ಸಿಎಸ್‌ಕೆ ತನ್ನ ನೂತನ ಕೋಚ್ ಆಯ್ಕೆಯನ್ನು ಬಹುತೇಕ ಫೈನಲ್ ಮಾಡಿದೆ. ಅಧಿಕೃತಿ ಘೋಷಣೆಯೊಂದೇ ಬಾಕಿ ಇದೆ ಎನ್ನಲಾಗಿದೆ. ಇದೆಲ್ಲದ ನಡುವೆ ಎಂ ಎಸ್‌ ಧೋನಿ ಹೊಸ ಕೋಚ್‌ಗೆ ಕಠಿಣ ಷರತ್ತು ವಿಧಿಸಿದ್ದಾರೆ. ಆ ಷರತ್ತು ಏನು ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರ ಹಾಗೂ ಯಶಸ್ವಿ ಫ್ರಾಂಚೈಸಿ ಎಂದೇ ಹೆಸರುವಾಸಿಯಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿ ಮಹತ್ವದ ಬದಲಾವಣೆಯ ಪರ್ವ ಆರಂಭವಾಗಿದೆ. ದೀರ್ಘ ಕಾಲದಿಂದ ಸಿಎಸ್‌ಕೆ ಯಶಸ್ಸಿನ ಹಿಂದಿನ ರೂವಾರಿಯಾಗಿದ್ದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದು, ಅವರ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.

ಈಗ ಕೇಳಿಬರುತ್ತಿರುವ ಬಿಸಿಬಿಸಿ ಸುದ್ದಿಯ ಪ್ರಕಾರ.. ಭಾರತ ತಂಡದ ಮಾಜಿ ಬ್ಯಾಟರ್ ಹೇಮಂಗ್ ಬದಾನಿ (Hemang Badani) ಸಿಎಸ್‌ಕೆಯ ನೂತನ ಹೆಡ್ ಕೋಚ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಮುಂದಿನ ವಾರವೇ ಅಧಿಕೃತ ಘೋಷಣೆ?

ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ನೂತನ ಮುಖ್ಯ ಕೋಚ್ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ವಾರವೇ ಈ ಬಗ್ಗೆ ಅಧಿಕೃತ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ಮಾಜಿ ನಾಯಕ ಎಂ.ಎಸ್. ಧೋನಿ, ಪ್ರಸ್ತುತ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಒಟ್ಟಾಗಿ ಈ ನಿರ್ಧಾರ ಕೈಗೊಳ್ಳಲಿವೆ.

ಸಿಎಸ್‌ಕೆ ತಂಡಕ್ಕೆ ಈ ಬಾರಿ ಭಾರತೀಯ ಮೂಲದ ಕೋಚಿಂಗ್ ಸಿಬ್ಬಂದಿಯೇ ಇರಬೇಕು ಎಂದು ಧೋನಿ ಪ್ರಬಲವಾಗಿ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ. ಭಾರತೀಯ ಆಟಗಾರರ ಮನಸ್ಥಿತಿ ಹಾಗೂ ಸ್ಥಳೀಯ ಪರಿಸ್ಥಿತಿಯನ್ನು ಚೆನ್ನಾಗಿ ಅರಿತಿರುವ ದೇಶಿ ಕೋಚ್ ಬಂದರೆ ತಂಡಕ್ಕೆ ಹೆಚ್ಚು ಅನುಕೂಲ ಎಂಬುದು ಧೋನಿ ಲೆಕ್ಕಾಚಾರ. ಈ ಕಾರಣಕ್ಕಾಗಿಯೇ ಹೇಮಂಗ್ ಬದಾನಿ ಹೆಸರು ಮುಂಚೂಣಿಗೆ ಬಂದಿದೆ.

ಧೋನಿ ವಿಧಿಸಿರುವ ಮುಖ್ಯ ಷರತ್ತೇನು?

ಹೊಸ ಕೋಚ್ ಆಯ್ಕೆಯಲ್ಲಿ ಎಂ.ಎಸ್. ಧೋನಿ ಒಂದು ಮಹತ್ವದ ನಿಯಮವನ್ನು ಮುಂದಿಟ್ಟಿದ್ದಾರೆ. ಅದೇನೆಂದರೆ— ಹೊಸ ಮುಖ್ಯ ಕೋಚ್ ಸಂಪೂರ್ಣವಾಗಿ ಸಿಎಸ್‌ಕೆಗೆ ಮಾತ್ರ ಸೀಮಿತವಾಗಿರಬೇಕು. ಈ ಹಿಂದೆ ಸ್ಟೀಫನ್ ಫ್ಲೆಮಿಂಗ್ ಐಪಿಎಲ್‌ನ ಸಿಎಸ್‌ಕೆ ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾದ 'ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್' (SA20) ಮತ್ತು ಅಮೆರಿಕದ 'ಟೆಕ್ಸಾಸ್ ಸೂಪರ್ ಕಿಂಗ್ಸ್' (MLC) ತಂಡಗಳಿಗೂ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಧೋನಿ ಈ ಪದ್ಧತಿಗೆ ಬ್ರೇಕ್ ಹಾಕಲು ಬಯಸಿದ್ದಾರೆ. ಬೇರೆ ಯಾವುದೇ ವಿದೇಶಿ ಲೀಗ್‌ಗಳ ಕಡೆ ಗಮನ ಹರಿಸದೆ, ಕೇವಲ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಅಭಿವೃದ್ಧಿ ಹಾಗೂ ಪ್ರದರ್ಶನದ ಕಡೆಗೆ ಮಾತ್ರ 100% ಗಮನ ನೀಡುವ ಕೋಚ್ ಬೇಕು ಎಂಬುದು ಧೋನಿ ನಿಲುವು.

ಹೇಮಂಗ್ ಬದಾನಿ ಯಾರು?

ಭಾರತ ಪರ ಆಡಿರುವ ಹೇಮಂಗ್ ಬದಾನಿ ಜಾಗತಿಕ ಟಿ20 ಲೀಗ್‌ಗಳಲ್ಲಿ ಕೋಚ್ ಆಗಿ ಅಪಾರ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆ ಕಾರ್ಯನಿರ್ವಹಿಸಿದ ಅನುಭವವಿದೆ. ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಟೂರ್ನಿಯಲ್ಲಿ 'ಸದರ್ನ್ ಬ್ರೇವ್' (Southern Brave) ತಂಡದ ಕೋಚ್ ಆಗಿದ್ದಾರೆ. ಯುಎಇಯ 'ಐಎಲ್‌ಟಿ20' (ILT20) ಲೀಗ್‌ನಲ್ಲಿ 'ದುಬೈ ಕ್ಯಾಪಿಟಲ್ಸ್' ತಂಡದ ಮುಖ್ಯ ಕೋಚ್ ಆಗಿ ಯಶಸ್ಸು ಕಂಡಿದ್ದಾರೆ. ಜೊತೆಗೆ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್‌ನ 'ಸಿಯಾಟಲ್ ಓರ್ಕಾಸ್' ತಂಡಕ್ಕೆ ಕನ್ಸಲ್ಟೆಂಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.

2023ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ನಂತರ ಸಿಎಸ್‌ಕೆ ಪ್ರದರ್ಶನದಲ್ಲಿ ಸ್ಥಿರತೆ ಕಾಣೆಯಾಗಿದೆ. ಸತತ ಮೂರು ಆವೃತ್ತಿಗಳಲ್ಲಿ ಪ್ಲೇಆಫ್ ಪ್ರವೇಶಿಸಲು ತಂಡ ವಿಫಲವಾಗಿದ್ದು, ಕಳೆದ ಸೀಸನ್‌ನಲ್ಲಿ (IPL 2026) ಎಂಟನೇ ಸ್ಥಾನಕ್ಕೆ ಕುಸಿದಿತ್ತು. ಸದಾ ಆಟಗಾರರ ಬೆಂಬಲಕ್ಕೆ ನಿಲ್ಲುವ ಸಿಎಸ್‌ಕೆ, ತಂಡಕ್ಕೆ ಮರುಜೀವ ನೀಡಲು ಮತ್ತು ಹೊಸ ರಣತಂತ್ರ ರೂಪಿಸಲು ಈಗ ಹೊಸ ನಾಯಕತ್ವ ಹಾಗೂ ಕೋಚಿಂಗ್ ಬಳಗದ ಮೊರೆ ಹೋಗಿದೆ. ಬದಾನಿ ಅವರು ವಿದೇಶಿ ಲೀಗ್‌ಗಳೊಂದಿಗಿನ ತಮ್ಮ ಒಪ್ಪಂದಗಳನ್ನು ಬದಿಗೊತ್ತಿ ಧೋನಿಯ ಷರತ್ತಿಗೆ ಒಪ್ಪಿಕೊಳ್ಳುತ್ತಾರಾ? ಸಿಎಸ್‌ಕೆ ಅಧಿಕೃತ ಮುದ್ರೆ ಬೀಳುವುದೊಂದೇ ಬಾಕಿ ಇದೆ.