ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ವಿಫಲರಾದರೂ, ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ. ಅವರ ಈ ಪ್ರದರ್ಶನದಿಂದ ಪೂರ್ವ ವಲಯ ತಂಡವು ಈಶಾನ್ಯ ವಲಯದ ವಿರುದ್ಧ 210 ರನ್‌ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ಬೆಂಗಳೂರು: 2026ನೇ ಸಾಲಿನ ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ, ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ಇದುವರೆಗೂ ಬ್ಯಾಟಿಂಗ್‌ನಲ್ಲಿ ವಿಸ್ಪೋಟಕ ಇನ್ನಿಂಗ್ಸ್ ಆಡುತ್ತಿದ್ದ ಬಿಹಾರ ಮೂಲದ ವೈಭವ್ ಸೂರ್ಯವಂಶಿ, ಬೌಲಿಂಗ್‌ನಲ್ಲೂ ತಾನೇನು ಕಮ್ಮಿಯಿಲ್ಲ ಎನ್ನುವಂತೆ ಪ್ರದರ್ಶನ ತೋರಿದ್ದಾರೆ. ವೈಭವ್ ಸೂರ್ಯವಂಶಿಯ ಮಿಂಚಿನ ಬೌಲಿಂಗ್ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪೂರ್ವ ವಲಯದ ಪರ ಕಣಕ್ಕಿಳಿದಿರುವ ವೈಭವ್ ಸೂರ್ಯವಂಶಿ, ಈಶಾನ್ಯ ವಲಯ ಎದುರಿನ ಎರಡನೇ ಇನ್ನಿಂಗ್ಸ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ವೈಭವ್ ಸೂರ್ಯವಂಶಿ, ಎರಡನೇ ಇನ್ನಿಂಗ್ಸ್‌ನಲ್ಲಿ ತಾವು ಎಸೆದ ಎರಡನೇ ಓವರ್‌ನಲ್ಲೇ ಈಶಾನ್ಯ ವಲಯ ತಂಡದ ಬ್ಯಾಟರ್ ಕಿಶನ್ ಲಿಂಗ್‌ದೋಹ್ ಹಾಗೂ ಇಮ್ಲಿವತಿ ಲೆಮ್‌ಚೂರ್ ಅವರ ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ವೈಭವ್ ಸೂರ್ಯವಂಶಿ ಎರಡು ವಿಕೆಟ್ ಕಬಳಿಸುತ್ತಿದ್ದಂತೆಯೇ ದುಲೀಪ್ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೂರ್ವ ವಲಯವು ಗೆಲುವು ಬಹುತೇಕ ಖಚಿತಪಡಿಸಿಕೊಂಡಿತು. ಭಾರೀ ಫಾಲೋ ಆನ್ ಹಿನ್ನೆಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಈಶಾನ್ಯ ವಲಯ ತಂಡವು ಎರಡನೇ ಇನ್ನಿಂಗ್ಸ್‌ನಲ್ಲೂ 146 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಪೂರ್ವ ವಲಯ ತಂಡವು 210 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ಹೀಗಿತ್ತು ನೋಡಿ ವೈಭವ್ ಸೂರ್ಯವಂಶಿ ಮಿಂಚಿನ ಬೌಲಿಂಗ್:

Scroll to load tweet…

ವೈಭವ್ ಬ್ಯಾಟಿಂಗ್‌ನಲ್ಲಿ ಫೇಲ್, ಬೌಲಿಂಗ್‌ನಲ್ಲಿ ಶೈನ್:

ಭಾರತ ತಂಡದ ಪರ ಇತ್ತೀಚೆಗಷ್ಟೇ ಜಿಂಬಾಬ್ವೆ ಪ್ರವಾಸ ಮುಗಿಸಿ ತವರಿಗೆ ವಾಪಾಸ್ಸಾಗಿದ್ದ ವೈಭವ್ ಸೂರ್ಯವಂಶಿ, ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದಾರೆ. ಪೂರ್ವ ವಲಯದ ಉಪನಾಯಕನಾಗಿಯೂ ನೇಮಕವಾಗಿರುವ ವೈಭವ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದರು. ವೈಭವ್ ಸೂರ್ಯವಂಶಿ ಎರಡು ಆಕರ್ಷಕ ಬೌಂಡರಿ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

ಇನ್ನು ಬ್ಯಾಟಿಂಗ್‌ನಲ್ಲಿ ವಿಫಲವಾದರೂ, ವೈಭವ್ ಸೂರ್ಯವಂಶಿ ಪೂರ್ವ ವಲಯದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಬೌಲಿಂಗ್ ನಡೆಸಿ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡು ಮಿಂಚಿದ್ದಾರೆ.

ಈಶಾನ್ಯ ವಲಯವನ್ನು ಬಗ್ಗುಬಡಿದ ಪೂರ್ವ ವಲಯ

ಪೂರ್ವ ವಲಯದ ಪರ ಶಹಬಾಜ್ ಅಹಮದ್ ಬಾರಿಸಿದ ಆಕರ್ಷಕ 167 ರನ್‌ಗಳ ನೆರವಿನಿಂದ ತಂಡ 467 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಮತ್ತೋರ್ವ ಬ್ಯಾಟರ್ ಸುದಿಪ್ ಕುಮಾರ್ ಘರಾಮಿ ಆಕರ್ಷಕ 146 ರನ್ ಚಚ್ಚಿ ಉತ್ತಮ ಸಾಥ್ ನೀಡಿದರು. ಇನ್ನು ಬೃಹತ್ ಮೊತ್ತ ಬೆನ್ನತ್ತಿದ ಈಶಾನ್ಯ ವಲಯ ತಂಡವು ಅಭಿಜಿತ್ ಕೆ ಸರ್ಕಾರ್ ಮಾರಕ ದಾಳಿ(20-5)ಗೆ ತತ್ತರಿಸಿ ಕೇವಲ 111 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಫಾಲೋ ಆನ್ ಸುಳಿಗೆ ಸಿಲುಕಿತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಅನುಕೂಲ್ ರಾಯ್(37-5) ಮಾರಕ ದಾಳಿಗೆ ತತ್ತರಿಸಿ 146 ರನ್‌ಗಳಿಗೆ ಸರ್ವಪತನ ಕಂಡಿತು.