ಭಾರತೀಯ ಕ್ರಿಕೆಟ್‌ನ ‘ಲಿಟಲ್ ಮಾಸ್ಟರ್’ ಸುನಿಲ್ ಗವಾಸ್ಕರ್, ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ (CAC) ಸೀಮಿತ ಪಾತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಏಳು ಕ್ರಿಕೆಟ್ ದಿಗ್ಗಜರನ್ನು ಒಳಗೊಂಡ ವಿಸ್ತೃತ ಸಮಿತಿಯನ್ನು ರಚಿಸಿ, ಅವರ ಅನುಭವವನ್ನು ಭಾರತೀಯ ಕ್ರಿಕೆಟ್‌ನ ಒಳಿತಿಗಾಗಿ ಬಳಸಿಕೊಳ್ಳಬೇಕೆಂದು ಅವರು ಬಿಸಿಸಿಐಗೆ ಮಹತ್ವದ ಸಲಹೆ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಂಡ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಸುವರ್ಣ ಯುಗವನ್ನು ಕಾಣುತ್ತಿದೆ. ಹಣಕಾಸಿನ ಬಲ ಮಾತ್ರವಲ್ಲದೆ, ಮೈದಾನದಲ್ಲೂ ಟೀಮ್ ಇಂಡಿಯಾದ ಪ್ರದರ್ಶನ ಗಮನಾರ್ಹವಾಗಿ ಸುಧಾರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಪುರುಷರ ತಂಡವು ಎರಡು ಪ್ರಮುಖ ವಿಶ್ವಕಪ್‌ಗಳನ್ನು ಗೆದ್ದು ಬೀಗಿದ್ದರೆ, ಮತ್ತೊಂದೆಡೆ ಮಹಿಳಾ ಕ್ರಿಕೆಟ್ ತಂಡ ಕೂಡ ಏಕದಿನ ವಿಶ್ವಕಪ್ ಸೇರಿದಂತೆ ಜಾಗತಿಕ ಮಟ್ಟದ ಸರಣಿಗಳಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ತನ್ನದೇ ಆದ ಮುದ್ರೆಯೊತ್ತಿದೆ.
ಮಹತ್ವದ ಸಲಹೆ ನೀಡಿದ ಲಿಟಲ್ ಮಾಸ್ಟರ್!
ಟೀಮ್ ಇಂಡಿಯಾ ಮತ್ತು ಬಿಸಿಸಿಐ ಮೈದಾನ ಹಾಗೂ ಮೈದಾನದ ಹೊರಗೆ ಅಭೂತಪೂರ್ವ ಯಶಸ್ಸನ್ನು ಅನುಭವಿಸುತ್ತಿರುವ ಈ ಸಮಯದಲ್ಲೇ, ಭಾರತೀಯ ಕ್ರಿಕೆಟ್‌ನ ‘ಲಿಟಲ್ ಮಾಸ್ಟರ್’ ಎಂದೇ ಖ್ಯಾತರಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಪ್ರಮುಖ ವಿಷಯ ಒಂದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ ಕ್ರಿಕೆಟ್ ಆಡಳಿತ ವ್ಯವಸ್ಥೆಯಲ್ಲಿ ಕಂಡುಬರುತ್ತಿರುವ ಕೆಲವು ಪ್ರಮುಖ ನ್ಯೂನತೆಗಳನ್ನು ಬೆಟ್ಟು ಮಾಡಿ ತೋರಿಸಿರುವ ಅವರು, ಬಿಸಿಸಿಐಗೆ ನೇರ ಸವಾಲು ಎಸೆಯುವ ಜೊತೆಗೆ ಅತ್ಯಂತ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ಕ್ರಿಕೆಟ್ ಸಲಹಾ ಸಮಿತಿಯ (CAC) ಪಾತ್ರ ಪುನರ್ವಿಮರ್ಶೆಗೆ ಮನವಿ!
ಸುನಿಲ್ ಗವಾಸ್ಕರ್ ಅವರ ಪ್ರಕಾರ, ಬಿಸಿಸಿಐ ತಕ್ಷಣವೇ ತನ್ನ ಕ್ರಿಕೆಟ್ ಸಲಹಾ ಸಮಿತಿಯ (Cricket Advisory Committee - CAC) ಕಾರ್ಯವೈಖರಿ ಮತ್ತು ಪಾತ್ರವನ್ನು ಪುನರ್ವಿಮರ್ಶಿಸಬೇಕಾದ ತುರ್ತು ಅಗತ್ಯವಿದೆ. ಪ್ರಸ್ತುತ ಬಿಸಿಸಿಐನ ಸಿಎಸಿ ಸಮಿತಿಯಲ್ಲಿ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣ್ ನಾಯಕ್ ಅವರಂತಹ ಮಾಜಿ ಆಟಗಾರರಿದ್ದಾರೆ. ಆದರೆ, ಕ್ರಿಕೆಟ್ ಜಗತ್ತಿನಲ್ಲಿ ಅಪಾರ ಅನುಭವ ಹೊಂದಿರುವ ಸಚಿನ್ ತೆಂಡೂಲ್ಕರ್ ಅವರಂತಹ ದೈತ್ಯ ಆಟಗಾರರನ್ನು ಈ ಮುಖ್ಯ ಸಮಿತಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಗವಾಸ್ಕರ್ ಪ್ರಬಲವಾಗಿ ಪ್ರತಿಪಾದಿಸಿದ್ದಾರೆ.
ಸಿಎಸಿ ವಿಸ್ತರಿಸಲು ಮನವಿ!
ಇಂದಿನ ಬಿಸಿಸಿಐ ಆಡಳಿತ ವ್ಯವಸ್ಥೆಯಲ್ಲಿ ಆಯ್ಕೆ ಸಮಿತಿ (Selection Committee) ಮತ್ತು ಕ್ರಿಕೆಟ್ ಸಲಹಾ ಸಮಿತಿ (CAC) ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ತಾಂತ್ರಿಕ ಸಮಿತಿಗಳು ಸಕ್ರಿಯವಾಗಿ ಉಳಿದಿಲ್ಲ. ಸದ್ಯಕ್ಕೆ ಸಿಎಸಿಯ ಕೆಲಸ ಕೇವಲ ರಾಷ್ಟ್ರೀಯ ತಂಡದ ತರಬೇತುದಾರರು ಮತ್ತು ಆಯ್ಕೆದಾರರನ್ನು ಆಯ್ಕೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿದೆ. ಈ ಅತ್ಯಂತ ಕಿರಿದಾದ ವ್ಯಾಪ್ತಿಯನ್ನು ಮೀರಿ, ಸಿಎಸಿಯನ್ನು ವಿಸ್ತರಿಸುವ ಮತ್ತು ಅದಕ್ಕೆ ಹೆಚ್ಚಿನ ಅಧಿಕಾರ ನೀಡುವ ಸಮಯ ಈಗ ಬಂದಿದೆ ಎಂಬುದು ಗವಾಸ್ಕರ್ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.
ಸಿಎಸಿಗೆ ಏಳು ದಿಗ್ಗಜರ ಹೆಸರು ಶಿಫಾರಸು!
ಪ್ರಸಿದ್ಧ 'ಡೈಲಿ ಮೇಲ್' ಪತ್ರಿಕೆಯಲ್ಲಿ ಬರೆದಿರುವ ತಮ್ಮ ವಿಶೇಷ ಲೇಖನದಲ್ಲಿ ಗವಾಸ್ಕರ್ ಈ ಕುರಿತು ವಿಸ್ತೃತವಾಗಿ ಬೆಳಕು ಚೆಲ್ಲಿದ್ದಾರೆ. ಭಾರತೀಯ ಕ್ರಿಕೆಟ್‌ನ ಭವಿಷ್ಯದ ಹಿತದೃಷ್ಟಿಯಿಂದ ಸಿಎಸಿ ಸಮಿತಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ‘ದಿ ವಾಲ್’ ರಾಹುಲ್ ದ್ರಾವಿಡ್ ಹಾಗೂ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಒಳಗೊಳ್ಳಬೇಕು ಎಂಬ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಯಾರ್ಯಾರಿದ್ದಾರೆ ಲಿಸ್ಟ್‌ಲ್ಲಿ!
ಈ ಮೂವರ ಜೊತೆಗೆ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ ಇತರ ಪ್ರಮುಖ ನಾಲ್ಕು ದಿಗ್ಗಜರ ಹೆಸರುಗಳನ್ನು ಗವಾಸ್ಕರ್ ಬಿಸಿಸಿಐ ಮುಂದೆ ಇಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಹಾಗೂ ವೀರೇಂದ್ರ ಸೆಹ್ವಾಗ್ ಅವರಂತಹ ಅನುಭವಿ ಆಟಗಾರರನ್ನೊಳಗೊಂಡ ಪ್ರಬಲ ಸಮಿತಿಯನ್ನು ಬಿಸಿಸಿಐ ರಚಿಸಬೇಕು. ಈ ಸಮಿತಿಗೆ ಪ್ರತ್ಯೇಕ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ನೇಮಿಸಿ, ಕ್ರಿಕೆಟ್‌ನ ತಾಂತ್ರಿಕ ನಿರ್ಧಾರಗಳಲ್ಲಿ ಇವರ ಅನುಭವವನ್ನು ಮಂಡಳಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗವಾಸ್ಕರ್ ತಮ್ಮ ಲೇಖನದ ಮೂಲಕ ಬಿಸಿಸಿಐಗೆ ನೇರ ಸಲಹೆ ನೀಡಿದ್ದಾರೆ.


