Toxic Pre Release Event: ಹೈದರಾಬಾದ್‌ನ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ನೀಡಿದ ಭಾಷಣ ಇದೀಗ ಗಮನ ಸೆಳೆಯುತ್ತಿದೆ.

ಹೈದರಾಬಾದ್‌ನ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ನೀಡಿದ ಭಾಷಣ ಇದೀಗ ಗಮನ ಸೆಳೆಯುತ್ತಿದೆ. ವಿಶೇಷವಾಗಿ ದೇಶದಲ್ಲಿ ನಡೆಯುತ್ತಿರುವ ‘ನಾರ್ತ್‌-ಸೌತ್‌’ ವಿಭಜನೆಯ ಚರ್ಚೆ ಬಗ್ಗೆ ಮಾತನಾಡಿದ ಯಶ್, ಭಾಷೆ ಮತ್ತು ಪ್ರದೇಶಗಳ ಭೇದವನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಬೇಕು ಎಂದು ಕರೆ ನೀಡಿದ್ದಾರೆ.

“ಭಾರತದಲ್ಲಿ ಹಲವು ರಾಜ್ಯಗಳಿವೆ. ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಮೇಲೆ ಪ್ರೀತಿ ಇರುತ್ತದೆ. ಆದರೆ ಈಗ ಎಲ್ಲರೂ ಒಟ್ಟಾಗಿ ಬರುವ ಸಮಯ ಬಂದಿದೆ. ದೇಶದ ಏಕತೆಯನ್ನು ಒಡೆಯಲು ಪ್ರಯತ್ನಿಸುವವರ ಮಾತಿಗೆ, ಈ ವಿಚಾರದಲ್ಲಿ ರಾಜಕೀಯ ಮಾಡಲು ಬಯಸುವವರ ಮಾತಿಗೆ ನಾವು ಕಿವಿಗೊಡಬಾರದು,” ಎಂದು ಯಶ್ ಹೇಳಿದ್ದಾರೆ.

‘ಎಲ್ಲಿ ಹೋದರೂ ನಿಮ್ಮ ಪರಿಶ್ರಮಕ್ಕೆ ಪ್ರೀತಿ ಸಿಗುತ್ತದೆ’

ತಮ್ಮ ಮಾತಿಗೆ ಮತ್ತಷ್ಟು ಬಲ ನೀಡಿದ ಯಶ್, ಭಾರತದಲ್ಲಿ ಪ್ರತಿಭೆ ಮತ್ತು ಪರಿಶ್ರಮಕ್ಕೆ ಗಡಿ ಇಲ್ಲ ಎಂಬ ಸಂದೇಶ ನೀಡಿದ್ದಾರೆ. “ನೀವು ಕಷ್ಟಪಟ್ಟು ಕೆಲಸ ಮಾಡಿದರೆ ನಮ್ಮ ದೇಶದ ಯಾವುದೇ ರಾಜ್ಯಕ್ಕೆ ಹೋದರೂ, ಎಲ್ಲಿಗೆ ಹೋದರೂ ಅದೇ ಪ್ರೀತಿ ಸಿಗುತ್ತದೆ. ದೇಶದ ಯಾವುದೇ ಮೂಲೆಯಿಂದ ಯಾರಾದರೂ ಬಂದು ಒಳ್ಳೆಯ ಕೆಲಸ ಮಾಡಿದರೆ, ಅವರಿಗೆ ಅದೇ ಪ್ರೀತಿಯನ್ನು ನಾವು ನೀಡುತ್ತೇವೆ ಎಂಬ ನಂಬಿಕೆ ನನಗಿದೆ,” ಎಂದು ರಾಕಿಂಗ್ ಸ್ಟಾರ್ ಹೇಳಿದ್ದಾರೆ. ಯಶ್ ಅವರ ಈ ಮಾತುಗಳು ಪ್ರಾದೇಶಿಕ ಭೇದಕ್ಕಿಂತ ಮನುಷ್ಯನ ಪರಿಶ್ರಮ ಮತ್ತು ಸಾಧನೆಯನ್ನು ಗೌರವಿಸಬೇಕು ಎಂಬ ಸಂದೇಶವನ್ನು ಸಾರಿವೆ.

‘ನಿಮ್ಮನ್ನು ಟೀಕಿಸುವವರ ಮಾತು ಕೇಳಬೇಡಿ’ ಎಂದ ಯಶ್

ಯುವಕರಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಯಶ್ ತಮ್ಮ ಭಾಷಣದಲ್ಲಿ ಸ್ಟೀಮ್‌ಬೋಟ್‌ನ ಉದಾಹರಣೆಯನ್ನೂ ನೀಡಿದ್ದಾರೆ. ಮೊದಲ ಬಾರಿಗೆ ಸ್ಟೀಮ್‌ಬೋಟ್‌ ಎಂಜಿನ್‌ ಕಂಡುಹಿಡಿದಾಗ ಅದನ್ನು ಜಗತ್ತಿಗೆ ತೋರಿಸಲು ಮುಂದಾದ ವ್ಯಕ್ತಿಯನ್ನು ಹಲವರು ಅನುಮಾನದಿಂದ ನೋಡಿದ್ದರು. “ಇದು ಹೇಗೆ ಸಾಧ್ಯ? ಸ್ಟೀಮ್‌ನಿಂದ ಬೋಟ್ ಮುಂದೆ ಹೋಗುತ್ತದೆಯಾ? ಇದು ಎಂದಿಗೂ ಸಾಧ್ಯವಿಲ್ಲ” ಎಂದು ಕೆಲವರು ಟೀಕಿಸಿದ್ದರು ಎಂದು ಯಶ್ ವಿವರಿಸಿದ್ದಾರೆ. ಆದರೆ ಟೀಕೆಗಳ ನಡುವೆಯೂ ಸ್ಟೀಮ್‌ಬೋಟ್‌ ಆರಂಭವಾಗಿ ಮುಂದೆ ಸಾಗಿತು. ಅದು ಚಲಿಸುವುದಿಲ್ಲ ಎಂದು ಹೇಳಿದ್ದವರು, ಚಲಿಸಿದ ನಂತರವೂ “ಇದು ಹೆಚ್ಚು ದೂರ ಹೋಗುವುದಿಲ್ಲ, ಎಲ್ಲೋ ಕ್ರ್ಯಾಶ್ ಆಗುತ್ತದೆ, ಮುಳುಗುತ್ತದೆ” ಎಂದು ಹೇಳುತ್ತಲೇ ಇದ್ದರು ಎಂಬುದನ್ನು ಯಶ್ ಉದಾಹರಣೆಯಾಗಿ ನೀಡಿದ್ದಾರೆ.

‘ಡೋಂಟ್ ಲಿಸನ್ ಟು ಎನಿಬಡಿ... ಕೀಪ್ ಗೋಯಿಂಗ್!’

ಈ ಕಥೆಯ ಮೂಲಕ ತಮ್ಮ ಜೀವನದ ಅನುಭವವನ್ನು ಯುವಕರೊಂದಿಗೆ ಹಂಚಿಕೊಂಡ ಯಶ್, ಯಾವುದೇ ಕೆಲಸ ಮಾಡಲು ಹೊರಟಾಗಲೂ ಟೀಕಿಸುವವರು ಇದ್ದೇ ಇರುತ್ತಾರೆ ಎಂಬುದನ್ನು ನೆನಪಿಸಿದ್ದಾರೆ. “ಜೀವನದಲ್ಲಿ ನೀವು ಏನನ್ನೇ ಮಾಡಲು ಹೊರಟರೂ, ನಿಮ್ಮ ಬಗ್ಗೆ ಮಾತನಾಡುವವರು ಮಾತನಾಡುತ್ತಲೇ ಇರುತ್ತಾರೆ. ಯಾರ ಮಾತನ್ನೂ ಕೇಳಬೇಡಿ. ನಿಮ್ಮ ಗುರಿಯತ್ತ ಸಾಗುತ್ತಿರಿ. ಯಶಸ್ಸು ನಿಮ್ಮದಾಗುತ್ತದೆ. ನನ್ನ ಅನುಭವದಿಂದ ನಾನು ಇದನ್ನು ಅರಿತುಕೊಂಡಿದ್ದೇನೆ. ಅದನ್ನೇ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ,” ಎಂಬರ್ಥದಲ್ಲಿ ಯಶ್ ಯುವಕರಿಗೆ ಸ್ಫೂರ್ತಿಯ ಮಾತುಗಳನ್ನು ಹೇಳಿದ್ದಾರೆ.

‘ಟಾಕ್ಸಿಕ್’ ವೇದಿಕೆಯಲ್ಲಿ ಯಶ್ ಮಾತಿಗೆ ಭರ್ಜರಿ ಮೆಚ್ಚುಗೆ

‘ನಾರ್ತ್‌-ಸೌತ್‌’ ಭೇದವನ್ನು ಬದಿಗಿಟ್ಟು ದೇಶದ ಜನರು ಒಗ್ಗಟ್ಟಾಗಿ ಸಾಗಬೇಕು ಎಂಬ ಯಶ್ ಅವರ ಮಾತುಗಳು ಹಾಗೂ ಟೀಕೆಗಳಿಗೆ ಕಿವಿಗೊಡದೆ ಗುರಿಯತ್ತ ಮುನ್ನಡೆಯಬೇಕು ಎಂಬ ಅವರ ಸಂದೇಶ ಪ್ರೇಕ್ಷಕರ ಗಮನ ಸೆಳೆದಿದೆ. ಒಟ್ಟಿನಲ್ಲಿ, ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಯಶ್ ಕೇವಲ ಸಿನಿಮಾದ ಬಗ್ಗೆ ಮಾತನಾಡದೆ, ತಮ್ಮ ವೈಯಕ್ತಿಕ ಅನುಭವದ ಮೂಲಕ ಯುವಕರಿಗೆ ನೀಡಿದ ಈ ಸ್ಫೂರ್ತಿದಾಯಕ ಸಂದೇಶ ಇದೀಗ ಚರ್ಚೆಗೆ ಗ್ರಾಸವಾಗಿದೆ.