ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಯಾರೆಂಬ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಕೊಹ್ಲಿ, ಧೋನಿ, ಸೆಹ್ವಾಗ್ ಅವರಂತಹ ದಿಗ್ಗಜರನ್ನು ಹೋಲಿಕೆ ಮಾಡಿದ ಅವರು, ಅಂತಿಮವಾಗಿ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರೇ ಶ್ರೇಷ್ಠ ಎಂದು ತಮ್ಮ ಆಯ್ಕೆಯನ್ನು ಪ್ರಕಟಿಸಿದ್ದಾರೆ.

ಚೆನ್ನೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು? ಈ ಪ್ರಶ್ನೆಗೆ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಉತ್ತರ ನೀಡಿದ್ದಾರೆ. ಅವರು ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ಟಾಕ್ ಶೋನಲ್ಲಿ ಮಾತನಾಡಿದ ಅಶ್ವಿನ್, ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ಸುನಿಲ್ ಗವಾಸ್ಕರ್, ಜಸ್ಪ್ರೀತ್ ಬುಮ್ರಾ, ವಿರೇಂದ್ರ ಸೆಹ್ವಾಗ್, ರವೀಂದ್ರ ಜಡೇಜಾ ಅವರಂತಹ ದಿಗ್ಗಜರನ್ನು ಹೋಲಿಕೆ ಮಾಡಿ ಅಂತಿಮವಾಗಿ ಸಚಿನ್ ಹೆಸರನ್ನು ಅಂತಿಮಗೊಳಿಸಿದರು.

ಕೊಹ್ಲಿಗಿಂತ ಬುಮ್ರಾ ಗ್ರೇಟ್ ಎಂದ ಅಶ್ವಿನ್

ಬೇರೆ ಬೇರೆ ತಲೆಮಾರಿನ ಆಟಗಾರರನ್ನು ಹೋಲಿಸಿ ಶ್ರೇಷ್ಠರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬಹಳ ಕುತೂಹಲಕಾರಿಯಾಗಿತ್ತು. ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ನಡುವೆ ಆಯ್ಕೆ ಮಾಡುವಾಗ, ಅಶ್ವಿನ್ ಕೊಹ್ಲಿಯನ್ನು ಕೈಬಿಟ್ಟು ಬುಮ್ರಾರನ್ನು ಆರಿಸಿದರು. "ನಾನೊಬ್ಬ ಬೌಲರ್ ಆಗಿರೋದ್ರಿಂದ ಬುಮ್ರಾರನ್ನು ಆಯ್ಕೆ ಮಾಡಿರಬಹುದು" ಎಂದು ಅಶ್ವಿನ್ ತಮಾಷೆಯಾಗಿ ಹೇಳಿದರು.

ಇನ್ನು, ರವೀಂದ್ರ ಜಡೇಜಾ ಮತ್ತು ಮಾಜಿ ನಾಯಕ ಎಂ.ಎಸ್. ಧೋನಿ ನಡುವಿನ ಹೋಲಿಕೆಯಲ್ಲಿ ಅಶ್ವಿನ್, ಧೋನಿಯನ್ನು ಆಯ್ಕೆ ಮಾಡಿದರು. ಆದರೆ, ವಿರೇಂದ್ರ ಸೆಹ್ವಾಗ್ ಮತ್ತು ಧೋನಿ ನಡುವೆ ಆಯ್ಕೆ ಬಂದಾಗ, ಧೋನಿಯನ್ನು ಬಿಟ್ಟು ಸೆಹ್ವಾಗ್‌ಗೆ ಅಶ್ವಿನ್ ಮಣೆ ಹಾಕಿದ್ದು ಅಚ್ಚರಿ ಮೂಡಿಸಿತು. ಇದಕ್ಕೂ ಮುನ್ನ ಅವರು ಸುನಿಲ್ ಗವಾಸ್ಕರ್ ಅವರನ್ನೂ ಬದಿಗಿಟ್ಟು ಸೆಹ್ವಾಗ್ ಅವರನ್ನೇ ಉತ್ತಮ ಆಟಗಾರ ಎಂದು ಆಯ್ಕೆ ಮಾಡಿದ್ದರು. ಸೌರವ್ ಗಂಗೂಲಿ ಮತ್ತು ತಮ್ಮ ನಡುವಿನ ಹೋಲಿಕೆಯಲ್ಲಿ, ಅಶ್ವಿನ್ ಮಾಜಿ ನಾಯಕ ಗಂಗೂಲಿಯನ್ನೇ ಆರಿಸಿಕೊಂಡರು.

ಅಂತಿಮ ನಾಲ್ಕರ ಪಟ್ಟಿಯಲ್ಲಿ ಸೆಹ್ವಾಗ್, ಬುಮ್ರಾಗೆ ಚಾನ್ಸ್

ಅಂತಿಮ ನಾಲ್ವರ ಪಟ್ಟಿಯಿಂದ ಇಬ್ಬರನ್ನು ಆಯ್ಕೆ ಮಾಡುವಾಗ, ಅಶ್ವಿನ್ ವಿರೇಂದ್ರ ಸೆಹ್ವಾಗ್ ಅವರನ್ನು ಕೈಬಿಟ್ಟು ಸಚಿನ್ ತೆಂಡೂಲ್ಕರ್ ಅವರನ್ನು ಉಳಿಸಿಕೊಂಡರು. ಹಾಗೆಯೇ, ಜಸ್ಪ್ರೀತ್ ಬುಮ್ರಾ ಬದಲಿಗೆ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರನ್ನು ಆಯ್ಕೆ ಮಾಡಿದರು. ಕೊನೆಯಲ್ಲಿ, ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಆಯ್ಕೆ ಮಾಡುವಾಗ, ತಮ್ಮ ವೈಯಕ್ತಿಕ ಇಷ್ಟವನ್ನು ಪರಿಗಣಿಸಿ ಸಚಿನ್ ಅವರೇ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಅಶ್ವಿನ್ ಘೋಷಿಸಿದರು. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್, ಸಚಿನ್‌ಗಿಂತ ಕೊಹ್ಲಿಯೇ ಶ್ರೇಷ್ಠ ಎಂಬ ಹೇಳಿಕೆ ನೀಡಿ ದೊಡ್ಡ ಚರ್ಚೆಗೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.