ರಿಯಾಲಿಟಿ ಶೋನ ಅತಿದೊಡ್ಡ ಶೋ ಬಿಗ್ ಬಾಸ್ ಭಾರೀ ಟ್ರೆಂಡಿಂಗ್‌ನಲ್ಲಿದೆ. ಈಗಾಲೇ ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿದ್ದು, ಅವರ ವ್ಯಕ್ತಿತ್ವ ಅನಾವರಣ ಆಗೋದೊಂದೇ ಭಾಕಿ ಇದೆ. ಇದರ ನಡುವೆ ಹಿಂದಿ ಬಿಗ್‌ಬಾಸ್‌ಗೆ ಬಿಜೆಪಿ ನಾಯಕನ ಮಗಳೊಬ್ಬರು ಎಂಟ್ರಿಯಾಗಿದ್ದಾರೆ. ಯಾರು ಅವರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಮುಂಬೈ: ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 20ಕ್ಕೆ ಅದ್ಧೂರಿ ಚಾಲನೆ ಸಿಗುತ್ತಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿಕೊಟ್ಟಿರುವ ಸ್ಪರ್ಧಿಗಳ ಪೈಕಿ ಒಬ್ಬರು ಸಖತ್ ಸದ್ದು ಮಾಡುತ್ತಿದ್ದಾರೆ. ಅವರು ಮತ್ಯಾರೂ ಅಲ್ಲ, ಖ್ಯಾತ ಭೋಜ್‌ಪುರಿ ನಟ ಮತ್ತು ಬಿಜೆಪಿ ಸಂಸದ ಮನೋಜ್ ತಿವಾರಿ ಅವರ ಹಿರಿಯ ಪುತ್ರಿ ರಿತಿ ತಿವಾರಿ.
ಯಾರು ಈ ರಿತಿ ತಿವಾರಿ?
ಹಿಂದಿ ಬಿಗ್ ಬಾಸ್ ಮನೆ ಪ್ರವೇಶಿಸಿರುವ ರಿತಿ ತಿವಾರಿ ಕೇವಲ ಒಬ್ಬ ರಾಜಕಾರಣಿಯ ಮಗಳಷ್ಟೇ ಅಲ್ಲ, ಅವರು ಬಹುಮುಖ ಪ್ರತಿಭೆ. ಗಾಯಕಿ, ಸಂಗೀತ ಸಂಯೋಜಕಿ ಮತ್ತು ಉದ್ಯಮಿಯಾಗಿ ಗುರುತಿಸಿಕೊಂಡಿರುವ ರಿತಿ, ಇಲ್ಲಿಯವರೆಗೆ ಮಾಧ್ಯಮಗಳ ಕಣ್ಣಿನಿಂದ ಸ್ವಲ್ಪ ದೂರವೇ ಉಳಿದಿದ್ದರು. ಆದರೆ ಈಗ ಬಿಗ್ ಬಾಸ್ ಮೂಲಕ ದೇಶದಾದ್ಯಂತ ಮನೆಮಾತಾಗಲು ಸಿದ್ಧರಾಗಿದ್ದಾರೆ.
ವೈಯಕ್ತಿಕ ಜೀವನ ಮತ್ತು ಶಿಕ್ಷಣ
ಜೂನ್ 23, 2001 ರಂದು ಮುಂಬೈನಲ್ಲಿ ಜನಿಸಿದ ರಿತಿ, ಮನೋಜ್ ತಿವಾರಿ ಮತ್ತು ಅವರ ಮೊದಲ ಪತ್ನಿ ರಾಣಿ ತಿವಾರಿ ಅವರ ಪುತ್ರಿ. 2011 ರಲ್ಲಿ ಇವರ ಪೋಷಕರು ವಿಚ್ಛೇದನ ಪಡೆದ ನಂತರ, ರಿತಿ ಮುಂಬೈನಲ್ಲಿ ತಾಯಿಯ ಜೊತೆ ಬೆಳೆದರು. ಆದರೂ ತಂದೆ ಮನೋಜ್ ತಿವಾರಿ ಮತ್ತು ಅವರ ಎರಡನೇ ಕುಟುಂಬದೊಂದಿಗೆ ರಿತಿ ಅತ್ಯಂತ ನಿಕಟ ಸಂಬಂಧ ಹೊಂದಿದ್ದಾರೆ. ಮುಂಬೈನ ಪ್ರತಿಷ್ಠಿತ ಜಮ್ನಾಬಾಯಿ ನಾರ್ಸಿ ಶಾಲೆಯಲ್ಲಿ ಇವರು ವ್ಯಾಸಂಗ ಮಾಡಿದ್ದಾರೆ.
ಸಂಗೀತ ಲೋಕದ ಉದಯೋನ್ಮುಖ ತಾರೆ
ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ರಿತಿ, ತರಬೇತಿ ಪಡೆದ ಗಿಟಾರ್ ವಾದಕಿ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. 2020 ರಲ್ಲಿ ಇವರ 'ಚಲೇ ಆವೋ' ಎಂಬ ಹಾಡು ಬಿಡುಗಡೆಯಾಗಿ ಗಮನ ಸೆಳೆದಿತ್ತು. ಇತ್ತೀಚೆಗೆ ಅಂದರೆ ಡಿಸೆಂಬರ್ 2024 ರಲ್ಲಿ 'ಝೂಥಿ ಬೇಬಿ' ಎಂಬ ಸಿಂಥ್-ಪಾಪ್ ಟ್ರ್ಯಾಕ್ ಬಿಡುಗಡೆ ಮಾಡಿ ಸದ್ದು ಮಾಡಿದ್ದರು. ಈ ಹಾಡನ್ನು ಅವರೇ ಬರೆದು, ಹಾಡಿ, ಸಂಯೋಜಿಸಿದ್ದಾರೆ ಎಂಬುದು ವಿಶೇಷ.
ತಂದೆಯ ಹಾದಿಯಲ್ಲೇ ರಾಜಕೀಯಕ್ಕೆ ಎಂಟ್ರಿ
ತಂದೆ ಮನೋಜ್ ತಿವಾರಿ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದರೆ, ಮಗಳು ರಿತಿ ಕೂಡ ಅದೇ ಹಾದಿ ತುಳಿದಿದ್ದಾರೆ. ಮೇ 2024 ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿಯೇ ರಿತಿ ಅಧಿಕೃತವಾಗಿ ಬಿಜೆಪಿ ಸೇರುವ ಮೂಲಕ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲೂ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ ಸಾರ್ವಜನಿಕ ಜೀವನದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ರಿತಿ ತಿವಾರಿ, ಈಗ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಲ್ಮಾನ್ ಖಾನ್ ಅವರ ಈ ಶೋನಲ್ಲಿ ರಿತಿ ಅವರ ಅಸಲಿ ವ್ಯಕ್ತಿತ್ವ ಹೇಗೆ ಅನಾವರಣಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.


