ಮರಾಠಿ ಸಿನಿಮಾ ‘ಗೋಂಧಲ್’ 33 ಚಿತ್ರಗಳನ್ನು ಹಿಂದಿಕ್ಕಿ ಭಾರತದ ಅಧಿಕೃತ ಆಸ್ಕರ್ ಎಂಟ್ರಿಯಾಗಿ ಆಯ್ಕೆಯಾಗಿದೆ. ಈ ಸೈಕಲಾಜಿಕಲ್ ಥ್ರಿಲ್ಲರ್ ಗ್ರಾಮೀಣ ಪ್ರೀತಿ, ಅಸೂಯೆ, ದ್ರೋಹ ಮತ್ತು ಕೊಲೆ ಸಂಚಿನ ಕಥೆಯನ್ನು ಹೇಳುತ್ತದೆ.
99ನೇ ಅಕಾಡೆಮಿ ಅವಾರ್ಡ್ಸ್‌ಗೆ ಭಾರತದ ಅಧಿಕೃತ ಪ್ರವೇಶವಾಗಿ ಮರಾಠಿ ಸಿನಿಮಾ ‘ಗೋಂಧಲ್’ ಆಯ್ಕೆಯಾಗಿದೆ. ಒಟ್ಟು 33 ಸಿನಿಮಾಗಳನ್ನು ಹಿಂದಿಕ್ಕಿ ‘ಬೆಸ್ಟ್ ಇಂಟರ್‌ನ್ಯಾಷನಲ್ ಫೀಚರ್ ಫಿಲ್ಮ್’ ವಿಭಾಗಕ್ಕೆ ಭಾರತವನ್ನು ಪ್ರತಿನಿಧಿಸಲು ಈ ಸಿನಿಮಾ ಆಯ್ಕೆಯಾಗಿರುವುದು ಮರಾಠಿ ಚಿತ್ರರಂಗದಲ್ಲಿ ಹೆಮ್ಮೆಯ ಕ್ಷಣವಾಗಿದೆ. ಭಾಷೆ ಹಾಗೂ ರೂಪದ ವಿಚಾರದಲ್ಲಿ ಹಲವು ಸವಾಲುಗಳನ್ನು ಎದುರಿಸಿ ಬಂದ ನಟ ಕೈಲಾಸ್ ವಾಘ್ಮಾರೆ ಅವರ ಪಯಣಕ್ಕೂ ಈ ಆಯ್ಕೆ ಹೊಸ ಬೆಳಕು ಚೆಲ್ಲಿದೆ. ಹಾಗಾದರೆ ‘ಗೋಂಧಲ್’ ಚಿತ್ರದ ಕಥೆ ಏನು?
99ನೇ ಅಕಾಡೆಮಿ ಅವಾರ್ಡ್ಸ್, ಅಂದರೆ 2027ರ ಆಸ್ಕರ್ ಪ್ರಶಸ್ತಿಗಳಿಗಾಗಿ ಭಾರತದ ಅಧಿಕೃತ ಎಂಟ್ರಿಯಾಗಿ ಮರಾಠಿ ಸಿನಿಮಾ ‘ಗೋಂಧಲ್’ ಆಯ್ಕೆಯಾಗಿದೆ. ಒಟ್ಟು 33 ಚಿತ್ರಗಳನ್ನು ಹಿಂದಿಕ್ಕಿರುವ ಈ ಸಿನಿಮಾ, ಭಾರೀ ವಾಣಿಜ್ಯ ಯಶಸ್ಸು ಕಂಡ ಹಾಗೂ ಸುದ್ದಿಯಲ್ಲಿದ್ದ ಹಲವು ಸಿನಿಮಾಗಳನ್ನು ಹಿಂದೆ ಸರಿಸಿ ಈ ಪ್ರತಿಷ್ಠಿತ ಅವಕಾಶ ಪಡೆದುಕೊಂಡಿದೆ. ಈ ಕುರಿತು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಅಧಿಕೃತ ಘೋಷಣೆ ಮಾಡಿದೆ. ‘ಬೆಸ್ಟ್ ಇಂಟರ್‌ನ್ಯಾಷನಲ್ ಫೀಚರ್ ಫಿಲ್ಮ್’ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ‘ಗೋಂಧಲ್’ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಮರಾಠಿ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ
‘ಗೋಂಧಲ್’ ಆಸ್ಕರ್ ಅಖಾಡ ಪ್ರವೇಶಿಸಿರುವುದು ಮರಾಠಿ ಚಿತ್ರರಂಗಕ್ಕೂ ಹೆಮ್ಮೆಯ ವಿಚಾರವಾಗಿದೆ. ಈ ಚಿತ್ರದ ಮೂಲಕ ಮರಾಠಿ ಸಿನಿಮಾ ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗಮನ ಸೆಳೆದಿದೆ. ಸಂತೋಷ್ ದಾವ್‌ಖರ್ ನಿರ್ದೇಶನದ ಈ ಸಿನಿಮಾದಲ್ಲಿ ಕಿಶೋರ್ ಕದಮ್, ಇಶಿತಾ ದೇಶ್‌ಮುಖ್, ಯೋಗೇಶ್ ಸೊಹೊನಿ, ನಿಶಾದ್ ಭೋಯಿರ್, ಅನುಜ್ ಪ್ರಭು, ಸುರೇಶ್ ವಿಶ್ವಕರ್ಮ, ಮಾಧವಿ ಜುವೇಕರ್, ಐಶ್ವರ್ಯ ಶಿಂಧೆ, ಕೈಲಾಸ್ ವಾಘ್ಮಾರೆ, ಪ್ರಭಾಕರ್ ಮಠಪತಿ, ವಿಠ್ಠಲ್ ಕಾಲೆ, ಪ್ರವೀಣ್ ದಾಲಿಂಬ್ಕರ್, ಶರದ್ ಜಾಧವ್, ಪೂನಂ ಪಾಟೀಲ್ ಹಾಗೂ ಪ್ರಶಾಂತ್ ದೇಶ್‌ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಆಸ್ಕರ್‌ಗೆ ಭಾರತದ ಅಧಿಕೃತ ಎಂಟ್ರಿಯಾಗಿ ಆಯ್ಕೆಯಾಗಿದೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಇಡೀ ಚಿತ್ರತಂಡದಲ್ಲಿ ಸಂಭ್ರಮ ಮನೆ ಮಾಡಿದೆ.
‘ಗೋಂಧಲ್’ ಚಿತ್ರದ ಕಥೆ ಏನು?
ಗ್ರಾಮೀಣ ಮಹಾರಾಷ್ಟ್ರದ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯ ಕೇಂದ್ರಬಿಂದು ಸುಮನ್ ಎಂಬ ವಿವಾಹಿತ ಮಹಿಳೆ. ಶ್ರೀಮಂತನಾದ ಆನಂದ್ ಜೊತೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಮದುವೆ ನಡೆಯುತ್ತದೆ. ಪರಿಣಾಮವಾಗಿ ಸುಮನ್ ತನ್ನ ದಾಂಪತ್ಯ ಜೀವನದಲ್ಲಿ ಅಸಂತೃಪ್ತಿಯಿಂದ ಬದುಕುತ್ತಿರುತ್ತಾಳೆ. ಇದೇ ವೇಳೆ ‘ಗೋಂಧಾಳಿ’ ಕಲಾವಿದನಾದ ಸಾಹೇಬಾ ಎಂಬ ವ್ಯಕ್ತಿಯೊಂದಿಗೆ ಸುಮನ್ ಪ್ರೀತಿಯಲ್ಲಿ ಬೀಳುತ್ತಾಳೆ. ತನ್ನ ಪತಿಯಿಂದ ದೂರವಾಗಿ ಪ್ರಿಯಕರನೊಂದಿಗೆ ತೆರಳಲು ಆಕೆ ಯೋಜನೆ ರೂಪಿಸುತ್ತಾಳೆ. ಆದರೆ ಇವರ ಯೋಜನೆಗೆ ಆನಂದ್‌ನ ಭಾವಮೈದುನ ಸರ್ಜೇರಾವ್ ಎಂಟ್ರಿ ಕೊಡುತ್ತಾನೆ. ಅಲ್ಲಿಂದ ಕಥೆ ಸಂಪೂರ್ಣವಾಗಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ.
ಒಂದೇ ರಾತ್ರಿಯಲ್ಲಿ ನಡೆಯುವ ಕಥೆ!
‘ಗೋಂಧಲ್’ ಚಿತ್ರದ ಬಹುತೇಕ ಪ್ರಮುಖ ಘಟನೆಗಳು ಒಂದೇ ರಾತ್ರಿಯಲ್ಲಿ ನಡೆಯುವ ಗೋಂಧಲ್ ಪೂಜಾ ಸಮಾರಂಭದ ಸುತ್ತ ನಡೆಯುತ್ತವೆ. ಈ ಆಚರಣೆಯ ಹಿಂದಿರುವ ಕಾಮ, ಅಸೂಯೆ, ದ್ರೋಹ ಹಾಗೂ ಕೊಲೆಯ ಸಂಚುಗಳು ಕಥೆಯ ಪ್ರಮುಖ ಅಂಶಗಳಾಗಿವೆ. ಅನುಮಾನಗಳು ಮತ್ತು ರಹಸ್ಯಗಳ ನಡುವೆ ಪ್ರತಿಯೊಂದು ಪಾತ್ರವೂ ತನ್ನ ಅಸ್ತಿತ್ವ ಹಾಗೂ ಸ್ವಾರ್ಥಕ್ಕಾಗಿ ನಡೆಸುವ ಹೋರಾಟವೇ ಸಿನಿಮಾದ ಕಥೆಯನ್ನು ಮತ್ತಷ್ಟು ರೋಚಕವಾಗಿಸುತ್ತದೆ. ಪ್ರತಿ ಹಂತದಲ್ಲೂ ಹೊಸ ತಿರುವುಗಳು ಎದುರಾಗುವುದರಿಂದ ಸಿನಿಮಾ ಪ್ರೇಕ್ಷಕರನ್ನು ಸೀಟ್‌ನ ತುದಿಯಲ್ಲಿ ಕೂರಿಸುವ ರೀತಿಯಲ್ಲಿ ಸಾಗುತ್ತದೆ.
ಇಳಯರಾಜಾ ಸಂಗೀತ ಚಿತ್ರದ ಪ್ರಮುಖ ಬಲ
ಸಂಗೀತ ಮಾಂತ್ರಿಕ ಇಳಯರಾಜಾ ನೀಡಿರುವ ಸಂಗೀತ ಹಾಗೂ ಹಿನ್ನೆಲೆ ಸಂಗೀತ ‘ಗೋಂಧಲ್’ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರದ ಸ್ಥಳೀಯ ಸಂಸ್ಕೃತಿಯನ್ನು ಸೈಕಲಾಜಿಕಲ್ ಥ್ರಿಲ್ಲರ್ ಅಂಶಗಳೊಂದಿಗೆ ನಿರ್ದೇಶಕರು ಬೆರೆಸಿರುವ ರೀತಿ ಗಮನ ಸೆಳೆದಿದೆ. ಆಸ್ಕರ್ ಆಯ್ಕೆ ಸಮಿತಿಯ ಅಧ್ಯಕ್ಷ ಪಿ. ಶೇಷಾದ್ರಿ ನೇತೃತ್ವದ 14 ಸದಸ್ಯರ ಜ್ಯೂರಿ ಕೂಡ ಚಿತ್ರದ ಈ ಅಂಶಗಳನ್ನು ಮೆಚ್ಚಿಕೊಂಡಿದೆ ಎಂದು ವರದಿಯಾಗಿದೆ.
ಭಾಷೆಯ ವಿಚಾರದಲ್ಲಿ ಕೈಲಾಸ್ ವಾಘ್ಮಾರೆ ನಿಲುವು
ಈ ಸಿನಿಮಾದ ಪ್ರಮುಖ ನಟರಲ್ಲಿ ಒಬ್ಬರಾದ ಜಲ್ನಾ ಮೂಲದ ಕೈಲಾಸ್ ವಾಘ್ಮಾರೆ ಅವರ ಪಯಣವೂ ಗಮನಾರ್ಹವಾಗಿದೆ. ‘ಶಿವಾಜಿ ಅಂಡರ್‌ಗ್ರೌಂಡ್ ಇನ್ ಭೀಮ್‌ನಗರ ಮೊಹಲ್ಲಾ’ ಎಂಬ ನಾಟಕದಲ್ಲಿ ತಮ್ಮದೇ ಸ್ಥಳೀಯ ಯಾಸೆಯಲ್ಲಿ ಪಾತ್ರ ನಿರ್ವಹಿಸಿದ್ದರು. ಆ ನಾಟಕಕ್ಕೆ ಪ್ರೇಕ್ಷಕರಿಂದ ಸಿಕ್ಕ ಪ್ರತಿಕ್ರಿಯೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಬಳಿಕ ಅವರಿಗೆ ಸಿನಿಮಾಗಳಲ್ಲೂ ಅವಕಾಶಗಳು ಬರಲು ಆರಂಭವಾದವು.
ತಮ್ಮ ಭಾಷೆಯ ಕುರಿತು ಮಾತನಾಡಿರುವ ಕೈಲಾಸ್, ಪ್ರಮಾಣಿತ ಭಾಷೆ ಹಾಗೂ ಗ್ರಾಮೀಣ ಭಾಷೆಗಳ ನಡುವೆ ವ್ಯತ್ಯಾಸ ಮಾಡಿ ಒಂದನ್ನು ಶ್ರೇಷ್ಠ, ಮತ್ತೊಂದನ್ನು ಕೀಳು ಎಂದು ನೋಡುವುದನ್ನು ವಿರೋಧಿಸುತ್ತಾರೆ. ತಮ್ಮ ಊರಿನ ಭಾಷೆ ಅಲ್ಲಿನ ಜನರಿಗೆ ಎಷ್ಟು ಸಹಜ ಮತ್ತು ಶುದ್ಧವೋ, ಅದೇ ರೀತಿ ಮುಂಬೈನಲ್ಲಿ ಮಾತನಾಡುವ ಭಾಷೆಯೂ ಅಲ್ಲಿನ ಜನರ ಸ್ವಾಭಾವಿಕ ಭಾಷೆ ಎಂಬುದು ಅವರ ಅಭಿಪ್ರಾಯ.
ಇನ್ನು ಗ್ರಾಮೀಣ ಮಹಾರಾಷ್ಟ್ರದ ಸಂಸ್ಕೃತಿ, ಪ್ರೀತಿ, ದ್ರೋಹ, ರಹಸ್ಯ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ‘ಗೋಂಧಲ್’ ಇದೀಗ ಆಸ್ಕರ್ ಅಖಾಡ ಪ್ರವೇಶಿಸಿರುವುದರಿಂದ ಚಿತ್ರದ ಕಥೆ ಹಾಗೂ ತಾರಾಗಣದ ಬಗ್ಗೆ ಸಿನಿಪ್ರಿಯರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.


