ಧಾರವಾಡದಲ್ಲಿ ವಿಚ್ಛೇದನ ಪ್ರಕರಣದ ವಿಚಾರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಪತಿ ಶಶಿಧರ್ ಶಿರಾಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪತ್ನಿಯ ಕಡೆಯವರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಶಶಿಧರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಧಾರವಾಡದಲ್ಲಿ ದಂಪತಿ ನಡುವಿನ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ಕಲಹವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ನ್ಯಾಯಾಲಯದಲ್ಲಿ ಡಿವೋರ್ಸ್ ಕೇಸ್ ವಿಚಾರಣೆ ಮುಗಿಸಿಕೊಂಡು ವಾಪಸ್ ಮನೆಗೆ ತೆರಳುತ್ತಿದ್ದ ಪತಿಯ ಮೇಲೆಯೇ ಪತ್ನಿಯ ಕಡೆಯವರು ಮಾರಣಾಂತಿಕ ಹಲ್ಲೆ ನಡೆಸಿ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಧಾರವಾಡ ನಗರದ ಎಸ್‌ಬಿಐ ಮೇನ್ ಬ್ರ್ಯಾಂಚ್ ಸಮೀಪ ನಡೆದಿದೆ.

ಧಾರವಾಡದ ಮೆಹಬೂಬನಗರದ ನಿವಾಸಿಯಾಗಿರುವ ಶಶಿಧರ್ ಶಿರಾಳೆ ಹಲ್ಲೆಗೊಳಗಾದ ದುರ್ಧೈವಿ. ಶಶಿಧರ್ ಹಾಗೂ ಆತನ ಪತ್ನಿ ಕೆಲವು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಕಲಹ ಶುರುವಾಗಿದ್ದವು. ಈ ಹಿನ್ನೆಲೆಯಲ್ಲಿ ಪತಿಯಿಂದ ಬಿಡುಗಡೆ ಕೋರಿ ಪತ್ನಿಯು ಧಾರವಾಡದ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆಯು ಮಂಗಳವಾರ ನ್ಯಾಯಾಲಯದಲ್ಲಿ ನಿಗದಿಯಾಗಿದ್ದರಿಂದ ಶಶಿಧರ್ ಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಎಸ್‌ಬಿಐ ಮುಖ್ಯ ಶಾಖೆಯ ಸಮೀಪ ಸುಮಾರು 6 ಜನರಿದ್ದ ಸಶಸ್ತ್ರ ಗುಂಪೊಂದು ಶಶಿಧರ್ ಅವರನ್ನು ತಡೆದು ಇದ್ದಕ್ಕಿದ್ದಂತೆ ಮನಬಂದತೆ ಹಲ್ಲೆ ನಡೆಸಿದೆ.

ಖಾಸಗಿ ಭಾಗ, ತಲೆ ಮತ್ತು ಕೈಗೆ ಗಂಭೀರ ಗಾಯ:

ಸುಮಾರು ಆರು ಜನರಿದ್ದ ಗ್ಯಾಂಗ್ ಶಶಿಧರ್ ಅವರ ಮೇಲೆ ರಕ್ತಸಿಕ್ತ ದಾಳಿ ನಡೆಸಿದ್ದು, ಹಲ್ಲೆಯ ಭರದಲ್ಲಿ ಶಶಿಧರ್ ಅವರ ತಲೆ ಹಾಗೂ ಕೈ ಭಾಗ ಮಾತ್ರವಲ್ಲ ಖಾಸಗಿ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಶಿಧರ್ ಅವರನ್ನು ತಕ್ಷಣವೇ ಸ್ಥಳೀಯರ ನೆರವಿನಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶಶಿಧರ್ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಹಲ್ಲೆಗೆ ನಿಖರ ಕಾರಣವೇನು?

ಪತ್ನಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ, ಶಶಿಧರ್ ಮಾತ್ರ ಡಿವೋರ್ಸ್ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪತ್ನಿಯ ಕಡೆಯವರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.