ದಕ್ಷಿಣ ವಲಯ ವಿರುದ್ಧದ ದುಲೀಪ್ ಟ್ರೋಫಿ ಫೈನಲ್‌ನಲ್ಲಿ, ಪೂರ್ವ ವಲಯ ತಂಡವು ಇಶಾನ್ ಕಿಶನ್ ಅವರ ಭರ್ಜರಿ 270 ರನ್ ಮತ್ತು ಕುಮಾರ್ ಕುಶಾಗ್ರ ಅವರ ಶತಕದ ನೆರವಿನಿಂದ 708 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ. ಈ ಮೂಲಕ ತಂಡವು ಟೂರ್ನಿಯ ಇತಿಹಾಸದಲ್ಲಿ 7ನೇ ಗರಿಷ್ಠ ಸ್ಕೋರ್ ದಾಖಲಿಸಿತು.
ಚೆನ್ನೈ: ದಕ್ಷಿಣ ವಲಯ ವಿರುದ್ಧ ದುಲೀಪ್ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪೂರ್ವ ವಲಯ ತಂಡ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ಇಶಾನ್ ಕಿಶನ್ ದ್ವಿಶತಕ, ಕುಮಾರ್ ಕುಶಾಗ್ರ ಭರ್ಜರಿ ಶತಕದ ನೆರವಿನಿಂದ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 163 ಓವರ್ ಆಡಿ ಬರೋಬ್ಬರಿ 708 ರನ್ ಕಲೆಹಾಕಿದೆ. 2ನೇ ದಿನದಾಟದ ಕೊನೆಯಲ್ಲಿ ತಂಡ ಆಲೌಟಾಯಿತು.
ಮೊದಲ ದಿನ ಪೂರ್ವ ತಂಡ 4 ವಿಕೆಟ್‌ಗೆ 385 ರನ್ ಗಳಿಸಿತ್ತು. ಸೋಮವಾರವೂ ತಂಡ ಅಬ್ಬರದ ಆಟ ಪ್ರದರ್ಶಿಸಿತು. 5ನೇ ವಿಕೆಟ್‌ಗೆ ಜೊತೆಗೂಡಿದ್ದ ಇಶಾನ್ ಕಿಶನ್ ಹಾಗೂ ಕುಶಾಗ್ರ 287 ಎಸೆತಗಳಲ್ಲಿ 230 ರನ್ ಜೊತೆಯಾಟವಾಡಿದರು. ಈ ಜೋಡಿ ಒಂದು ಏಕದಿನ ಇನ್ನಿಂಗ್ಸ್‌ನಷ್ಟು ಓವರ್ ಜೊತೆಯಾಗಿ ಆಡಿ ದಕ್ಷಿಣ ವಲಯದ ಬೌಲರ್‌ಗಳ ಬೆವರಿಳಿಸಿತು. ತಂಡ 100 ಓವರ್‌ಗಳಲ್ಲಿ 471 ರನ್ ಗಳಿಸಿದ್ದಾಗ ಕುಶಾಗ್ರ ವಿಕೆಟ್ ಕಳೆದುಕೊಂಡಿತು. ಅವರು 101 ರನ್ ಗಳಿಸಿ ನಿರ್ಗಮಿಸಿದರು.
ಬಳಿಕ ಇಶಾನ್‌ಗೆ ಜೊತೆಯಾಗಿದ್ದು ಅನುಕೂಲ್ ರಾಯ್. ಈ ಜೋಡಿ 180 ಎಸೆತಗಳಲ್ಲಿ 140 ರನ್ ಸೇರಿಸಿತು. ಈ ನಡುವೆ ದ್ವಿಶತಕ ಪೂರೈಸಿದ ಇಶಾನ್, 250ರ ಗಡಿಯನ್ನೂ ದಾಟಿದರು. ಆದರೆ 250 ರನ್ ಗಳಿಸಿದ್ದಾಗ ತೀವ್ರ ಬಳಲಿಕೆಯಿಂದ ಅವರು ಮೈದಾನ ತೊರೆದರು. ಅನುಕೂಲ್ 45, ಮೊಹಮ್ಮದ್ ಶಮಿ 28 ರನ್ ಗಳಿಸಿದರು. ಬಳಿಕ ಮತ್ತೆ ಕ್ರೀಸ್‌ಗೆ ಆಗಮಿಸಿದ ಇಶಾನ್ 20 ರನ್ ಸೇರಿಸಿದರು. 334 ಎಸೆತಗಳಲ್ಲಿ 30 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 270 ರನ್ ಗಳಿಸಿದ್ದ ಅವರನ್ನು ತ್ರಿಪುರಣ ವಿಜಯ್ ಪೆವಿಲಿಯನ್‌ಗೆ ಅಟ್ಟಿದರು. ಕೌನೈನ್ ಖುರೈಶಿ 40 ರನ್ ಕೊಡುಗೆ ನೀಡಿದರು. ತಂಡ 708 ರನ್‌ಗೆ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.
ಮೂವರು 140+ ರನ್:
ದಕ್ಷಿಣ ವಲಯದ ಬೌಲರ್‌ಗಳು ಪೂರ್ವ ವಲಯದ ಬ್ಯಾಟರ್‌ಗಳಿಂದ ದಂಡಿಸಲ್ಪಟ್ಟರು. ಭಾರತದ ತಾರಾ ವೇಗಿ ಮೊಹಮ್ಮದ್ ಸಿರಾಜ್ 25 ಓವರ್ ಎಸೆದು 140 ರನ್ ನೀಡಿದರೂ, ಒಂದೂ ವಿಕೆಟ್ ಪಡೆಯಲಿಲ್ಲ. ವಿಜಯ್ 4 ವಿಕೆಟ್ ಪಡೆದರೂ ಅದಕ್ಕಾಗಿ 180 ರನ್ ಬಿಟ್ಟುಕೊಟ್ಟರು. ಕರ್ನಾಟಕದ ಶ್ರೇಯಸ್ 165 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಸ್ಕೋರ್: ಪೂರ್ವ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 708/10 (ಇಶಾನ್ 270, ಕುಶಾಗ್ರ 101, ಅನುಕೂಲ್ 45, ಖುರೈಶಿ 40, ಶಮಿ 28, ವಿಜಯ್ 4-180, ಮಿಲಿಂದ್ 2-88, ಶ್ರೇಯಸ್ 2-165)
ಇಶಾನ್ ಕಿಶನ್ 270:
ಟೂರ್ನಿಯ 8ನೇ ಗರಿಷ್ಠಇಶಾನ್ ಗಳಿಸಿದ 270 ರನ್, ದುಲೀಪ್ ಟ್ರೋಫಿ ಟೂರ್ನಿಯಲ್ಲಿ ದಾಖಲಾದ 8ನೇ ಗರಿಷ್ಠ ವೈಯಕ್ತಿಕ ಸ್ಕೋರ್. 1987ರಲ್ಲಿ ಪೂರ್ವ ವಲಯ ವಿರುದ್ಧ ಉತ್ತರ ವಲಯ ತಂಡದ ರಮನ್ ಲಂಬಾ 320 ರನ್ ಕಲೆಹಾಕಿದ್ದು ಈಗಲೂ ದಾಖಲೆಯಾಗಿಯೇ ಉಳಿದಿದೆ. 1999ರಲ್ಲಿ ದಕ್ಷಿಣ ವಲಯ ವಿರುದ್ಧ ಉತ್ತರ ವಲಯದ ವಿರೇಂದ್ರ ಸೆಹ್ವಾಗ್ 274 ರನ್ ಸಿಡಿಸಿದ್ದರು. ಅದು 7ನೇ ಗರಿಷ್ಠ ಸ್ಕೋರ್.
708: ದುಲೀಪ್ ಟ್ರೋಫಿ ಟೂರ್ನಿಯ 7ನೇ ಗರಿಷ್ಠ
ಪೂರ್ವ ವಲಯ ತಂಡ 708 ರನ್ ಗಳಿಸಿದ್ದು ಈ ಟೂರ್ನಿಯ ಇತಿಹಾಸದಲ್ಲೇ ದಾಖಲಾದ 7ನೇ ಗರಿಷ್ಠ ಸ್ಕೋರ್. 1987ರಲ್ಲಿ ಪೂರ್ವ ವಲಯದ ವಿರುದ್ಧ ಉತ್ತರ ವಲಯ ತಂಡ 868 ರನ್ ಕಲೆಹಾಕಿತ್ತು. ಅದು ಟೂರ್ನಿಯಲ್ಲಿ ದಾಖಲಾಗಿರುವ ಏಕೈಕ 800+ ಸ್ಕೋರ್. ಉಳಿದಂತೆ 9 ಬಾರಿ 700+ ರನ್ ದಾಖಲಾಗಿವೆ.


