ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲಿಸಿದ ಬೃಹತ್ ಮುನ್ನಡೆಯ ಆಧಾರದ ಮೇಲೆ ಇಶಾನ್ ಕಿಶನ್ ಸಾರಥ್ಯದ ಈಸ್ಟ್ ಜೋನ್ (East Zone) ಚಾಂಪಿಯನ್ ಆಗಿ ಹೊರಹೊಮ್ಮಿದೆ.
ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲಿಸಿದ ಬೃಹತ್ ಮುನ್ನಡೆಯ ಆಧಾರದ ಮೇಲೆ ಇಶಾನ್ ಕಿಶನ್ ಸಾರಥ್ಯದ ಈಸ್ಟ್ ಜೋನ್ (East Zone) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬರೋಬ್ಬರಿ 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಈಸ್ಟ್ ಜೋನ್ ಪ್ರಶಸ್ ಮುಡಿಗೇರಿಸಿಕೊಂಡಿದೆ. ಪ್ರಶಸ್ತಿಯ ಜೊತೆಗೆ ಚಾಂಪಿಯನ್ ತಂಡ ಭರ್ಜರಿ ನಗದು ಬಹುಮಾನನು ಬಾಚಿಕೊಂಡಿದ್ದರೆ, ರನ್ನರ್-ಅಪ್ ಆದ ಸೌತ್ ಜೋನ್ ಮೇಲೂ (South Zone) ಹಣದ ಮಳೆಯಾಗಿದೆ!
ಈಸ್ಟ್ ಜೋನ್ 708 ರನ್!
ಫೈನಲ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಈಸ್ಟ್ ಜೋನ್ ಮೊದಲ ಇನ್ನಿಂಗ್ಸ್‌ನಲ್ಲಿ ರನ್‌ಗಳ ಬೆಟ್ಟವನ್ನೇ ನಿರ್ಮಿಸಿತು.
ನಾಯಕ ಇಶಾನ್ ಕಿಶನ್ ಆಕರ್ಷಕ 270 ರನ್‌ಗಳ ದ್ವಿಶತಕ ಸಿಡಿಸಿ ಮಿಂಚಿದರೆ ಕುಮಾರ್ ಕುಶಾಗ್ರ 101 ರನ್ ಬಾರಿಸಿದರು. ಪರಿಣಾಮ ಈಸ್ಟ್ ಜೋನ್ ಮೊದಲ ಇನ್ನಿಂಗ್ಸ್‌ನಲ್ಲಿ 708 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕೆ ಉತ್ತರವಾಗಿ ಸೌತ್ ಜೋನ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 336 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಈಸ್ಟ್ ಜೋನ್ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 372 ರನ್‌ಗಳ ಬೃಹತ್ ಮುನ್ನಡೆ ಪಡೆಯಿತು.
ಪಂದ್ಯ ಡ್ರಾ ಆದರೂ ಟ್ರೋಫಿ ಸಿಕ್ಕಿದ್ದು ಹೇಗೆ?
ನಾಲ್ಕನೇ ದಿನದಾಟದ ಅಂತ್ಯಕ್ಕೆ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ಪ್ರಥಮ ದರ್ಜೆ ಕ್ರಿಕೆಟ್‌ನ ನಿಯಮಗಳ ಪ್ರಕಾರ..ಫೈನಲ್ ಪಂದ್ಯ ಡ್ರಾಗೊಂಡರೆ ಮೊದಲ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಮುನ್ನಡೆ ಪಡೆದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಈ ಆಧಾರದ ಮೇಲೆ 372 ರನ್‌ಗಳ ಮುನ್ನಡೆ ಹೊಂದಿದ್ದ ಈಸ್ಟ್ ಜೋನ್ ತಂಡವನ್ನು ಅಧಿಕೃತವಾಗಿ ಚಾಂಪಿಯನ್ ಎಂದು ಘೋಷಿಸಲಾಯಿತು. 2013ರ ನಂತರ ಈಸ್ಟ್ ಜೋನ್‌ಗೆ ಒಲಿದ ಮೊದಲ ದುಲೀಪ್ ಟ್ರೋಫಿ ಇದಾಗಿದೆ.
ಯಾರಿಗೆ ಎಷ್ಟು ಲಕ್ಷ?
ದುಲೀಪ್ ಟ್ರೋಫಿ 2026 ಟೂರ್ನಿಗೆ ಒಟ್ಟು 1.5 ಕೋಟಿ ರೂಪಾಯಿ ಬಹುಮಾನ ಮೊತ್ತ ನಿಗದಿಪಡಿಸಲಾಗಿತ್ತು. ಚಾಂಪಿಯನ್ (ಈಸ್ಟ್ ಜೋನ್) ಟ್ರೋಫಿಯ ಜೊತೆಗೆ ಬರೋಬ್ಬರಿ 1 ಕೋಟಿ ರೂಪಾಯಿ ಬಹುಮಾನ ತನ್ನದಾಗಿಸಿಕೊಂಡಿತು. ರನ್ನರ್-ಅಪ್ (ಸೌತ್ ಜೋನ್): ಪ್ರಶಸ್ತಿ ಗೆಲ್ಲಲು ವಿಫಲವಾದರೂ ಸೌತ್ ಜೋನ್ ತಂಡಕ್ಕೆ 50 ಲಕ್ಷ ರೂಪಾಯಿ ಪ್ರೈಜ್ ಮನಿ ಲಭಿಸಿದೆ. ಈ ಬಹುಮಾನದ ಮೊತ್ತವು ಯಾವುದೇ ಒಬ್ಬ ಆಟಗಾರನಿಗೆ ಸೀಮಿತವಾಗಿರದೆ ಇಡೀ ತಂಡದ ಆಟಗಾರರು ಹಾಗೂ ಸಪೋರ್ಟ್ ಸಿಬ್ಬಂದಿಯ ನಡುವೆ ಸಮನಾಗಿ ಹಂಚಿಕೆಯಾಗಲಿದೆ. ಒಟ್ಟಿನಲ್ಲಿ 13 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡ ಈಸ್ಟ್ ಜೋನ್ ಕೋಟಿ ರೂಪಾಯಿ ಬಹುಮಾನದೊಂದಿಗೆ ಬೀಗಿದರೆ ಫೈನಲ್‌ನಲ್ಲಿ ಎಡವಿದ ಸೌತ್ ಜೋನ್ ಅರ್ಧ ಕೋಟಿ ರೂಪಾಯಿ ನಗದು ಬಹುಮಾನದೊಂದಿಗೆ ಸಮಾಧಾನಪಟ್ಟುಕೊಂಡಿದೆ.


