬೇಡಿಕೆಗೆ ಯೀಸ್ಟ್ ಪ್ರೊಟೀನ್ ಉತ್ತರವಾಗಬಲ್ಲದು ಎನ್ನಲಾಗುತ್ತಿದೆ.
ಏನಿದು ಯೀಸ್ಟ್ ಪ್ರೊಟೀನ್?
ಯೀಸ್ಟ್ ಪ್ರೊಟೀನ್ ಒಂದು 'ಸಂಪೂರ್ಣ ಪ್ರೊಟೀನ್' ಆಗಿದ್ದು, ಮಾನವನ ದೇಹಕ್ಕೆ ಅಗತ್ಯವಿರುವ ಎಲ್ಲಾ ಒಂಬತ್ತು ಅಮೈನೋ ಆಮ್ಲಗಳನ್ನು ಇದು ಒಳಗೊಂಡಿದೆ. ಇದನ್ನು ಫರ್ಮೆಂಟೇಶನ್ ಅಥವಾ ಹುದುಗುವಿಕೆ ಪ್ರಕ್ರಿಯೆಯ ಮೂಲಕ ತಯಾರಿಸಲಾಗುತ್ತದೆ. ನಿರ್ದಿಷ್ಟ ಯೀಸ್ಟ್ ತಳಿಗೆ ಸಕ್ಕರೆಯನ್ನು ಆಹಾರವಾಗಿ ನೀಡಿ, ಅದನ್ನು ದೊಡ್ಡ ಟ್ಯಾಂಕ್‌ಗಳಲ್ಲಿ ಬೆಳೆಸಿ, ನಂತರ ಅದರಿಂದ ಪ್ರೊಟೀನ್ ಅನ್ನು ಬೇರ್ಪಡಿಸಲಾಗುತ್ತದೆ.
ಇದರ ಅತಿ ದೊಡ್ಡ ವಿಶೇಷತೆಯೆಂದರೆ, ಇದಕ್ಕೆ ತನ್ನದೇ ಆದ ಯಾವುದೇ ರುಚಿ ಅಥವಾ ವಾಸನೆ ಇರುವುದಿಲ್ಲ. ಉದಾಹರಣೆಗೆ, 'Everpro' ಎಂಬ ಯೀಸ್ಟ್ ಪ್ರೊಟೀನ್ ಸಂಪೂರ್ಣವಾಗಿ ನೀರಿನಲ್ಲಿ ಕರಗುತ್ತದೆ. ಈ ಗುಣದಿಂದಾಗಿ ಇದನ್ನು ಯಾವುದೇ ಆಹಾರ ಅಥವಾ ಪಾನೀಯಕ್ಕೆ ಸೇರಿಸಿದರೂ, ಅದರ ಮೂಲ ರುಚಿ ಮತ್ತು ಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ. ಇದು ನಿಜಕ್ಕೂ ಒಂದು ಗೇಮ್ ಚೇಂಜರ್.
ಸದ್ಯದ ಮಾರುಕಟ್ಟೆ ಸವಾಲುಗಳಿಗೆ ಪರಿಹಾರ
ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಸ್ಯ ಆಧಾರಿತ ಪ್ರೊಟೀನ್‌ಗಳು (Plant-based proteins) ಹಲವು ಬಾರಿ ಒಗರು ಅಥವಾ ಕಹಿ ರುಚಿಯನ್ನು ಹೊಂದಿರುತ್ತವೆ. ಇನ್ನೊಂದೆಡೆ, ಹಾಲಿನ ಉತ್ಪನ್ನವಾದ 'whey' ಪ್ರೊಟೀನ್, ಸಸ್ಯಾಹಾರಿಗಳಿಗೆ (vegans) ಸೂಕ್ತವಲ್ಲ. ಯೀಸ್ಟ್ ಪ್ರೊಟೀನ್ ಈ ಎರಡೂ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ, ಏಕೆಂದರೆ ಇದು ಪ್ರಾಣಿಜನ್ಯವಲ್ಲದ, ಸಂಪೂರ್ಣ ಸಸ್ಯಾಹಾರಿ ಉತ್ಪನ್ನವಾಗಿದೆ.
ತಜ್ಞರ ಪ್ರಕಾರ, ಈ ತಂತ್ರಜ್ಞಾನವು ಪ್ರೊಟೀನ್ ಅನ್ನು ಪ್ರತಿಯೊಬ್ಬರಿಗೂ ತಲುಪಿಸುವ ಗುರಿ ಹೊಂದಿದೆ. ಅಂದರೆ, ದುಬಾರಿ ಬಾರ್, ಪ್ರೋಟಿನ್ ಶೇಕ್ ಬದಲಿಗೆ ಸಾಮಾನ್ಯ ಜನರು ಬಳಸುವ ಹಾಲು, ಪಾನೀಯಗಳು, ಬ್ರೆಡ್, ಪಾಸ್ತಾ, ಚಪಾತಿ, ಬೇಕರಿ ತಿಂಡಿಗಳಲ್ಲೇ ಹೆಚ್ಚಿನ ಪ್ರೊಟೀನ್ ಸಿಗಲು ಸಾಧ್ಯವಾಗುತ್ತದೆ. ಅಲ್ಲದೆ ಪ್ರಾಣಿಜನ್ಯ ಪ್ರೊಟೀನ್‌ಗೆ ಹೋಲಿಸಿದರೆ ಇದರ ಉತ್ಪಾದನೆಯು ಪರಿಸರಸ್ನೇಹಿಯಾಗಿದೆ.
