ಬೆಳಗಾವಿಯಲ್ಲಿ 80 ವರ್ಷದ ವೃದ್ಧೆಯೊಬ್ಬಳು, ಇತರರ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾಳೆ. ಜಮೀನಿನ ನಿಜವಾದ ಮಾಲೀಕರು ದೂರು ನೀಡಿದ ನಂತರ ಈಕೆಯ ವಂಚನೆಯ ಜಾಲ ಬಯಲಾಗಿದ್ದು, ಪೊಲೀಸರು ಆರೋಪಿ ವೃದ್ಧೆಯನ್ನು ಬಂಧಿಸಿದ್ದಾರೆ.

ಬೆಳಗಾವಿ: ವಯಸ್ಸು ಎನ್ನೋದು ದೇಹಕ್ಕೇ ವಿನಾ ಮನಸ್ಸಿಗಲ್ಲ ಎನ್ನುವ ಮಾತಿದೆ. ಇದನ್ನು ಸಾಧನೆ ಮಾಡುವವರಿಗೆ ಹೆಚ್ಚಾಗಿ ಹೇಳುವ ಮಾತು. ಆದರೆ ಬೆಳಗಾವಿಯ 80 ವರ್ಷದ ಅಜ್ಜಿ ಇದೀಗ ಪರರ ಜಮೀನುಗಳನ್ನು ತನ್ನದೇ ಜಮೀನು ಎಂದು ನಕಲಿ ದಾಖಲೆಯನ್ನು ಸೃಷ್ಟಿಸಿ ಹಲವಾರು ಮಂದಿಗೆ ವಂಚಿಸಿ ಈಗ ಅಂದರ್​ ಆಗಿರೋ ಘಟನೆ ನಡೆದಿದೆ. ಮೋಸ ಹೋಗುವವರು ಇರುವವರೆಗೂ, ವಯಸ್ಸಿನ ಅಡ್ಡಿಯಿಲ್ಲದೇ ಮೋಸ ಮಾಡುವವರು ಇರುತ್ತಾರೆ ಎನ್ನುವುದಕ್ಕೆ ಈ ಕಿಲಾಡಿ ಅಜ್ಜಿಯೇ ಸಾಕ್ಷಿಯಾಗಿದ್ದಾಳೆ.

ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪರಿಶವಾಡಕರ್​ ಎನ್ನುವ ವೃದ್ಧೆ ತನ್ನ ಗ್ರಾಮದಲ್ಲಿ ಇರುವ ಅಕ್ಕ-ಪಕ್ಕದ ಜಮೀನುಗಳ ಒಡತಿ ತಾನೇ ಎಂದು ಬಿಂಬಿಸಿ, ಅದರ ನಕಲಿ ದಾಖಲೆಗಳನ್ನೂ ಸೃಷ್ಟಿಸಿ ಮಾರಾಟ ಮಾಡಿದ್ದಾಳೆ. ಈ ಮೂಲಕ ಕೋಟ್ಯಂತರ ರೂಪಾಯಿ ಕಮಾಯಿಯನ್ನೂ ಮಾಡಿದ್ದಾಳೆ. ಮೋಸ ಮಾಡುವವರು ಎಷ್ಟು ಎಂದು ಮಾಡಿಯಾರು? ಕೊನೆಗೆ ಜಮೀನಿನ ಮಾಲೀಕರೊಬ್ಬರು ಸಲ್ಲಿಸಿದ ಕಂಪ್ಲೇಂಟ್​ ಆಧಾರದ ಮೇಲೆ ಪೊಲೀಸರು ಈಕೆಯ ಜಾತಕ ಬಿಚ್ಚಿದಾಗ, ಒಂದೊಂದೇ ಬಯಲಿಗೆ ಬಂದಿದೆ. ಸದ್ಯ ಈಕೆ ಮಾರ್ಕೆಟ್ ಠಾಣೆ ಪೊಲೀಸರ ಅತಿಥಿಯಾಗಿದ್ದಾಳೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ

ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313 ಹಾಗೂ ಸಿಟಿಎಸ್ ನಂ.944ರ ಜಾಗ ರತ್ನಾ ಯಶವಂತ ಮಲ್ಯೂಕರ ಎನ್ನುವವರ ಹೆಸರಿನಲ್ಲಿತ್ತು. ಈ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡುವ ಉದ್ದೇಶದಿಂದ ಮಂದಾಕಿವಿ, ರತ್ನಾ ಅವರಂತೆ ನಟನೆ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿದಳು. ಕೊನೆಗೆ ಸಾಲದು ಎನ್ನುವುದಕ್ಕೆ 2003ರಲ್ಲಿ ಬೆಳಗಾವಿ ಉತ್ತರ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ ಆರೋಪಿ ಈಕೆ, ಅವರದ್ದೇ ಹೆಸರಿನಲ್ಲಿ ವೆಬ್ ಕ್ಯಾಮೆರಾದಲ್ಲಿ ಫೋಟೊ ತೆಗೆಸಿಕೊಂಡಿದ್ದಳು. ಮಾತ್ರವಲ್ಲದೇ, ಅವರ ಹೆಸರಿನಲ್ಲಿ ಹೆಬ್ಬೆರಳು ಗುರುತು ಹಾಗೂ ಸಹಿ ನೀಡಿ ಜಾಗವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಳು.

ಕಿತಾಪತಿ ಬಯಲಿಗೆ

ಇದು ಕೊನೆಗೆ ಮಾಲೀಕರ ಗಮನಕ್ಕೆ ಬಂದಾಗ, ಈಕೆಯ ಒಂದೊಂದೇ ಕಿತಾಪತಿ ಬಯಲಿಗೆ ಬಂದಿದೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂದಾಕಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಅಂಶಗಳು ಬಹಿರಂಗಗೊಂಡಿವೆ. ಪ್ರಕರಣದಲ್ಲಿ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ರಾಹುಲ್ ಅನೀಲ ಮಗದುಮ್ ಎಂಬಾತನ ವಿರುದ್ಧವೂ ಪ್ರಕರಣ ದಾಟಲಾಗಿದೆ. ರಾಹುಲ್ ಈಗಾಗಲೇ ದಾಖಲಾಗಿರುವ ಇನ್ನೆರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ರಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.