ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ಪತಿಯೊಂದಿಗೆ ಫೋನ್‌ನಲ್ಲಿ ಜಗಳವಾಡಿದ ಮಹಿಳೆಯೊಬ್ಬಳು ಕೋಪದಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದಿದ್ದಾಳೆ. ಈ ದುರಂತದಲ್ಲಿ ಒಂದು ಮಗು ಮೃತಪಟ್ಟಿದ್ದು, ಮತ್ತೊಂದು ಮಗು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದೆ. ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಬಂಟ್ವಾಳ: ಗಂಡ-ಹೆಂಡತಿ ಫೋನ್‌ನಲ್ಲಿ ಜಗಳ ಆಡುತ್ತ ಇಬ್ಬರು ಮುದ್ದಾದ ಮಕ್ಕಳ ಮೇಲೆ ಕೋಪ ತೀರಿಸಿಕೊಂಡ ಘಟನೆ ನಡೆದಿದೆ. ಗಂಡನ ಜೊತೆ ಕಿತ್ತಾಡುತ್ತ ಇಬ್ಬರು ಮಕ್ಕಳನ್ನ ಬಾವಿಗೆ ಎಸೆದಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ಘಟನೆ ನಡೆದಿದೆ.

ಪೋನ್‌ ಕರೆ ವೇಳೆ ಪತಿಯೊಂದಿಗೆ ಜಗಳವಾಡಿ ತೀವ್ರ ಕೋಪದಲ್ಲಿ ಇಬ್ಬರು ಮುಗ್ಧ ಮಕ್ಕಳನ್ನು ಬಾವಿಗೆ ಎಸೆದಿದ್ದಾಳೆ. ಕೃತ್ಯದಲ್ಲಿ ಮೂರು ವರ್ಷದ ಮಗು ಮೃತಪಟ್ಟಿದ್ದು, ಮತ್ತೊಂದು ಮಗು ಜೀವನ್ಮರಣ ಹೋರಾಟ ನಡೆಸುತ್ತಿದೆ.

ಆಗಿದ್ದೇನು?

ಪೆರ್ನೆ ನಿವಾಸಿ ಸಿನಾನ್ (32) ಹಾಗೂ ಆತನ ಪತ್ನಿ ನೂರುನ್ನಿಸಾ (28) ನಡುವೆ ಫೋನ್‌ನಲ್ಲಿ ಗಲಾಟೆ ಆಗಿದೆ. ಸಾಂಸಾರಿಕ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳದ ವೇಳೆ ವಿಪರೀತ ಕೋಪಗೊಂಡ ನೂರುನ್ನಿಸಾ, ಮನೆಯಲ್ಲಿದ್ದ ಇಬ್ಬರು ಮುಗ್ಧ ಮಕ್ಕಳನ್ನು ಮನೆಯ ಸಮೀಪದ ಬಾವಿಗೆ ಎಸೆದಿದ್ದಾಳೆ. ನೂರುನ್ನಿಸಾಳ ಸ್ವಂತ ಮಗು (ಮೂರೂವರೆ ವರ್ಷ), ಗಂಡನ ತಂಗಿಯ ಮಗು (ಮೂರು ವರ್ಷ)ವನ್ನು ಎಸೆದಿದ್ದಾಳೆ.

ಘಟನೆ ತಿಳಿದ ತಕ್ಷಣವೇ ಸ್ಥಳೀಯರು ಮಕ್ಕಳನ್ನು ಬಾವಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ಯತ್ನ ನಡೆಸಿದರು. ಆದರೆ ಗಂಡನ ತಂಗಿಯ ಮೂರು ವರ್ಷದ ಮಗು ಕೊನೆಯುಸಿರೆಳೆದಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿರುವ ನೂರುನ್ನಿಸಾಳ ಮೂರೂವರೆ ವರ್ಷದ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದೆ. ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ. ಸಾಂಸಾರಿಕ ಕೋಪಕ್ಕೆ ಮುಗ್ಧ ಮಗುವೊಂದು ಬಲಿಯಾಗಿರುವುದು ಸ್ಥಳೀಯರಲ್ಲಿ ತೀವ್ರ ದಿಗ್ಭ್ರಮೆ ಮೂಡಿಸಿದೆ.