ಬಾಂಗ್ಲಾದೇಶದಲ್ಲಿನ ಕೋಮು ಉದ್ವಿಗ್ನತೆ ಮತ್ತು ಬೆದರಿಕೆಗಳ ನಡುವೆಯೂ, ಕ್ರಿಕೆಟಿಗ ತಮ್ಮ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ಧಾರ್ಮಿಕ ನಂಬಿಕೆ ಧೈರ್ಯದಿಂದ ಪ್ರದರ್ಶಿಸಿದ ಅವರು ಧರ್ಮಕ್ಕಿಂತ ಭಕ್ತಿ ದೊಡ್ಡದು ಎಂದು ಸಾರಿದ್ದಾರೆ
ಪ್ರಸ್ತುತ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಕೋಮು ಸಂಘರ್ಷಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿವೆ. ರಾಜಕೀಯ ಅಸ್ಥಿರತೆ ಮತ್ತು ಮತಾಂಧರ ದಾಳಿಗಳಿಂದಾಗಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲೂ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿದೆ. ಈ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ಬಿಸಿಸಿಐ, ಬಾಂಗ್ಲಾದೇಶದ ಆಟಗಾರರನ್ನು ಐಪಿಎಲ್ 2026ರ ಹರಾಜಿನಿಂದಲೇ ದೂರವಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಅನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರಿಂದ, ಪಂದ್ಯಾವಳಿಯು ಅವರ ಭಾಗವಹಿಸುವಿಕೆಯಿಲ್ಲದೆಯೇ ನೆರವೇರಿತ್ತು.
ಧರ್ಮಕ್ಕಿಂತ ಭಕ್ತಿಯೇ ಮೇಲೆಂದ ಬಾಂಗ್ಲಾ ಕ್ರಿಕೆಟರ್!
ಹೀಗೆ ದೇಶಾದ್ಯಂತ ಕಟು ಧಾರ್ಮಿಕ ಧ್ರುವೀಕರಣ ಮತ್ತು ವಿರೋಧದ ಅಲೆ ಎದ್ದಿರುವ ಬೆನ್ನಲ್ಲೇ, ಬಾಂಗ್ಲಾದೇಶ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಲಿಟನ್ ದಾಸ್ ಧರ್ಮಕ್ಕಿಂತ ಭಕ್ತಿಯೇ ಮಿಗಿಲು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮಗೆ ಎದುರಾದ ತೀವ್ರ ಬೆದರಿಕೆಗಳು ಹಾಗೂ ಭದ್ರತಾ ಕಳವಳಗಳ ನಡುವೆಯೂ ಅವರು ತಮ್ಮ ನಿವಾಸದಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮನೆಯಲ್ಲಿ ಗಣೇಶೋತ್ಸವದ ಸಂಭ್ರಮ!
ಬಾಂಗ್ಲಾದೇಶದ ಕಟೋರ ಉಗ್ರಗಾಮಿ ಪಡೆಗಳ ಎಚ್ಚರಿಕೆಯನ್ನು ಕ್ಯಾರೇ ಎನ್ನದ ಲಿಟನ್ ದಾಸ್, ತಮ್ಮ ಪತ್ನಿ ದೇಬೋಶ್ರೀ ಸೋಂಚಿತಾ ಹಾಗೂ ಮಗಳೊಂದಿಗೆ ಸೇರಿ ಗಣೇಶ ಚತುರ್ಥಿಯನ್ನು ಆಚರಿಸಿದ್ದಾರೆ. ಗಣಪತಿಯ ಮೂರ್ತಿಯನ್ನು ವಿವಿಧ ವರ್ಣರಂಜಿತ ಹೂವುಗಳಿಂದ ಸುಂದರವಾಗಿ ಅಲಂಕರಿಸಿ, ವಿಘ್ನನಿವಾರಕನಿಗೆ ಪ್ರಿಯವಾದ ಮೋದಕ ಮತ್ತು ವಿವಿಧ ಫಲ-ವಸ್ತುಗಳ ನೈವೇದ್ಯವನ್ನಿಟ್ಟು ದಂಪತಿ ಪೂಜೆ ನೆರವೇರಿಸಿದ್ದಾರೆ. ಈ ಪೂಜೆಯ ಮನಮೋಹಕ ಫೋಟೋಗಳನ್ನು ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಭಾವಪೂರ್ಣ ಶಿರ್ಷಿಕೆ!
ಭಾವಪೂರ್ಣ ಶೀರ್ಷಿಕೆಯನ್ನು ಬರೆದಿರುವ ಲಿಟನ್ ದಾಸ್, "ಗಣಪತಿ ಬಪ್ಪನನ್ನು ನಮ್ಮ ಮನೆಗಳಿಗೆ ಪ್ರೀತಿ, ಭಕ್ತಿ ಮತ್ತು ಕೃತಜ್ಞತಾಪೂರ್ವಕ ಹೃದಯದಿಂದ ಸ್ವಾಗತಿಸೋಣ. ವಿಘ್ನವಿನಾಶಕ ಬಪ್ಪನು ನಮ್ಮೆಲ್ಲರ ಮನೆಗಳಿಗೆ ಅಪಾರ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಅಚಲವಾದ ಸಕಾರಾತ್ಮಕತೆಯನ್ನು ಕರುಣಿಸಲಿ. ಆತನ ದೈವಿಕ ಉಪಸ್ಥಿತಿಯು ನಮ್ಮ ಜೀವನದ ಹಾದಿಯನ್ನು ಸದಾ ಬೆಳಗಲಿ ಹಾಗೂ ಪ್ರತಿಯೊಂದು ಪ್ರಯಾಣದಲ್ಲೂ ನಮಗೆ ಸನ್ಮಾರ್ಗ ತೋರಿಸಲಿ" ಎಂದು ಹಾರೈಸಿದ್ದಾರೆ.
ಸತತ ಉಗ್ರಗಾಮಿಗಳ ಟಾರ್ಗೆಟ್ ನಡುವೆಯೂ ಅಂಜದ ದಾಸ್!
ಲಿಟನ್ ದಾಸ್ ಹಿಂದೂ ಎಂಬ ಒಂದೇ ಕಾರಣಕ್ಕೆ ಬಾಂಗ್ಲಾದೇಶದ ಮತಾಂಧರು ಮತ್ತು ನೆಟ್ಟಿಗರ ಗುಂಪಿನಿಂದ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಅನುಭವಿಸುತ್ತಿದ್ದಾರೆ. 2022ರ ಟಿ20 ವಿಶ್ವಕಪ್‌ಗೆ ಮುನ್ನ ಅವರು ದುರ್ಗಾ ಪೂಜೆಯ ಶುಭಾಶಯ ಕೋರಿ ಪೋಸ್ಟ್ ಹಾಕಿದ್ದಾಗಲೂ ಅವರ ಮೇಲೆ ತೀವ್ರ ಸೈಬರ್ ದಾಳಿ ನಡೆದಿತ್ತು. ಆಗಲೂ ಉಗ್ರಗಾಮಿಗಳು ಅವರನ್ನು ಮತಾಂತರಗೊಳ್ಳುವಂತೆ ಬೆದರಿಸಿದ್ದರು ಮತ್ತು ಅತ್ಯಂತ ನಿಂದನಾತ್ಮಕ ಪದಗಳಿಂದ ನಿಂದಿಸಿದ್ದರು. ಆದಾಗ್ಯೂ, ಮುಸ್ಲಿಂ ಬಹುಸಂಖ್ಯಾತ ದೇಶದ ವಿಶಾಲ ಮನೋಭಾವದ ಅನೇಕ ಸಾಮಾನ್ಯ ನಾಗರಿಕರು ದಾಸ್ ಅವರ ಬೆಂಬಲಕ್ಕೆ ನಿಂತಿದ್ದರು. ಇಷ್ಟೆಲ್ಲಾ ಬೆದರಿಕೆಗಳಿದ್ದರೂ ಲಿಟನ್ ದಾಸ್ ತಮ್ಮ ಧಾರ್ಮಿಕ ಆಚರಣೆಗಳಿಂದ ಹಿಂದೆ ಸರಿದಿಲ್ಲ. ಇತ್ತೀಚೆಗೆ ಕೃಷ್ಣ ಜನ್ಮಾಷ್ಟಮಿಯಂದೂ ಶುಭಾಶಯ ಕೋರಿದ್ದ ಅವರು, ಈಗ ಗಣೇಶೋತ್ಸವವನ್ನೂ ವಿಜೃಂಭಣೆಯಿಂದ ಆಚರಿಸಿ ತಮ್ಮ ನಂಬಿಕೆಯನ್ನು ಎತ್ತಿಹಿಡಿದಿದ್ದಾರೆ.
ಬಾಂಗ್ಲಾದಲ್ಲಿ ಹಿಂದೂಗಳ ಪ್ರಸ್ತುತ ಸ್ಥಿತಿ!
ಸುಮಾರು 17 ಕೋಟಿ ಜನಸಂಖ್ಯೆ ಹೊಂದಿರುವ ಬಾಂಗ್ಲಾದೇಶದಲ್ಲಿ ಪ್ರಸ್ತುತ ಶೇಕಡಾ 8 ರಷ್ಟು (ಸುಮಾರು 1.3 ಕೋಟಿ) ಹಿಂದೂಗಳಿದ್ದಾರೆ. 1947ರಲ್ಲಿ ಪಾಕಿಸ್ತಾನದ ಭಾಗವಾಗಿದ್ದು, ನಂತರ 1971ರ ವಿಮೋಚನಾ ಯುದ್ಧದ ಬಳಿಕ ಪ್ರತ್ಯೇಕ ದೇಶವಾಗಿ ಹೊರಹೊಮ್ಮಿದ ಬಾಂಗ್ಲಾದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ಅಕ್ರಮಗಳು ಹೆಚ್ಚಾಗಿವೆ. ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚುವುದು, ದೇವಸ್ಥಾನಗಳನ್ನು ಧ್ವಂಸಗೊಳಿಸುವುದು ಹಾಗೂ ಹಿಂದೂ ಪ್ರಮುಖರನ್ನು ಟಾರ್ಗೆಟ್ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಇಂತಹ ಅತ್ಯಂತ ಭೀಕರ ವಾತಾವರಣದಲ್ಲೂ ಲಿಟನ್ ದಾಸ್ ತೋರಿದ ಧೈರ್ಯಕ್ಕೆ ಭಾರತ ಸೇರಿದಂತೆ ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಶಹಬ್ಬಾಸ್ ಎಂದಿದ್ದಾರೆ.


