ದೇಶದೆಲ್ಲೆಡೆ ಗೌರಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಮೋದಕ ಪ್ರಿಯ ಗಣಪನಿಗೆ ಬಗೆ ಬಗೆಯ ಮೋದಕ ಅರ್ಪಿಸುವುದು ಸಾಮಾನ್ಯ. ಇದೀಗ ಬಲು ದುಬಾರಿ ಮೋದಕವೊಂದು ರೆಡಿಯಾಗಿದೆ. ಇದು ಚಿನ್ನ ಲೇಪಿತ ಮೋದಕ. ಇದರ ಬೆಲೆ ಎಷ್ಟು?

ನಾಸಿಕ್ (ಸೆ.14) ಕರ್ನಾಟಕ ಸೇರಿದಂತೆ ದೇಶಾದ್ಯಂತ ಗೌರಿ ಗಣೇಶ ಹಬ್ಬ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಗಣಪನಿಗೆ ಬಗೆ ಬಗೆಯ ಮೋದಕದ ನೈವೇದ್ಯ ಅರ್ಪಿಸಲಾಗುತ್ತದೆ. ಗಣೇಶ ಚತುರ್ಥಿಯಲ್ಲಿ ಮೋದಕವೇ ಸೆಂಟರ್ ಆಫ್ ಅಟ್ರಾಕ್ಷನ್. ವಿಶೇಷ ಬಗೆಯ ಮೋದಕ ತಯಾರಿಸಿ ಗಣಪನಿಗೆ ಅರ್ಪಿಸುತ್ತಾರೆ. ಇದೀಗ ಬೇಕರಿಯೊಂದು ಬಲು ದುಬಾರಿ ಹಾಗೂ ವಿಶೇಷ ಮೋದಕ ತಯಾರಿಸಿದೆ. ಈ ಮೋದಕ ಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಹಲವರು ಮೋದಕದ ಬೆಲೆ ಕೇಳಿ ಅಚ್ಚರಿಗೊಂಡಿದ್ದಾರೆ.

ಚಿನ್ನ ಲೇಪಿತ ಮೋದಕದ ಬೆಲೆ ಎಷ್ಟು?

ನಾಸಿಕ್‌ನ ಸಾಗರ್ ಬೇಕರಿ ಈ ಚಿನ್ನ ಲೇಪಿತ ಮೋದಕ ತಯಾರಿಸಿದೆ. ಈ ವಿಶೇಷ ಮೋದಕದ ಬೆಲೆ ಪ್ರತಿ ಕೆಜಿಗೆ 27 ಸಾವಿರ ರೂಪಾಯಿ. ಪ್ರತಿ ವರ್ಷ ಗಣೇಶ ಹಬ್ಬಕ್ಕೆ ಸಾಗರ್ ಬೇಕರಿ ಚಿನ್ನ ಲೇಪಿತ ಮೋದಕ ತಯಾರಿಸುತ್ತದೆ. ವಿಶೇಷ ಅಂದರೆ ಪ್ರತಿ ವರ್ಷ ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಕಾರಣ ವರ್ಷದಿಂದ ವರ್ಷಕ್ಕೆ ಮೋದಕ ಬೆಲೆ 5 ರಿಂದ 10 ಸಾವಿರ ರೂಪಾಯಿವರೆಗೆ ಏರಿಕೆಯಾಗುತ್ತಿದೆ. ಕಳೆದ ವರ್ಷ ಕೆಜಿಗೆ 20 ಸಾವಿರ ರೂಪಾಯಿ ಇದ್ದ ಈ ವಿಶೇಷ ಮೋದಕ ಬೆಲೆ ಇದೀಗ 27,000 ರೂಪಾಯಿಗೆ ಏರಿಕೆಯಾಗಿದೆ.

ವಿಶೇಷ ಮೋದಕದಲ್ಲಿ ಬಳಸಿರು ಚಿನ್ನ ಸವಿಯಲು ಸಾಧ್ಯವಿದೆ. ಸ್ವೀಟ್ಸ್‌ಗಳ ಮೇಲೆ ಬಳಸುವ ಚಿನ್ನ, ಸಿಲ್ವರ್ ಲೇಪನ ಇದಾಗಿದೆ. ಆದರೆ ಉತ್ಕೃಷ್ಟ ಡ್ರೈಫ್ರೂಟ್ಸ್ ಸೇರಿದಂತೆ ನೈಸರ್ಗಿಕ ಸಾಮಾಗ್ರಿಗಳ ಬಳಸಿ ಚಿನ್ನ ಲೇಪಿತ ಮೋದಕ ಮಾಡಲಾಗಿದೆ. ಪ್ರತಿ ವರ್ಷ ಇಲ್ಲಿ ಚಿನ್ನ ಲೇಪಿತ ಮೋದಕ ಮಾಡುತ್ತಾರೆ. ವಿಶೇಷ ಅಂದರೆ ಪ್ರತಿ ವರ್ಷವೂ ಭಾರಿ ಬೇಡಿಕೆ ವ್ಯಕ್ತವಾಗುತ್ತದೆ. ಈ ಬಾರಿಯ ಬೇಡಿಕೆಗೆ ಅನಗುಣವಾಗಿ ಮೋದಕ ರೆಡಿ ಮಾಡಲಾಗಿದೆ.

ತಿನ್ನಬೇಕೋ, ಲಾಕರ್‌ನಲ್ಲಿ ಇಡಬೇಕೋ?

ಚಿನ್ನ ಲೇಪಿತ ಹಾಗೂ ದುಬಾರಿ ಮೋದಕದ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಹಲವರು ಈ ಮೋದಕವನ್ನು ಖರೀದಿಸಿ ತಿನ್ನಬೇಕೋ ಅಥವಾ ಲಾಕರ್‌ನಲ್ಲಿ ಇಡಬೇಕೋ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಹಲವರು ಈ ರೀತಿಯ ಪ್ರಚಾರ ಯಾಕೆ ಎಂದು ಪ್ರಶ್ನಿಸಿದ್ದಾರೆ. ಗಣಪನಿಗೆ ಅರ್ಪಿಸುವ ಮೋದಕ ಚಿನ್ನ ಲೇಪಿತ ಮಾಡಿದ್ದೀರಿ. ಹಾದಾರೆ ಚಿನ್ನ ಲೇಪಿತ ಸಮೋಸಾ, ಚಿನನ ಲೇಪಿತ ಪಾನಿ ಪೂರಿ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಗಣೇಶ ಚತುರ್ಥಿ ದಿನ ದೇವಸ್ಥಾನಗಳಲ್ಲಿ ಪ್ರಸಾದ, ಬೇಕರಿಗಳಲ್ಲಿ ವಿಶೇಷ ತಿಂಡಿಗಳನ್ನು ಮಾಡುತ್ತಾರೆ. ಕಳೆದ ವರ್ಷ 500 ಕೆಜಿ ತೂಕದ ಲಡ್ಡು ಮಾಡಿ ಗಣಪನಿಗೆ ಅರ್ಪಿಸಲಾಗಿತ್ತು. ಈ ಘಟನೆ ಕೂಡ ಭಾರಿ ವೈರಲ್ ಆಗಿತ್ತು. ಇದೀಗ ಚಿನ್ನ ಲೇಪಿತ ಮೋದಕ ಬಾರಿ ಟ್ರೆಂಡ್ ಆಗುತ್ತಿದೆ.