ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ. ಆದರೆ, ಅವರ ಅಭಿಮಾನಿಗಳು ಕೂಡ ನಟಿಯರಿಗೆ ಅಶ್ಲೀಲ ಕಾಮೆಂಟ್ ಮಾಡುವುದು, ನಟರಿಗೆ ಕಿರುಕುಳ ನೀಡುವ ಮೂಲಕ ಜೈಲು ಸೇರುತ್ತಿದ್ದಾರೆ. ಇದೀಗ ಜೈಲಿನ ವಿಚಾರಕ್ಕೆ ದರ್ಶನ್‌ನ ಮತ್ತೊಬ್ಬ ಅಭಿಮಾನಿ ಜೈಲು ಸೇರುವ ಪರಿಸ್ಥಿತಿ ತಂದುಕೊಂಡಿದ್ದಾನೆ.

ಬೆಂಗಳೂರು (ಸೆ.08): ನಟ ದರ್ಶನ್ ಕುರಿತಾಗಿ ಸುಳ್ಳು ಸುದ್ದಿ ಹರಡಿದ ಆರೋಪದ ಹಿನ್ನೆಲೆಯಲ್ಲಿ ಮತ್ತೊಬ್ಬ ದರ್ಶನ್ ಅಭಿಮಾನಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬಾರಿ ಅಶ್ಲೀಲ ಕಾಮೆಂಟ್ ಮಾಡಿದ ಆರೋಪವಲ್ಲ, ಬದಲಾಗಿ ಜೈಲಿನ ಕುರಿತು ಸುಳ್ಳು ಮಾಹಿತಿ ಹರಡಿದ ಆರೋಪ ಕೇಳಿಬಂದಿದೆ.

Instagram ID ‘Kasnna12345’ ಖಾತೆಯಿಂದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಕೊಲೆ ಆರೋಪಿ ದರ್ಶನ್ ಪರಪ್ಪನ ಅಗ್ರಹಾರದ ಹೈ ಸೆಕ್ಯುರಿಟಿ ಜೈಲಿನಲ್ಲಿ ಇರುವುದಾಗಿ ಹೇಳಲಾಗಿದೆ ಎನ್ನಲಾಗಿದೆ. ಈ ವಿಡಿಯೋ ಗಮನಕ್ಕೆ ಬಂದ ಬಳಿಕ ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕ ಕೊಟ್ರೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅನಾಮಿಕ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಜೈಲು ಅಧಿಕಾರಿಗಳಿಂದ ಸ್ಪಷ್ಟನೆ:

ಜೈಲು ಅಧಿಕಾರಿಗಳ ದೂರಿನ ಪ್ರಕಾರ, ಹೈ ಸೆಕ್ಯುರಿಟಿ ಜೈಲು ನೂತನವಾಗಿ ನಿರ್ಮಾಣಗೊಂಡಿದ್ದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಅಲ್ಲದೆ, ಯಾವುದೇ ಬಂದಿಗಳನ್ನು ಅಲ್ಲಿ ದಾಖಲಿಸಲಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೀಗಿರುವಾಗ ಕಾರಾಗೃಹದ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿರುವ ‘Kasnna12345’ ಖಾತೆ ಹೊಂದಿರುವ ವ್ಯಕ್ತಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ದೂರು ದಾಖಲಾಗುತ್ತಿದ್ದಂತೆ ಸಂಬಂಧಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ. ಇದೀಗ ‘Kasnna12345’ ಖಾತೆ ನಿರ್ವಹಿಸುತ್ತಿರುವ ಅನಾಮಿಕ ವ್ಯಕ್ತಿಯನ್ನು ಪತ್ತೆಹಚ್ಚಲು ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.