1973ರಲ್ಲಿ 'ಪದ್ಮಶ್ರೀ' ಪ್ರಶಸ್ತಿಗೆ ಆಯ್ಕೆಯಾದ ಭಾರತದ ಮಾಜಿ ಕ್ರಿಕೆಟಿಗ 53 ವರ್ಷಗಳಾದರೂ ಆ ಗೌರವ ಇನ್ನೂ ಕೈಸೇರಿಲ್ಲ. ಇಂಗ್ಲೆಂಡ್‌ನಲ್ಲಿದ್ದಾಗ ಅಧಿಕೃತ ಪತ್ರ ತಲುಪದ ಕಾರಣದಿಂದ ವಂಚಿತರಾದ ಅವರು, ತಮ್ಮ 88ನೇ ವಯಸ್ಸಿನಲ್ಲಿಯಾದರೂ ಪ್ರಶಸ್ತಿ ಸ್ವೀಕರಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಇದೀಗ ಬಿಸಿಸಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಹಾಗೂ ಅಷ್ಟೇ ಭಾವನಾತ್ಮಕ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಭಾರತ ಸರ್ಕಾರದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಶ್ರೀ’ ಪ್ರಶಸ್ತಿಯನ್ನು 53 ವರ್ಷಗಳ ಹಿಂದೆಯೇ ಪ್ರಕಟಿಸಲಾಗಿದ್ದರೂ, ದೇಶದ ದಿಗ್ಗಜ ಕ್ರಿಕೆಟಿಗರೊಬ್ಬರಿಗೆ ಆ ಪ್ರಶಸ್ತಿ ಇನ್ನೂ ಕೈಸೇರಿಲ್ಲ. ಭಾರತದ ಮಾಜಿ ಅಟ್ಯಾಕರ್ ಹಾಗೂ ಆಕ್ರಮಣಕಾರಿ ವಿಕೆಟ್‌ಕೀಪರ್-ಬ್ಯಾಟರ್ ಫಾರೂಕ್ ಎಂಜಿನಿಯರ್ ಪಾಲಿಗೆ ಈ ವಿಚಿತ್ರ ಪ್ರಸಂಗ ನಡೆದಿದೆ. 1973ರಲ್ಲಿ ಭಾರತ ಸರ್ಕಾರವು ಫಾರೂಕ್ ಎಂಜಿನಿಯರ್ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಿದಾಗ ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಆದರೆ, ಇಂದು 88 ವರ್ಷ ತುಂಬಿದರೂ ಆ ಪ್ರಶಸ್ತಿಯ ಪದಕವಾಗಲಿ ಅಥವಾ ಪ್ರಮಾಣಪತ್ರವಾಗಲಿ ಅವರ ಕೈಗೆ ಸಿಕ್ಕಿಲ್ಲ. ಅದೇಕೆ ಎನ್ನುವುದನ್ನು ನೋಡೋಣ ಬನ್ನಿ.

1973ರ ಆ ಒಂದು ಘಟನೆ ಮತ್ತು ಮರೆತುಹೋದ ಪತ್ರ!

1961ರಿಂದ 1975ರವರೆಗೆ ಭಾರತದ ಪರ 46 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನು ಆಡಿ, ದೇಶಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದ ಫಾರೂಕ್ ಅವರಿಗೆ 1973ರಲ್ಲಿ ಪದ್ಮಶ್ರೀ ಘೋಷಿಸಲಾಯಿತು. ಆದರೆ ಆ ಸಮಯದಲ್ಲಿ ಅವರು ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದರು.

ಫಾರೂಕ್ ಎಂಜಿನಿಯರ್ ಅವರ ಮಾತುಗಳು!

ನನಗೆ ಪ್ರಶಸ್ತಿ ಘೋಷಣೆಯಾದಾಗ ನಾನು ಇಂಗ್ಲೆಂಡ್‌ನಲ್ಲಿದ್ದೆ. ನಮ್ಮ ತಂಡದ ಮ್ಯಾನೇಜರ್ ಹೇಮು ಅಧಿಕಾರಿ ಅವರು ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಸುದ್ದಿ ನೋಡಿ ನನಗೆ ಪದ್ಮಶ್ರೀ ಲಭಿಸಿದೆ ಎಂದು ತಿಳಿಸಿದರು. ಆದರೆ, ನನಗೆ ಸರ್ಕಾರದಿಂದ ಯಾವುದೇ ಅಧಿಕೃತ ಕಾಗದಪತ್ರ ಅಥವಾ ಕಂಟ್ರೋಲ್ ರೂಮ್‌ನಿಂದ ಸೂಚನೆ ಬಂದಿರಲಿಲ್ಲ. ಆ ಕಾಲದಲ್ಲಿ ಪತ್ರಿಕೆಗಳೇ ಪ್ರಮುಖ ಆಧಾರವಾಗಿದ್ದವು. ನನಗೆ ಯಾವುದೇ ಪತ್ರ ಬಂದಿಲ್ಲವೆಂದು ಮ್ಯಾನೇಜರ್‌ಗೆ ತಿಳಿಸಿದಾಗ, 'ನಿಮಗೆ ಸದ್ಯದಲ್ಲೇ ಸರ್ಕಾರದಿಂದ ಅಧಿಕೃತ ಆಹ್ವಾನ ಪತ್ರ ಬರಲಿದೆ' ಎಂದಿದ್ದರು. ಆದರೆ, ಆ ಪತ್ರ ಇಂದಿಗೂ ನನಗೆ ತಲುಪಲೇ ಇಲ್ಲ!

ವರ್ಷಗಳ ಕಾಲದ ಕಾಯುವಿಕೆ ಮತ್ತು ನಿರಾಸೆ!

ಪ್ರಶಸ್ತಿಯ ಸರ್ಕಾರಿ ಅಧಿಸೂಚನೆ ಅಥವಾ ಆಹ್ವಾನ ಪತ್ರ ಬಾರದ ಕಾರಣ, ಯಾರನ್ನು ಸಂಪರ್ಕಿಸಬೇಕೆಂದು ತಿಳಿಯದೆ ಫಾರೂಕ್ ದಶಕಗಳ ಕಾಲ ಕಾದರು.ನನಗೆ ಸರ್ಕಾರದಿಂದ ಯಾರಾದರೂ ಕರೆ ಮಾಡಿ ಪ್ರಶಸ್ತಿ ಸ್ವೀಕರಿಸಲು ಕರೆಯಬಹುದು ಎಂದು ನಾನು ಭಾವಿಸಿದ್ದೆ. ಮಾಜಿ ಸಚಿವ ಅರುಣ್ ಜೇಟ್ಲಿ ಅವರು ಜೀವಂತವಾಗಿದ್ದಾಗ ಈ ವಿಷಯ ಅವರ ಗಮನಕ್ಕೆ ತಂದಿದ್ದೆ. ಇತ್ತೀಚೆಗೆ ಜಯ್ ಶಾ ಅವರಿಗೂ ಪತ್ರ ಬರೆದಿದ್ದೆ. ಅವರು ನನಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಫಾರೂಕ್ ಹಂಚಿಕೊಂಡಿದ್ದಾರೆ.

ರಾಷ್ಟ್ರಪತಿ ಭವನಕ್ಕೆ ಹೋಗುವ ಕೊನೆ ಆಸೆ; ಬಾವುಕರಾದ ದಿಗ್ಗಜ!

ಅರ್ಹತೆ ಇದ್ದರೂ, ಅಧಿಕೃತ ಪೋರ್ಟಲ್‌ನಲ್ಲಿ ಹೆಸರಿದ್ದರೂ ಪ್ರಶಸ್ತಿಯಿಂದ ವಂಚಿತರಾಗಿರುವ ನೋವು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಈಗಾಗಲೇ 50 ವರ್ಷಗಳಿಗೂ ಹೆಚ್ಚು ಕಾಲ ಕಳೆದುಹೋಗಿದೆ. ಮತ್ತೆ ಪ್ರಯತ್ನಿಸುವುದರಲ್ಲಿ ಅರ್ಥವಿದೆಯೇ ಎಂದು ಕೆಲವೊಮ್ಮೆ ಅನಿಸುತ್ತದೆ. ಆದರೆ ಈ ಪ್ರಶಸ್ತಿ ನನ್ನ ಪಾಲಿಗೆ ಅತ್ಯಂತ ಪವಿತ್ರವಾದದ್ದು ಹಾಗೂ ಪ್ರಮುಖವಾದದ್ದು. ನಾನು ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರೂ, ನನ್ನ ಹೃದಯ ಎಂದಿಗೂ ಭಾರತೀಯ! ನನ್ನ ಪತ್ನಿಯೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿ ಗೌರವ ಸ್ವೀಕರಿಸುವುದು ನನ್ನೊಬ್ಬನ ಆಸೆ. ಈಗ ನನಗೆ 88 ವರ್ಷ, ಜೀವಮಾನದ ಈ ಕೊನೆಯ ಹಂತದಲ್ಲಾದರೂ ನನಗೆ 'ಪದ್ಮಶ್ರೀ' ಗೌರವ ಸಿಗುತ್ತದೆ ಎಂದು ನಂಬಿದ್ದೇನೆ ಎಂದು ಅವರು ಕಣ್ಣೀರಾದರು.

ಬಿಸಿಸಿಐ ತಕ್ಷಣದ ನಿರ್ಧಾರ!

ಫಾರೂಕ್ ಎಂಜಿನಿಯರ್ ಅವರ ಈ ಕಣ್ಣೀರಿನ ಕಥೆ ಹಾಗೂ ದಶಕಗಳ ಬೇಡಿಕೆಯನ್ನು ಬಿಸಿಸಿಐ ಈಗ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಕ್ಕೆ ಈ ವಿಚಾರವಾಗಿ ಅಧಿಕೃತ ಪತ್ರ ಬರೆದು, ಅವರ ಪದ್ಮಶ್ರೀ ಗೌರವ ಹಾಗೂ ಪದಕವನ್ನು ಶೀಘ್ರದಲ್ಲೇ ಅವರಿಗೆ ತಲುಪಿಸಲು ಶಿಫಾರಸು ಮಾಡಲು ಬಿಸಿಸಿಐ ನಿರ್ಧರಿಸಿದೆ. 88ರ ಹರೆಯದ ಈ ದೇಶದ ಹಿರಿಯ ಕ್ರಿಕೆಟಿಗನ ಆಸೆ ಶೀಘ್ರವೇ ಈಡೇರಲಿ ಎಂಬುದೇ ಪ್ರತಿಯೊಬ್ಬ ಭಾರತೀಯನ ಹಾರೈಕೆ.