ಆನ್‌ಲೈನ್ ಶಾಪಿಂಗ್ ದೈತ್ಯ ಅಮೆಜಾನ್‌ನ 'ಅಮೆಜಾನ್ ನೌ' ಸೇವೆಯು ಕಳೆದ ಮೂರು ತಿಂಗಳಲ್ಲಿ 1 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ದಾಟಿದೆ. ಈ ಅತಿವೇಗದ ಡೆಲಿವರಿ ಸೇವೆಯು ಇದೀಗ ಧಾರವಾಡ, ಪಡುಬಿದ್ರಿಯಂತಹ 60ಕ್ಕೂ ಹೆಚ್ಚು ಸಣ್ಣ ನಗರಗಳಿಗೂ ವಿಸ್ತರಿಸಿದ್ದು, ಅಮೆಜಾನ್ ಇಂಡಿಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿ ಹೊರಹೊಮ್ಮಿದೆ.
ಬೆಂಗಳೂರು: ಆನ್‌ಲೈನ್ ಶಾಪಿಂಗ್ ದೈತ್ಯ ಅಮೆಜಾನ್‌ನ ಅತಿವೇಗದ ಡೆಲಿವರಿ ಸೇವೆಯಾದ 'ಅಮೆಜಾನ್ ನೌ' ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಸೇವೆಯ ವಾರ್ಷಿಕ ಒಟ್ಟು ವಹಿವಾಟು ಬರೋಬ್ಬರಿ 1 ಬಿಲಿಯನ್ ಡಾಲರ್ ದಾಟಿದೆ ಎಂದು ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ.
ಸೇವೆ ಆರಂಭವಾದಾಗಿನಿಂದಲೂ ಪ್ರತಿ ತ್ರೈಮಾಸಿಕದಲ್ಲೂ ಗ್ರಾಹಕರಿಂದ ಬರುವ ಆರ್ಡರ್‌ಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ. ಈ ಮೂಲಕ 'ಅಮೆಜಾನ್ ನೌ', ಅಮೆಜಾನ್ ಇಂಡಿಯಾದ ಇತಿಹಾಸದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ವಿಭಾಗವಾಗಿ ಹೊರಹೊಮ್ಮಿದೆ.
ಟಿಯರ್-2, ಟಿಯರ್-3 ನಗರಗಳಿಗೂ ವಿಸ್ತರಣೆ:
ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗಿದ್ದ ಈ 'ಡೆಲಿವರಿ-ಇನ್-ಮಿನಿಟ್ಸ್' (ಕೆಲವೇ ನಿಮಿಷಗಳಲ್ಲಿ ವಿತರಣೆ) ಸೇವೆಯನ್ನು ಕೇವಲ 10 ವಾರಗಳಲ್ಲಿ 4 ಪಟ್ಟಿಗಿಂತಲೂ ಹೆಚ್ಚಿನ ನಗರಗಳಿಗೆ ವಿಸ್ತರಿಸಲಾಗಿದೆ. ಪ್ರಸ್ತುತ ಕರ್ನಾಟಕದ ಪಡುಬಿದ್ರಿ, ಧಾರವಾಡ ಸೇರಿದಂತೆ ದೇಶದ ತಿರುಪತಿ, ಗುಂಟೂರು, ಗುರುದಾಸ್‌ಪುರ, ಜಲಂಧರ್, ವೆಲ್ಲೂರ್, ವಾರಂಗಲ್ ಹಾಗೂ ಬರ್ಹಾಂಪುರದಂತಹ 60ಕ್ಕೂ ಹೆಚ್ಚು ದ್ವಿತೀಯ ಮತ್ತು ತೃತೀಯ ಸ್ತರದ ನಗರಗಳಿಗೂ ಈ ಸೇವೆ ವಿಸ್ತರಣೆಯಾಗಿದೆ.
ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ಈ ಸಾಧನೆ ಮಾಡಲಾಗಿದ್ದು, ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ದೇಶದ ಒಟ್ಟು 100 ನಗರಗಳಿಗೆ ಸೇವೆಯನ್ನು ತಲುಪಿಸುವ ಬೃಹತ್ ಗುರಿಯನ್ನು ಕಂಪನಿ ಹೊಂದಿದೆ. ಇದಕ್ಕಾಗಿ ಅಮೆಜಾನ್ ದೇಶಾದ್ಯಂತ 750ಕ್ಕೂ ಹೆಚ್ಚು ಮೈಕ್ರೋ-ಫುಲ್‌ಫಿಲ್‌ಮೆಂಟ್ ಹಾಗೂ ಅರ್ಬನ್ ಫುಲ್‌ಫಿಲ್‌ಮೆಂಟ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಸುಸಜ್ಜಿತ ನೆಟ್‌ವರ್ಕ್ ನಿರ್ಮಿಸಿದೆ.
ದಿನಸಿಯಿಂದ ಎಲೆಕ್ಟ್ರಾನಿಕ್ಸ್‌ವರೆಗೆ ಎಲ್ಲವೂ ಕೆಲವೇ ನಿಮಿಷಗಳಲ್ಲಿ ಲಭ್ಯ
'ಅಮೆಜಾನ್ ನೌ' ಮೂಲಕ ಮಾರಾಟಗಾರರು ದೈನಂದಿನ ಅಗತ್ಯ ವಸ್ತುಗಳನ್ನು ಗ್ರಾಹಕರಿಗೆ ನಿಮಿಷಗಳಲ್ಲಿಯೇ ತಲುಪಿಸುತ್ತಿದ್ದಾರೆ. ತಾಜಾ ಹಣ್ಣು-ತರಕಾರಿಗಳು, ದಿನಸಿ ವಸ್ತುಗಳು, ಫ್ರೋಜನ್ ಫುಡ್, ಸೌಂದರ್ಯವರ್ಧಕಗಳು, ಫ್ಯಾಷನ್ ಉತ್ಪನ್ನಗಳು ಹಾಗೂ ಸಣ್ಣ ಗೃಹೋಪಯೋಗಿ ಮತ್ತು ಅಡುಗೆಮನೆ ಉಪಕರಣಗಳನ್ನು ಗ್ರಾಹಕರು ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಪಡೆಯಬಹುದಾಗಿದೆ.
ಈ ಅಭೂತಪೂರ್ವ ಯಶಸ್ಸಿನ ಬಗ್ಗೆ ಮಾತನಾಡಿದ ಅಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್, "ಅಲ್ಪಾವಧಿಯಲ್ಲೇ ಅಮೆಜಾನ್ ನೌ 1 ಬಿಲಿಯನ್ ಡಾಲರ್ ವಹಿವಾಟು ದಾಟಿರುವುದು ನಮಗೆ ಅತೀವ ಸಂತಸ ತಂದಿದೆ. ಪ್ರತಿ ತ್ರೈಮಾಸಿಕದಲ್ಲೂ ಆರ್ಡರ್‌ಗಳು ದ್ವಿಗುಣಗೊಳ್ಳುತ್ತಿರುವುದು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ದೀಪಾವಳಿ ಹೊತ್ತಿಗೆ ಉತ್ತರದ ಗುರುದಾಸ್‌ಪುರದಿಂದ ದಕ್ಷಿಣದ ವೆಂಬಯಂವರೆಗೂ, ಒಟ್ಟು 100 ನಗರಗಳಿಗೆ ಈ ಸೇವೆಯನ್ನು ತಲುಪಿಸಲು ನಾವು ಸಿದ್ಧರಾಗಿದ್ದೇವೆ. ಈ ಹಬ್ಬದ ಸೀಸನ್‌ನಲ್ಲಿ ಗ್ರಾಹಕರು ಅತಿ ಹೆಚ್ಚು ಉತ್ಪನ್ನಗಳನ್ನು ಅತಿ ವೇಗವಾಗಿ ಪಡೆಯಲಿದ್ದಾರೆ" ಎಂದು ತಿಳಿಸಿದ್ದಾರೆ.
ಭವಿಷ್ಯದ ಬೃಹತ್ ಯೋಜನೆ
ಜೂನ್ 2026ರಲ್ಲೇ ಅಮೆಜಾನ್, ಭಾರತದ 300ಕ್ಕೂ ಹೆಚ್ಚು ನಗರಗಳಿಗೆ 'ಅಮೆಜಾನ್ ನೌ' ಸೇವೆಯನ್ನು ವಿಸ್ತರಿಸುವ ಮೂಲಕ ದೇಶದ ಅತಿ ದೊಡ್ಡ 'ಡೆಲಿವರಿ-ಇನ್-ಮಿನಿಟ್ಸ್' ನೆಟ್‌ವರ್ಕ್ ನಿರ್ಮಿಸುವ ಗುರಿಯನ್ನು ಘೋಷಿಸಿತ್ತು. ಪ್ರಸ್ತುತ ಹತ್ತಾರು ಸಾವಿರ ಉತ್ಪನ್ನಗಳನ್ನು ಕೆಲವೇ ನಿಮಿಷಗಳು ಅಥವಾ ಗಂಟೆಗಳಲ್ಲಿ ತಲುಪಿಸುತ್ತಿರುವ ಅಮೆಜಾನ್, 10 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ಅದೇ ದಿನ ಡೆಲಿವರಿ ಹಾಗೂ 40 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ಮರುದಿನ ಡೆಲಿವರಿ ಮಾಡುತ್ತಿದೆ. ಜೊತೆಗೆ ಪ್ರೈಮ್ ಸದಸ್ಯರಿಗೆ ಉಚಿತ ಡೆಲಿವರಿ ಸೌಲಭ್ಯವನ್ನೂ ಯಶಸ್ವಿಯಾಗಿ ಮುಂದುವರಿಸುತ್ತಿದೆ.


