'ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ಅವರು ಸಿಂಹಕ್ಕೆ ತರಬೇತಿ ನೀಡುವಾಗ ನಡೆದ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಾವು ಸುರಕ್ಷಿತವಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಈ ಲೇಖನವು ಅವರ ಸಮಾಜ ಸೇವೆ ಮತ್ತು ನಟನಾ ವೃತ್ತಿಜೀವನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
ಕರ್ಣ ಸೀರಿಯಲ್ (Karna Serial)ನಲ್ಲಿ ಕರ್ಣನಾಗಿ ಮಿಂಚುತ್ತಿರುವ ಕರ್ಣ ಉರ್ಫ್ ನಟ ಕಿರಣ್ ರಾಜ್ (Kiran Raj) ಸದ್ಯ ಸೀರಿಯಲ್ನಲ್ಲಿ ಹೊಸ ಜೀವನ ಶುರು ಮಾಡಿದ್ದಾರೆ. ಅಪ್ಪನ ಪ್ರೀತಿಯೂ ಸಿಕ್ಕಿದ್ದು, ರಿಯಲ್ ಅಮ್ಮ ಕಣ್ಣೆದುರು ಬರಬೇಕಿದೆ ಅಷ್ಟೇ. ಇಂತಿಪ್ಪ ಕಿರಣ್ ರಾಜ್ ಅವರು ಇದೀಗ ಶಾಕಿಂಗ್ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಸಫಾರಿಗೆ ಹೋದಾಗ, ಸಿಂಹವೊಂದು ದಾಳಿ ಮಾಡಿರುವ ವಿಡಿಯೋ ಇದಾಗಿದೆ. ಇದನ್ನು ನೋಡಿದ ಕಿರಣ್ ರಾಜ್ ಫ್ಯಾನ್ಸ್ ಗಾಬರಿಯಾಗಿ, ನಿಮಗೇನೂ ಆಗಿಲ್ಲ ತಾನೇ ಎಂದು ಪ್ರಶ್ನಿಸುತ್ತಿದ್ದಾರೆ.
ಈ ವಿಡಿಯೋ ಶೇರ್ ಮಾಡಿಕೊಂಡಿರುವ ನಟ ಕಿರಣ್ ರಾಜ್, ಇದು ಸಿಂಹಕ್ಕೆ ತರಬೇತಿ ನೀಡುವುದನ್ನು ಕಲಿತ ಮೊದಲ ದಿನ ಎಂದು ಬರೆದುಕೊಂಡಿದ್ದಾರೆ. ಅಲ್ಲಿ ಎರಡು ಸಿಂಹಗಳನ್ನು ನೋಡಬಹುದಾಗಿದೆ. ಈ ಸಿಂಹದ ಹೆಸರು ರೋಜರ್ ಮತ್ತು ರಾಕಿ ಎಂದಿರುವ ನಟ, ನಾವು ಶೀಘ್ರದಲ್ಲೇ ಸ್ನೇಹಿತರಾಗುತ್ತೇವೆ ಎಂದಿದ್ದಾರೆ. ಜೊತೆಗೆ, ಸಿಂಹದ ಜೊತೆ ಸ್ನೇಹ ಬೆಳೆಸಲು ಹೋದಾಗ ಕಲಿತಿರುವ ಪಾಠದ ಬಗ್ಗೆಯೂ ಅವರು ತಿಳಿಸಿದ್ದಾರೆ. ಸಿಂಹ ಯಾವಾಗಲೂ ನಿಮ್ಮನ್ನು ಬೀಳಿಸಲು ಪ್ರಯತ್ನಿಸುತ್ತದೆ, ಆದ್ದರಿಂದ ಯಾವಾಗಲೂ ಬಲವಾದ ಕಡೆಗೆ ವಾಲುತ್ತದೆ ಎಂದಿರುವ ಕಿರಣ್ ರಾಜ್, ದೂರ ಹೋದರೂ ಸಹ ಯಾವಾಗಲೂ ಸಿಂಹದ ಕಡೆಗೆ ಮುಖ ಇರಿಸಿ ಎಂದಿದ್ದಾರೆ. ಸಿಂಹಗಳು ನಿಮ್ಮ ಕಣ್ಣುಗಳನ್ನು ಓದಬಲ್ಲವು. ಅವು ನಿಮ್ಮನ್ನು ತಬ್ಬಿಕೊಳ್ಳಲು ಮತ್ತು ಅಪ್ಪಿಕೊಳ್ಳಲು ಇಷ್ಟಪಡುತ್ತವೆ ಎಂದಿರುವ ಕಿರಣ್ ರಾಜ್ ಅವರು ಸಿಂಹದ ಸ್ನೇಹ ಪರತೆಯ ಬಗ್ಗೆ ಮಾತನಾಡಿದ್ದಾರೆ.
ಇವೆಲ್ಲವುಗಳ ನಡುವೆ, ಸಿಂಹವನ್ನು ಅವರ ಮೇಲೆ ದಾಳಿ ಮಾಡಿರುವ ವಿಡಿಯೋ ನೋಡಿ ಶಾಕ್ ಆಗಿ ಪ್ರಶ್ನೆ ಕೇಳ್ತಿರೋ ಅಭಿಮಾನಿಗಳಿಗೆ ನಟ, ನಾನು ಹುಷಾರಾಗಿ ಇದ್ದೇನೆ. ಭಯ ಪಡಬೇಡಿ. ಒಂದು ವೇಳೆ ಹುಷಾರಾಗಿ ಇರದಿದ್ದರೆ, ಈ ಪೋಸ್ಟ್ ಹಾಕಲು ಆಗ್ತಿರಲಿಲ್ಲ ಎಂದಿದ್ದಾರೆ. ಇದರ ಹೊರತಾಗಿಯೂ ಅವರ ಫ್ಯಾನ್ಸ್, ಈ ರೀತಿಯ ಸಾಹಸಕ್ಕೆ ಕೈಹಾಕಬೇಡಿ ಎಂದು ನಟನನ್ನು ಎಚ್ಚರಿಸುತ್ತಿದ್ದಾರೆ.
ನಟನ ಕುರಿತು
ಇನ್ನು ನಟನ ಕುರಿತು ಹೇಳುವುದಾದರೆ, ಕಿರಣ್ ರಾಜ್ (Kiran Raj) ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್ ರಾಜ್. ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.
ಟಿಆರ್ಪಿ ಕಿಂಗ್
ಅಷ್ಟಕ್ಕೂ, ಕಿರಣ್ ರಾಜ್ ಅವರನ್ನು ಟಿಆರ್ಪಿ ಕಿಂಗ್ ಎಂದೇ ಹೇಳಲಾಗುತ್ತದೆ. ಕರ್ಣ ಸೀರಿಯಲ್ನಲ್ಲಿಯೂ ಅವರು ಇದನ್ನು ಮೆಂಟೇನ್ ಮಾಡಿಕೊಂಡು ಬಂದಿದ್ದಾರೆ. ಅವರ ನಟನೆ, ಅಭಿವ್ಯಕ್ತಿಶೀಲ ಕಣ್ಣುಗಳು ಮತ್ತು ಸಂಭಾಷಣೆ, ಕರ್ಣನ ಆಂತರಿಕ ಸಂಘರ್ಷ ಎಲ್ಲವುಗಳಲ್ಲಿಯೂ ನಟ ತಮ್ಮ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.


