ಕನ್ನಡದ ಹಿರಿಯ ಹಾಸ್ಯ ನಟಿ ಎಂ.ಎನ್. ಲಕ್ಷ್ಮೀದೇವಿ ಅವರ ನಿಧನದ ಸುಳ್ಳು ಸುದ್ದಿಗೆ ಅವರ ಮೊಮ್ಮಗಳು ದೀಪಿಕಾ ಶರಣ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ ಎಂದು ವಿಡಿಯೋ ಮೂಲಕ ತಿಳಿಸಿದ್ದು, ಏಳು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಲಕ್ಷ್ಮೀದೇವಿ ಅವರ ಸಾಧನೆ ಮತ್ತು ಪ್ರಶಸ್ತಿಗಳ ಬಗ್ಗೆ ಲೇಖನವು ವಿವರಿಸುತ್ತದೆ.
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಗೂ ದಂತಕಥೆ ಹಾಸ್ಯ ನಟಿ ಎಂ.ಎನ್. ಲಕ್ಷ್ಮೀದೇವಿ ಅವರು ನಿಧನರಾಗಿದ್ದಾರೆ ಎಂಬ ಸುದ್ದಿಗೆ ಅವರ ಮೊಮ್ಮಗಳು ನಟಿ ದೀಪಿಕಾ ಶರಣ್ ಸ್ಪಷ್ಟನೆ ನೀಡಿದ್ದಾರೆ. ಎಂ.ಎನ್. ಲಕ್ಷ್ಮೀದೇವಿ ಅವರು ಆರಾಮವಾಗಿ ನಡೆದುಕೊಂಡು ಓಡಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಏಳು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಸಾವಿರಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಕಲಾಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಲಕ್ಷ್ಮಿ ಅವರಿಗೆ. ಇತ್ತೀಚೆಗಷ್ಟೇ (ಜುಲೈ 2026) ಇವರಿಗೆ ಪ್ರತಿಷ್ಠಿತ ‘ಸಾ.ರಾ.ಗೋವಿಂದು ಕನ್ನಡಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.
‘ಮೈಸೂರು ನರಸಿಂಹಾಚಾರ್ ಲಕ್ಷ್ಮೀದೇವಿ’ ಎಂಬುದು ಇವರ ಪೂರ್ಣ ಹೆಸರು. 1932 ರಲ್ಲಿ ಜನಿಸಿದ ಇವರು ಮೂಲತಃ ಚಿಂತಾಮಣಿಯವರಾದ ಇವರು ‘ಎಂ.ಎನ್. ಲಕ್ಷ್ಮೀದೇವಿ’ ಎಂದೇ ಜನಪ್ರಿಯರಾಗಿದ್ದರು. 1952ರಲ್ಲಿ ತೆರೆಕಂಡ 'ಶ್ರೀನಿವಾಸ ಕಲ್ಯಾಣ' ಚಿತ್ರದ ಮೂಲಕ ಅಭಿನಯ ಪಯಣ ಆರಂಭಿಸಿದ ಇವರು, ಕನ್ನಡ ಚಿತ್ರರಂಗದಲ್ಲಿ ಸತತ 74 ವರ್ಷಗಳಿಗೂ ನಟಿಸಿದ ಏಕೈಕ ಅಭಿನೇತ್ರಿ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜರಾದ ನರಸಿಂಹರಾಜು ಹಾಗೂ ಬಾಲಕೃಷ್ಣ ಅವರಂತಹ ಮಹಾನ್ ಕಲಾವಿದರೊಂದಿಗೆ ಸರಿಸಾಟಿಯಾಗಿ ನಟಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಕೀರ್ತಿ ಇವರದ್ದು. 'ರತ್ನಮಂಜರಿ' (1962) ಚಿತ್ರದಲ್ಲಿ ನರಸಿಂಹರಾಜು ಅವರೊಂದಿಗೆ ಇವರು ನಟಿಸಿದ "ಯಾರು ಯಾರು ನೀ ಯಾರು..." ಎಂಬ ಸದಾ ಹಸಿರಾದ ಹಾಡು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 'ಭಕ್ತ ಕನಕದಾಸ' (1960), 'ವೀರಕೇಸರಿ' (1963), 'ಬಂಗಾರದ ಮನುಷ್ಯ' (1972) ಸೇರಿದಂತೆ ನೂರಾರು ಸೂಪರ್‌ಹಿಟ್ ಚಿತ್ರಗಳಲ್ಲಿ ಇವರ ಅಭಿನಯ ಜನಮನ್ನಣೆ ಗಳಿಸಿದೆ.
ಬೆಳ್ಳಿಪರದೆಯಷ್ಟೇ ಅಲ್ಲದೆ, ಇತ್ತೀಚಿನ 'ಗೂಗ್ಲಿ', 'ರಾಜಾಹುಲಿ' ಸಿನಿಮಾಗಳು ಹಾಗೂ ಜೀ ಕನ್ನಡದ ಪ್ರಸಿದ್ಧ 'ಲಕ್ಷ್ಮಿ ನಿವಾಸ' ಧಾರಾವಾಹಿ ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ, ಕೊನೆಯವರೆಗೂ ಅಭಿನಯದ ಮೇಲಿನ ತಮ್ಮ ಒಲವನ್ನು ಕಾಯ್ದುಕೊಂಡಿದ್ದಾರೆ.
ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು:
2001-02: 'ಕಳ್ಳರ ಕಳ್ಳ' ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ಪೋಷಕ ನಟಿ’ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.
2006-07: ಕನ್ನಡ ಚಿತ್ರರಂಗಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಕರ್ನಾಟಕ ಸರ್ಕಾರದ ಗೌರವಾನ್ವಿತ 'ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ'.
ಜುಲೈ 2026: ಪ್ರತಿಷ್ಠಿತ 'ಸಾ.ರಾ.ಗೋವಿಂದು ಕನ್ನಡಶ್ರೀ ಪ್ರಶಸ್ತಿ'. ಸೇರಿದಂತೆ ಹಲವು ಪುರಸ್ಕಾರಗಳು ಇವರ ಮಡಿಲು ಸೇರಿವೆ.


