ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕನ್ನಡಿಗ ದೇವದತ್ ಪಡಿಕ್ಕಲ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಬೆನ್ನಿನ ಮೇಲೆ ಜರ್ಸಿ ಹೆಸರು ಮತ್ತು ಸಂಖ್ಯೆಯ ಆಕಾರದಲ್ಲಿ ಸನ್ ಟ್ಯಾನ್ ಆಗಿದ್ದು, ಇದನ್ನು 'ಸೂರ್ಯ ನೀಡಿದ ಟ್ಯಾಟೂ' ಎಂದಿದ್ದಾರೆ.
ಬೆಂಗಳೂರು (ಆ.28): ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ ಸರಣಿ ಶ್ರೇಷ್ಠ (Player of the Series) ಪ್ರಶಸ್ತಿ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್, ಕನ್ನಡಿಗ ದೇವದತ್ ಪಡಿಕ್ಕಲ್, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಪರೂಪದ ಚಿತ್ರವೊಂದು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿದೆ. ಶ್ರೀಲಂಕಾದ ಕಡು ಬಿಸಿಲಿನಲ್ಲಿ ಸುದೀರ್ಘ ಅವಧಿ ಬ್ಯಾಟಿಂಗ್ ನಡೆಸಿ ಬೆವರಿಳಿಸಿದ ಪಡಿಕ್ಕಲ್ ಅವರ ಬೆನ್ನಿನ ಮೇಲೆ, ಅವರ ಜರ್ಸಿ ಹೆಸರು ಮತ್ತು ನಂಬರ್ ಆಕಾರದಲ್ಲಿ ಸನ್ ಟ್ಯಾನ್ (Sun Tan) ಆಗಿದೆ. ಅಂದರೆ ಸೂರ್ಯನ ಶಾಖಕ್ಕೆ ಅವರ ಜರ್ಸಿಯ ಹೆಸರು ಮತ್ತು ಸಂಖ್ಯೆ ಬೆನ್ನಿನ ಮೇಲೆಯೇ ಪ್ರಿಂಟ್ ಆದಂತೆ 'ಟ್ಯಾಟೂ' ಮಾದರಿಯಲ್ಲಿ ಮೂಡಿಬಂದಿದೆ.
ಬ್ಯಾಟಿಂಗ್ ಶ್ರಮದ ಅಪರೂಪದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪಡಿಕ್ಕಲ್, "ಕೊನೆಯ ಸ್ಲೈಡ್‌ನಲ್ಲಿ ಸೂರ್ಯ ನನಗೆ ಟ್ಯಾಟೂ ನೀಡಿದ್ದಾನೆ!" (The sun gave me a tattoo on the last slide) ಎಂದು ತಮಾಷೆಯಾಗಿ ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ಫೋಟೋ ಈಗ ಕ್ರಿಕೆಟ್ ಅಭಿಮಾನಿಗಳ ನಡುವೆ ಭಾರಿ ವೈರಲ್ ಆಗುತ್ತಿದೆ.
'ಸಿಕ್ಕ ಅವಕಾಶಕ್ಕಾಗಿ ನಾನು ಬಹಳ ಆಭಾರಿಯಾಗಿದ್ದೇನೆ. ಹಾಗೂ ಇನ್ನಷ್ಟು ಹಸಿವು ಹುಟ್ಟಿಕೊಂಡಿದೆ. ಅತ್ಯಂತ ಕಠಿಣ ಹೋರಾಟದ ಸಿರೀಸ್‌ನಲ್ಲಿ ಸಾಕಷ್ಟು ಕಲಿತುಕೊಂಡಿದ್ದೇನೆ. ಮುಂದಿನ ಸವಾಲಿಗಾಗಿ ಎದುರು ನೋಡುತ್ತಿದ್ದೇನೆ. ಈ ಫೋಟೋವಿನ ಕೊನೆಯ ಸ್ಲೈಡ್‌ನಲ್ಲಿ ಸೂರ್ಯ ನನಗೆ ಟ್ಯಾಟೂ ಹಾಕಿರುವ ಚಿತ್ರವಿದೆ' ಎಂದು ಬರೆದುಕೊಂಡದ್ದಾರೆ. ಕೊನೆಯ ಫೋಟೋವಿನಲ್ಲಿ ತಮ್ಮ ಬರೀ ಬೆನ್ನಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಅವರ ದೇಹದ ಮೇಲೆ ಜೆರ್ಸಿ ನಂಬರ್ ಹಾಗೂ ಹೆಸರು ಸನ್‌ಟ್ಯಾನ್ ಆಗಿರುವುದು ಮೊದಲ ನೋಟದಲ್ಲೇ ಕಾಣಿಸುತ್ತದೆ. 'ಬಹುಶಃ ಸೂರ್ಯನ ಬೆಸ್ಟ್ ಟ್ಯಾನ್ ಇದು' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದರೆ, ಕೊನೆಯ ಚಿತ್ರ ಬಹಳ ಅದ್ಭುತವಾಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಸರಣಿಯುದ್ದಕ್ಕೂ ಪಡಿಕ್ಕಲ್ ಅಬ್ಬರ
ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದೇವದತ್ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗಾಲೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 167 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 44 ರನ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಆ ನಂತರ ಕೊಲಂಬೊದಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲೂ 117 ರನ್‌ಗಳ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಕಾರಣಕ್ಕಾಗಿ ಅವರಿಗೆ 'ಸರಣಿ ಶ್ರೇಷ್ಠ' ಪ್ರಶಸ್ತಿ ಒಲಿಯಿತು. ಶ್ರೀಲಂಕಾದಲ್ಲಿ ಮೈದಾನಕ್ಕಿಳಿದು ದೀರ್ಘಾವಧಿ ಕ್ರೀಸ್‌ನಲ್ಲಿ ನಿಂತು ರನ್ ಕಲೆಹಾಕಲು ಪಡಿಕ್ಕಲ್ ಎಷ್ಟರಮಟ್ಟಿಗೆ ಪರಿಶ್ರಮ ಪಟ್ಟಿದ್ದಾರೆ ಎಂಬುದಕ್ಕೆ ಅವರ ಬೆನ್ನ ಮೇಲಿನ ಈ 'ಸೂರ್ಯನ ಟ್ಯಾಟೂ' ಸಾಕ್ಷಿಯಂತಿದೆ.


