ಯಶ್ ಟಾಕ್ಸಿಕ್ ಸಿನಿಮಾದ ನೆಗೆಟಿವ್ ಕಮೆಂಟ್ಸ್ ಬಗ್ಗೆ ಅವರ ಸ್ನೇಹಿತರೊಬ್ಬರು ಮನಬಿಚ್ಚಿ ಮಾತನ್ನಾಡಿದ್ದಾರೆ. ರಿಲೀಸ್ ದಿನವೇ ಸೋಶಿಯಲ್ ಮೀಡಿಯಾದಲ್ಲಿ ನೆಗೆಟೀವ್ ಕಮೆಂಟ್ಸ್ ಬಂದಾಗ ಯಶ್ , ಸ್ನೇಹಿತನಿಗೆ ಕರೆ ಮಾಡಿ ಹೇಗೆ ಧೈರ್ಯ ತುಂಬಿದ್ದರು ಅನ್ನೋದನ್ನು ವಿವರಿಸಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ.
ಬೆಂಗಳೂರು: ಟಾಕ್ಸಿಕ್ ಸಿನಿಮಾ ರಿಲೀಸ್ ಮೊದಲ ದಿನವೇ ಕೇಳಿಬಂದ ನೆಗೆಟಿವ್ ವಿಮರ್ಶೆಗಳು ಮತ್ತು ಟ್ರೋಲ್‌ಗಳನ್ನು ನೋಡಿ ಚಿತ್ರತಂಡವೇ ಕಣ್ಣೀರಿಟ್ಟಿತ್ತು. ಇಡೀ ಭಾರತೀಯ ಚಿತ್ರರಂಗವೇ ಬೆರಗುಗಣ್ಣಿನಿಂದ ನೋಡುತ್ತಿದ್ದ ಸಿನಿಮಾಗೆ ಇಂಥದ್ದೊಂದು ಹಿನ್ನಡೆಯಾದಾಗ ಸ್ವತಃ ತೀವ್ರ ನೋವಿನಲ್ಲಿದ್ದ ನಟ ಯಶ್ ತಮ್ಮ ಸಹೋದ್ಯೋಗಿ-ಸ್ನೇಹಿತನಿಗೆ ಫೋನ್ ಮಾಡಿ ಸಮಾಧಾನ ಹೇಳಿದ್ದರು! ಈ ವಿಚಾರವನ್ನು ಟಾಕ್ಸಿಕ್ ಸಿನಿಮಾದ ಡಬ್ಬಿಂಗ್ ಸೂಪರ್‌ವೈಸರ್ ಹಾಗೂ ಯಶ್ ಅವರ ಆಪ್ತ ಸ್ನೇಹಿತ ಜೈದೇವ್ ಮೋಹನ್ ಎಮೋಷನಲ್ ಆಗಿ ಬಿಚ್ಚಿಟ್ಟಿದ್ದಾರೆ.
ಯಶ್ ಫೋನ್ ಮಾಡಿ ಧೈರ್ಯ ತುಂಬಿದರು
ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜೈದೇವ್ ಮೋಹನ್, ಸಿನಿಮಾ ಬಿಡುಗಡೆಯಾದ ಬಳಿಕ ನಾನು ಯಶ್ ಅವರನ್ನು ನೇರವಾಗಿ ಭೇಟಿಯಾಗಿಲ್ಲ. ಎರಡು ಬಾರಿ ಫೋನ್‌ನಲ್ಲಿ ಮಾತನಾಡಿದೆ. ನಾನು ಈ ಸಿನಿಮಾದಲ್ಲಿ ಕೆಲಸ ಮಾಡಿದ ಒಂದು ಸಣ್ಣ ಭಾಗವಷ್ಟೇ. ಮೊದಲ ದಿನವೇ ಚಿತ್ರಕ್ಕೆ ಬಂದ ನೆಗೆಟಿವ್ ವಿಮರ್ಶೆಗಳು ಮತ್ತು ಜನರ ರಿಯಾಕ್ಷನ್ ನೋಡಿ ನಾನು ತೀವ್ರ ಭಾವುಕನಾಗಿ ಕಣ್ಣೀರಿಟ್ಟಿದ್ದೆ. ಅಷ್ಟರಲ್ಲೇ ನನಗೆ ಯಶ್ ಅವರ ಕಡೆಯಿಂದಲೇ ಫೋನ್ ಕರೆ ಬಂತು.
ಅವರು ನನಗೆ ಅತಿಯಾಗಿ ಯೋಚಿಸಿ ತಲೆಕೆಡಿಸಿಕೊಳ್ಳಬೇಡ. ಎಲ್ಲವನ್ನೂ ಪ್ರೇಕ್ಷಕರಿಗೆ ಬಿಟ್ಟುಬಿಡೋಣ, ಅದು ಅವರ ಇಷ್ಟ. ಮುಂದೆ ನಾವಿನ್ನೂ ಮಾಡಬೇಕಾದ ಕೆಲಸ ಸಾಕಷ್ಟಿದೆ ಎಂದು ಸಮಾಧಾನ ಮಾಡಿದರು. ಆದರೆ ನನಗೆ ಧೈರ್ಯ ತುಂಬುತ್ತಿದ್ದ ಅವರ ಧ್ವನಿಯಲ್ಲಿದ್ದ ಆ ನೋವನ್ನು ನಾನು ಸ್ಪಷ್ಟವಾಗಿ ಕೇಳಿಸಿಕೊಂಡೆ ಎಂದು ಜೈದೇವ್ ಹೇಳಿದ್ದಾರೆ.
ಪ್ರೇಕ್ಷಕರೇ ಮಹಾಪ್ರಭು..
ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಳ್ಳದೇ ಇದ್ದಾಗ ಯಶ್ ಅದನ್ನು ಹೇಗೆ ಸ್ವೀಕರಿಸಿದರು ಎಂಬುದನ್ನು ವಿವರಿಸಿದ ಜೈದೇವ್, ಈ ಸಿನಿಮಾ 4 ವರ್ಷಗಳ ಹಿಂದೆ ಒಂದು ಸಣ್ಣ ಬೀಜವಾಗಿ ಮೊಳಕೆಯೊಡೆದಿತ್ತು. ಕಥೆಯ ಮೊದಲ ವರ್ಷನ್‌ನಿಂದಲೂ ನಾನು ಕೇಳಿದ್ದೇನೆ. ಶೂಟಿಂಗ್ ಮುಗಿಯುವ ಹೊತ್ತಿಗೆ ಹಲವು ಬದಲಾವಣೆಗಳಾಗಿದ್ದವು. ಸಿನಿಮಾ ಹೇಗೆ ಹಂತ-ಹಂತವಾಗಿ ಬೆಳೆಯಿತು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಅಂತಿಮವಾಗಿ ಯಶ್ ಹೇಳಿದ್ದು ಒಂದೇ ಮಾತು: 'ಕೊನೆಗೆ ಪ್ರೇಕ್ಷಕರೇ ಮಹಾಪ್ರಭು. ಅವರಿಗೆ ಸಿನಿಮಾ ಇಷ್ಟವಾದರೆ ಮೆಚ್ಚಿಕೊಳ್ಳುತ್ತಾರೆ, ಇಲ್ಲದಿದ್ದರೆ ತಿರಸ್ಕರಿಸುತ್ತಾರೆ. ನಾವು ಸಿನಿಮಾವನ್ನು ಅದ್ಭುತವಾಗಿ ಮಾಡಿದ್ದೆವು, ಆದರೆ ಜನರಿಗೆ ಅರ್ಥವಾಗಲಿಲ್ಲ ಎಂದು ನಾವು ಸಮರ್ಥನೆ ಕೊಟ್ಟು ಪ್ರಯೋಜನವಿಲ್ಲ ಎಂದು ಯಶ್ ಪ್ರೇಕ್ಷಕರ ತೀರ್ಪಿಗೆ ತಲೆಬಾಗಿದ್ದರು ಎಂದು ಜೈದೇವ್ ಹಂಚಿಕೊಂಡಿದ್ದಾರೆ.
3 ಲಕ್ಷ ಪೈರಸಿ ಲಿಂಕ್‌ಗಳು
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಮೊದಲ ದಿನವೇ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅಬ್ಬರಿಸಿತ್ತು. ಆದರೆ ಕಥೆಯ ವಿಚಾರದಲ್ಲಿ ತೀವ್ರ ನೆಗೆಟಿವ್ ವಿಮರ್ಶೆಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ವಿರೋಧದಿಂದಾಗಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕುಸಿತ ಕಂಡಿತು. ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಸುಮಾರು 3 ಲಕ್ಷಕ್ಕೂ ಅಧಿಕ ಪೈರಸಿ ಲಿಂಕ್‌ಗಳು ಹರಿದಾಡಿದ್ದು, ಅವುಗಳನ್ನು ಡಿಲೀಟ್ ಮಾಡಿಸಲಾಯಿತು ಎಂದು ಜೈದೇವ್ ಮಾಹಿತಿ ನೀಡಿದ್ದಾರೆ.
ಸದ್ಯ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಯಶ್, ಈ ಹಿನ್ನಡೆಯ ನಡುವೆಯೂ ತಮ್ಮ ಮುಂದಿನ ಪ್ರಾಜೆಕ್ಟ್‌ಗಳತ್ತ ಗಮನ ಹರಿಸಿದ್ದಾರೆ. ಸೋಲಿನಲ್ಲೂ ಇತರರಿಗೆ ಧೈರ್ಯ ತುಂಬಿದ ರಾಕಿಂಗ್ ಸ್ಟಾರ್ ನಡವಳಿಕೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.


