ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಹುಭಾಷಾ ಬಯೋಪಿಕ್‌ಗೆ ಚೆನ್ನೈನಲ್ಲಿ ಮುಹೂರ್ತ ನೆರವೇರಿದೆ. ರಶ್ಮಿಕಾ ಮಂದಣ್ಣ ಅವರು ಎಂ.ಎಸ್. ಸುಬ್ಬುಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕಮಲ್ ಹಾಸನ್ ಈ ಪಾತ್ರದ ಸವಾಲಿನ ಕುರಿತು ಮಾತನಾಡಿದ್ದಾರೆ.

‘ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಈ ದೇಶ ಕಂಡ ಅಪ್ರತಿಮ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್’ ಎಂದು ಹಿರಿಯ ನಟ ಕಮಲ್ ಹಾಸನ್ ಬಣ್ಣಿಸಿದ್ದಾರೆ.ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನಾಚರಣೆಯ ಅಂಗವಾಗಿ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಅವರ ಬಯೋಪಿಕ್‌ನ ಮುಹೂರ್ತ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಕುರಿತು ಮಾತನಾಡಿ, ‘ಜಾಗತಿಕ ತಾರೆ ಮೈಕಲ್ ಜಾಕ್ಸನ್ ಪಾತ್ರ ಮಾಡುವ ನಟನಿಗೆ ಎಂತಹ ಒತ್ತಡ ಇರುತ್ತದೆಯೋ, ರಶ್ಮಿಕಾಗೂ ಅಂತಹದ್ದೇ ಸವಾಲಿದೆ. ಎಂ.ಎಸ್. ಅಮ್ಮನವರ ಕಣ್ಣಿನಲ್ಲಿದ್ದ ಕಾರುಣ್ಯವನ್ನು ತೆರೆಯ ಮೇಲೆ ತಂದರೆ ಅರ್ಧ ಗೆದ್ದಂತೆ. ಇಡೀ ದೇಶದ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದ ಇಂತಹ ಐಕಾನಿಕ್ ಪಾತ್ರವನ್ನು ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ’ ಎಂದರು.

ದೈವಿಕ ಶಕ್ತಿಯಿದೆ

ಅವಕಾಶದ ಬಗ್ಗೆ ಭಾವುಕರಾಗಿ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, ‘ಅಮ್ಮನವರ ಧ್ವನಿಯಲ್ಲಿ ಒಂದು ದೈವಿಕ ಶಕ್ತಿಯಿದೆ, ಅದನ್ನು ಕೇಳಿದಾಗ ಸಾಕ್ಷಾತ್ ದೇವರ ಸನ್ನಿಧಿಯಲ್ಲಿ ಕುಳಿತ ಅನುಭವವಾಗುತ್ತದೆ. ನನ್ನ ಜೀವಮಾನದ ಶ್ರೇಷ್ಠ ಅಭಿನಯವನ್ನು ಈ ಪಾತ್ರಕ್ಕಾಗಿ ನೀಡುತ್ತೇನೆ’ ಎಂದು ಭರವಸೆ ನೀಡಿದರು.

‘ಜೆರ್ಸಿ’ ಖ್ಯಾತಿಯ ಗೌತಮ್ ತಿನ್ನನೂರಿ ಈ ಬಯೋಪಿಕ್‌ ನಿರ್ದೇಶಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅಲ್ಲು ಅರವಿಂದ್ ಮತ್ತು ಬನ್ನಿ ವಾಸು ಜಂಟಿಯಾಗಿ ಈ ಬಹುಕೋಟಿ ವೆಚ್ಚದ ಬಹುಭಾಷಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.