ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿ ನಿಧಿ ಸಿಗುತ್ತದೆ ಎಂಬ ನಂಬಿಕೆಯಿಂದ ಮನೆಯ ಬೆಡ್‌ರೂಂನಲ್ಲೇ 50 ಅಡಿ ಆಳದ ಗುಂಡಿ ತೋಡಿದ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ಬಿಹಾರ ಮೂಲದ ಆರು…

ಗಂಗಾವತಿ (ಸೆ.03): ನಿಧಿ ಸಿಗುತ್ತದೆ ಎಂಬ ಆಸೆಯಿಂದ ಮನೆಯೊಂದರೊಳಗೆ ಬರೋಬ್ಬರಿ 50 ಅಡಿ ಆಳದ ಗುಂಡಿ ತೋಡಿದ ಪ್ರಕರಣ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿ ಬೆಳಕಿಗೆ ಬಂದಿದೆ. ಕಳೆದ ಒಂದೂವರೆ ತಿಂಗಳಿನಿಂದ ಮನೆಯ ಬೆಡ್‌ರೂಂನಲ್ಲೇ ರಹಸ್ಯವಾಗಿ ಗುಂಡಿ ತೋಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕರ ದಂಪತಿ ಸೇರಿದಂತೆ ಒಟ್ಟು 8 ಜನರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಿಧಿಗಾಗಿ ಬಿಹಾರದಿಂದ ಆರು ಮಂದಿ ಕಾರ್ಮಿಕರನ್ನು ಕರೆಸಿ ಗುಂಡಿ ತೋಡಿಸಿರುವ ಆರೋಪ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಮತ್ತು ಅವರ ಪತ್ನಿ ನಾಗಬಿಂದು ವಿರುದ್ಧ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಬೆಡ್‌ರೂಂನಲ್ಲೇ 50 ಅಡಿ ಗುಂಡಿ!

ಪೊಲೀಸ್ ತನಿಖೆಯಲ್ಲಿ ಹೊರಬಂದಿರುವ ಮಾಹಿತಿಯ ಪ್ರಕಾರ, ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ತಮ್ಮ ಮನೆಯಲ್ಲಿ ನಿಧಿ ಇದೆ ಎಂದು ಕಾರ್ಮಿಕರಿಗೆ ಹೇಳಿದ್ದರಂತೆ. ಸುಮಾರು 50 ಅಡಿ ಆಳಕ್ಕೆ ಅಗೆದರೆ ನಿಧಿ ಸಿಗುತ್ತದೆ ಎಂದು ನಂಬಿಸಿ, ಬಿಹಾರ ರಾಜ್ಯದ ಆರು ಮಂದಿ ಗೌಂಡಿಗಳನ್ನು ಗುಂಡಿ ತೋಡುವ ಕೆಲಸಕ್ಕೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ಮನೆಯ ಮಾಲೀಕರು ಸುಮಾರು ಒಂದೂವರೆ ತಿಂಗಳ ಹಿಂದೆಯೇ ಮನೆ ಖಾಲಿ ಮಾಡಿ ಬೆಂಗಳೂರಿಗೆ ತೆರಳಿದ್ದು, ಮನೆಯ ಬೆಡ್‌ರೂಂನಲ್ಲಿ ಗುಂಡಿ ತೋಡುವಂತೆ ಕಾರ್ಮಿಕರಿಗೆ ಸೂಚಿಸಿದ್ದರು ಎನ್ನಲಾಗಿದೆ.

ಯಾರಿಗೂ ಗೊತ್ತಾಗದಂತೆ ರಾತ್ರಿಯಲ್ಲಿ ‘ನಿಧಿ ಶೋಧ’!

ಮನೆಯ ಮಾಲೀಕರ ಮಾತನ್ನು ನಂಬಿದ ಆರು ಮಂದಿ ಕಾರ್ಮಿಕರು ಕಳೆದ ಒಂದೂವರೆ ತಿಂಗಳಿನಿಂದ ರಾತ್ರಿಯ ವೇಳೆ ಗುಂಡಿ ತೋಡುತ್ತಿದ್ದರು ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಶಬ್ದ ಮಾಡದೆ ಗುಂಡಿ ಅಗೆಯಲಾಗುತ್ತಿತ್ತು ಎನ್ನಲಾಗಿದೆ. ಅಗೆದ ಮಣ್ಣನ್ನು ಹೊರಗೆ ಹಾಕಿದರೆ ವಿಷಯ ಬಯಲಾಗುವ ಸಾಧ್ಯತೆ ಇದ್ದುದರಿಂದ, ಮಣ್ಣನ್ನು ಮನೆಯೊಳಗೇ ಸುಮಾರು 25ಕ್ಕೂ ಹೆಚ್ಚು ಚೀಲಗಳಲ್ಲಿ ತುಂಬಿ ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗುಂಡಿ ತೋಡುತ್ತಿದ್ದಾಗ ನೀರು ಬಂದರೂ ನಿಲ್ಲಲಿಲ್ಲ!

ಗುಂಡಿ ಅಗೆಯುವ ಸಂದರ್ಭದಲ್ಲಿ ನೀರು ಕೂಡ ಬಂದಿತ್ತು ಎನ್ನಲಾಗಿದ್ದು, ಅದನ್ನು ಬಕೆಟ್‌ಗಳ ಮೂಲಕ ಹೊರಗೆ ತೆಗೆದು ಮತ್ತೆ ಗುಂಡಿ ತೋಡುವ ಕೆಲಸ ಮುಂದುವರಿಸಲಾಗಿತ್ತು ಎಂದು ಕಾರ್ಮಿಕರು ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಮನೆಯೊಳಗೆ ಇಷ್ಟೊಂದು ಆಳದ ಗುಂಡಿ ತೋಡುತ್ತಿದ್ದರೂ ಹೊರಗಿನವರಿಗೆ ಅನುಮಾನ ಬಾರದಂತೆ ಕೆಲಸ ನಡೆಸಲಾಗಿತ್ತು ಎನ್ನಲಾಗಿದೆ.

6 ಕಾರ್ಮಿಕರು ಪೊಲೀಸರ ವಶದಲ್ಲಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್, ಅವರ ಪತ್ನಿ ನಾಗಬಿಂದು ಹಾಗೂ ಬಿಹಾರ ಮೂಲದ ಸಂತೋಷ ಬಸವನ್, ಮಿಥುನ್ ಕುಮಾರ್, ಅಭಿಷೇಕ್ ಪವನ್, ಮಂಜೇಶ್ ಪಾಸ್ವಾನ್, ಬಿಹಕಾಶ್ ಕುಮಾರ್ ಪವನ್ ಮತ್ತು ಶಂಕರ ಪವನ್ ಸೇರಿದಂತೆ ಒಟ್ಟು 8 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರು ಮಂದಿ ಬಿಹಾರ ಮೂಲದ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ದೂರು ನೀಡಿದ ಬಳಿಕ ಪ್ರಕರಣ ಬಯಲು

ವಡ್ಡರಹಟ್ಟಿ ಕ್ಯಾಂಪ್‌ನ ಅರುಣ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಧಿಯ ಆಸೆಯಿಂದ ಮನೆಯೊಳಗೆ 50 ಅಡಿ ಆಳದ ಗುಂಡಿ ತೋಡಿರುವ ಪ್ರಕರಣ ಇದೀಗ ಸ್ಥಳೀಯವಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ನಿಜವಾಗಿಯೂ ಮನೆಯಲ್ಲಿ ನಿಧಿ ಇದೆ ಎಂಬ ನಂಬಿಕೆಯಿಂದಲೇ ಈ ಗುಂಡಿ ತೋಡಲಾಗಿತ್ತೇ? ಅಥವಾ ಇದರ ಹಿಂದೆ ಬೇರೆ ಉದ್ದೇಶವಿದೆಯೇ? ಎಂಬ ಹಲವು ಪ್ರಶ್ನೆಗಳು ಮೂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.