ಯಶ್ ಅವರ ಟಾಕ್ಸಿಕ್ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಹೀಗಿದ್ದೂ ಮೊದಲ ವಾರಕ್ಕೆ ಹೋಲಿಸಿದರೆ ಎರಡನೇ ವಾರಕ್ಕೆ ಅದರ ಗಳಿಗೆ ತುಂಬಾನೇ ಕಡಿಮೆ ಇದೆ. ಅದರಲ್ಲೂ 14ನೇ ದಿನ ಅತೀ ಕಡಿಮೆ ಗಳಿಕೆ ಕಂಡಿದೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ (Toxic: A Fairy Tale for Grown-Ups) ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಎರಡನೇ ವಾರ ಪೂರೈಸುವ ಹೊತ್ತಿಗೆ ಗಳಿಕೆಯಲ್ಲಿ ಭಾರೀ ಕುಸಿತ ಕಂಡಿದೆ. ಮೊದಲ ವಾರದಲ್ಲಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದ ಈ ಚಿತ್ರ 14ನೇ ದಿನ ಅತಿ ಕಡಿಮೆ ಕಲೆಕ್ಷನ್ ದಾಖಲಿಸಿದೆ.

14ನೇ ದಿನ ಟಾಕ್ಸಿಕ್ ಗಳಿಸಿದ್ದೆಷ್ಟು?

ಚಿತ್ರವು ಬಿಡುಗಡೆಯಾದ ಎರಡನೇ ಮಂಗಳವಾರ (14ನೇ ದಿನ) ಭಾರತದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಕೇವಲ 0.73 ಕೋಟಿ (ನೆಟ್) ಕಲೆಕ್ಷನ್ ಮಾಡಿದೆ. ಈ ಮೂಲಕ ದೇಶಾದ್ಯಂತ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 247.23 ಕೋಟಿ ಮುಟ್ಟಿದೆ. 14ನೇ ದಿನ ದೇಶಾದ್ಯಂತ ಒಟ್ಟು 1,290 ಶೋಗಳು ನಡೆದಿದ್ದು, ಕೇವಲ 18.7% ರಷ್ಟು ಆಸನಗಳು ಭರ್ತಿಯಾಗಿದ್ದವು (Occupancy).

ಭಾಷಾವಾರು ಗಳಿಕೆ ವಿವರ (Day 14)

  • ಕನ್ನಡ ಆವೃತ್ತಿ: 603 ಶೋಗಳಿಂದ ₹0.48 ಕೋಟಿ (15% ಆಕ್ಯುಪೆನ್ಸಿ)
  • ಹಿಂದಿ ಆವೃತ್ತಿ: 687 ಶೋಗಳಿಂದ ₹0.25 ಕೋಟಿ (22% ಆಕ್ಯುಪೆನ್ಸಿ)

ಮೊದಲ ದಿನವೇ ₹100 ಕೋಟಿ ಕ್ಲಬ್

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಮೊದಲ ದಿನವೇ ಭರ್ಜರಿ ₹101.10 ಕೋಟಿ ಗಳಿಸುವ ಮೂಲಕ ಧೂಳೆಬ್ಬಿಸಿತ್ತು. ಆದರೆ ನಂತರದ ದಿನಗಳಲ್ಲಿ ಕಲೆಕ್ಷನ್ ವೇಗ ತಗ್ಗಿತು.

  • 2ನೇ ದಿನ: ₹37.65 ಕೋಟಿ
  • 3ನೇ ದಿನ: ₹27.20 ಕೋಟಿ

ಮೊದಲ ವಾರದ ಒಟ್ಟು ಗಳಿಕೆ ₹239.30 ಕೋಟಿ

ಮೊದಲ ವಾರದಲ್ಲಿ ನಾಗಾಲೋಟ ಮುಂದುವರಿಸಿದ್ದ ಚಿತ್ರ, ಎರಡನೇ ವಾರದಲ್ಲಿ ತೀರಾ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇದೀಗ 3ನೇ ವಾರಕ್ಕೆ ಕಾಲಿಡುತ್ತಿದೆ. ಸಿನಿಮಾದ ಅಂತ್ಯವನ್ನು ಗಮನಿಸಿದರೆ 'ಟಾಕ್ಸಿಕ್' ಸೀಕ್ವೆಲ್ (ಭಾಗ 2) ಬರುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಆದರೆ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಮಗನಾಗಿ ಕಾಣಿಸಿಕೊಳ್ಳುವ 'ಟಿಕೆಟ್' (Ticket) ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ.

ಇದೀಗ ಇದೇ ಟಿಕೆಟ್ ಪಾತ್ರವನ್ನು ಇಟ್ಟುಕೊಂಡು 'ಟಾಕ್ಸಿಕ್ 2' ಕಥೆ ಮುಂದುವರಿಯಬಹುದೇ ಎಂಬ ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿವೆ. ಆದರೆ ಈ ಬಗ್ಗೆ ನಟ ಯಶ್ ಆಗಲಿ ಅಥವಾ ನಿರ್ಮಾಣ ಸಂಸ್ಥೆಯಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಬೃಹತ್ ತಾರಾಗಣವಿದೆ.