ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಒಂದೇ ದಿನ 555 ಪ್ರಕರಣಗಳ ವಿಚಾರಣೆ ನಡೆಸಿ ದಾಖಲೆ ನಿರ್ಮಿಸಿದ್ದಾರೆ. ನ್ಯಾಯಾಂಗ ಸೇವೆಗೆ ಬರುವ ಮುನ್ನ, 27 ವರ್ಷಗಳ ಹಿಂದೆ ಅವರು 'ಹೂಮಳೆ' ಎಂಬ ಪ್ರಸಿದ್ಧ ಕನ್ನಡ ಚಿತ್ರದಲ್ಲಿ ನಟಿಸಿದ್ದರು ಎಂಬ ಕುತೂಹಲಕಾರಿ ಸಂಗತಿ ಈ ಲೇಖನದಲ್ಲಿದೆ.

ಕರ್ನಾಟಕ ಹೈಕೋರ್ಟ್‌ನ ಕೋರ್ಟ್ ಹಾಲ್ 14ರಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಸೆಪ್ಟೆಂಬರ್ 2 ರಂದು ರಾತ್ರಿ 8:05 ರವರೆಗೆ ಸತತವಾಗಿ ಪೀಠದಲ್ಲಿದ್ದು, ಒಟ್ಟು 555 ಪ್ರಕರಣಗಳ ಸುದೀರ್ಘ ವಿಚಾರಣೆ ನಡೆಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ದಿನದ ನಿಗದಿತ ಕಲಾಪಗಳ ಹೊರತಾಗಿ, ತುರ್ತು ವಿಚಾರಣೆಗೆ ಕೋರಿ ಸಲ್ಲಿಕೆಯಾಗಿದ್ದ 250 ಅರ್ಜಿಗಳನ್ನು ಕೇವಲ 2.5 ಗಂಟೆಗಳ ಅಲ್ಪಾವಧಿಯಲ್ಲಿ ಪರಿಶೀಲಿಸಿ ಆಲಿಸಿರುವುದು ಅತ್ಯಂತ ವಿಶೇಷವಾಗಿತ್ತು. ಅರ್ಜಿದಾರರಿಗೆ ಶೀಘ್ರ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾತ್ರಿಯವರೆಗೂ ಶ್ರಮಿಸಿದ ಅವರ ಕಾರ್ಯವೈಖರಿಗೆ ಕಾನೂನು ಕ್ಷೇತ್ರ ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಮ್ಮದೇ ಆದ ವಿಶಿಷ್ಟ ಕಾರ್ಯಶೈಲಿಗೆ ಹೆಸರಾದವರು. ನ್ಯಾಯಾಲಯದ ಕಲಾಪಗಳನ್ನು ಜನರು ಆಸಕ್ತಿಯಿಂದ ವೀಕ್ಷಿಸುವಂತೆ ಮಾಡಿ, ಸಾರ್ವಜನಿಕರ ಅಪಾರ ಗೌರವಕ್ಕೆ ಪಾತ್ರರಾಗಿರುವ ಇವರ ವೃತ್ತಿಜೀವನದ ಹಿನ್ನೆಲೆಯಲ್ಲಿ ಇನ್ನೊಂದು ಕುತೂಹಲಕಾರಿ ಸಂಗತಿಯಿದೆ. ಈಗ ಆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದುವೆ ಅವರ ನಟನಾ ಪ್ರವೃತ್ತಿ. ನಾಗಪ್ರಸನ್ನ ಅವರು ಕಾನೂನು ವೃತ್ತಿಗೆ ಬರುವ ಮುನ್ನ ಕನ್ನಡದ ಖ್ಯಾತ ಚಲನಚಿತ್ರವೊಂದರಲ್ಲಿ ನಟಿಸಿದ್ದರು.

ಯಾವುದು ಆ ಚಿತ್ರ?

ನ್ಯಾಯಾಂಗ ಕ್ಷೇತ್ರಕ್ಕೆ ಪೂರ್ಣಪ್ರಮಾಣದಲ್ಲಿ ಧುಮುಕುವ ಮೊದಲು, ಅಂದರೆ 27 ವರ್ಷಗಳ ಹಿಂದೆ (1998 ರಲ್ಲಿ) ಅವರು ವಕೀಲರಾಗಿದ್ದಾಗ, ಕನ್ನಡದ ಜನಪ್ರಿಯ ಚಲನಚಿತ್ರ 'ಹೂಮಳೆ'ಯಲ್ಲಿ ನಟಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ನಟ ರಮೇಶ್ ಅರವಿಂದ್ ನಾಯಕನಾಗಿ ಹಾಗೂ ಸುಮನ್ ನಗರ್ಕರ್ ನಾಯಕಿಯಾಗಿ ಅಭಿನಯಿಸಿದ್ದರು.

ಈ ಚಿತ್ರದಲ್ಲಿ ನಾಗಪ್ರಸನ್ನ ಅವರು ನಾಯಕನ ತಂಗಿಯ ಪ್ರಿಯಕರನಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಮೇಶ್ ಅರವಿಂದ್ ಮತ್ತು ಸುಮನ್ ನಗರ್ಕರ್ ಅವರೊಂದಿಗೆ ಎಚ್.ಜಿ. ದತ್ತಾತ್ರೇಯ, ಸೋರತ್ ಅಶ್ವಥ್, ಭಾಗೀರಥಿ ಬಾಯಿ, ಬಿ.ವಿ. ರಾಧಾ ಮತ್ತು ವಾಣಿಶ್ರೀ ಮುಂತಾದ ದಿಗ್ಗಜ ಕಲಾವಿದರು ನಟಿಸಿದ್ದ ಈ 'ಹೂಮಳೆ' ಚಿತ್ರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಪ್ರಸಿದ್ಧಿ ಪಡೆದಿತ್ತು. ನ್ಯಾಯಾಂಗ ಕ್ಷೇತ್ರದಲ್ಲಿ ದಕ್ಷತೆ ಮತ್ತು ಕಟಿಬದ್ಧತೆಗೆ ಹೆಸರಾಗಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಕಲಾಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದು ನಿಜಕ್ಕೂ ವಿಶೇಷ.

ದಿನವೇ 558ಕ್ಕೂ ಹೆಚ್ಚು ಅರ್ಜಿ ವಿಚಾರಣೆ:

ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಬುಧವಾರ ಒಂದೇ ದಿನ 550ಕ್ಕೂ ಹೆಚ್ಚು ಅರ್ಜಿಗಳನ್ನು ವಿಚಾರಣೆ ನಡೆಸಿದರು. ಅದರಲ್ಲಿ ಸಮಾರು 85 ಅರ್ಜಿಗಳನ್ನು ವಿಲೇವಾರಿ ಮಾಡಿದರು. ನ್ಯಾ.ಎಂ.ನಾಗಪ್ರಸನ್ನ ಅವರ ಪೀಠದ ವಿಚಾರಣಾ ಪಟ್ಟಿಯಲ್ಲಿ ಬುಧವಾರ 318 ಅರ್ಜಿಗಳ ವಿಚಾರಣೆಗೆ ನಿಗದಿಯಾಗಿತ್ತು. ಬೆಳಗ್ಗೆ ವಕೀಲರು ತಮ್ಮ ಅರ್ಜಿಗಳ ತುರ್ತು ವಿಚಾರಣೆಗೆ ತೆಗೆದುಕೊಳ್ಳುವಂತೆ ಕೋರಿ 240ಕ್ಕೂ ಹೆಚ್ಚು ಮೊಮೊ ಸಲ್ಲಿಸಿದರು. ಆ ಮೆಮೊಗಳನ್ನು ಸ್ವೀಕರಿಸಿದ ನ್ಯಾಯಮೂರ್ತಿಗಳು, ಅಷ್ಟೂ ಅರ್ಜಿಗಳನ್ನು ಮಧ್ಯಾಹ್ನದ ಕಲಾಪದಲ್ಲಿ ವಿಚಾರಣೆಗೆ ನಿಗದಿಪಡಿಸುವಂತೆ ಕೋರ್ಟ್‌ ಆಫೀಸರ್‌ಗೆ ಸೂಚಿಸಿದರು. ಅದರೊಂದಿಗೆ 558 ಅರ್ಜಿಗಳನ್ನು (ತಕರಾರು ಮತ್ತು ಕ್ರಿಮಿನಲ್‌) ವಿಚಾರಣೆಗೆ ನಿಗದಿಯಾದವು.

ಆ ಎಲ್ಲಾ ಅರ್ಜಿಗಳ ವಿಚಾರಣೆ ಮುಗಿದಾಗ ರಾತ್ರಿ 8 ಗಂಟೆಯಾಯಿತು. ದಿನದ ಕಲಾಪವು ಸಂಜೆ 4.30ಕ್ಕೆ ಮುಗಿದರೂ, ನ್ಯಾಯಮೂರ್ತಿಗಳು ಹೆಚ್ಚುವರಿಯಾಗಿ ಮೂರುವರೆ ಗಂಟೆ ಕಾಲ ಕಲಾಪ ನಡೆಸಿದರು. ರಾತ್ರಿ 8 ಗಂಟೆಗೆ ಕಲಾಪ ಮುಕ್ತಾಯಗೊಂಡಾಗ, ಆ ವೇಳೆ ದರ್ಶನ್‌ ಅರ್ಜಿ ಕುರಿತ ತೀರ್ಪು ಬರೆಸುವ ಪ್ರಕಟಿಸುವ ಬಗ್ಗೆ ಅವರ ವಕೀಲರಲ್ಲಿ ನ್ಯಾಯಮೂರ್ತಿಗಳು ಕೇಳಿದರು.

ಈ ವೇಳೆ ಹಾಜರಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಸ್‌ಪಿಪಿ ಪಿ.ಪ್ರಸನ್ನ ಕುಮಾರ್‌ ಅವರು, ‘ಮೈ ಲಾರ್ಡ್‌.. ನೀವು; ದಿನವೊಂದರಲ್ಲಿ 10 ಗಂಟೆಗಳ ನಿರಂತರ ಕಲಾಪ ನಡೆಸಿದ್ದೀರಿ. ದಿನವೊಂದರಲ್ಲಿ 550 ಅರ್ಜಿಗಳು ವಿಚಾರಣೆಯಾಗಿರುವುದು ಚರಿತ್ರೆ ಸೃಷ್ಟಿಯಾದಂತಾಗಿದೆ. ಆ ಮೂಲಕ ದೇಶದ ಹೈಕೋರ್ಟ್ ಇತಿಹಾಸದಲ್ಲಿ ಹೊಸ ಹೆಜ್ಜೆ ಮೂಡಿಸಿದ್ದೀರಿ’ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನು ಶ್ಲಾಘಿಸಿದರು.