ಟೀಂ ಇಂಡಿಯಾದ ಮಾಜಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. 2020-21ರ ಆಸ್ಟ್ರೇಲಿಯಾ ಸರಣಿ ಗೆಲುವಿನ ನಾಯಕರಾಗಿದ್ದ ರಹಾನೆ, ಆಯ್ಕೆ ಸಮಿತಿಯಿಂದ ನಿರಂತರ ಕಡೆಗಣನೆಗೆ ಒಳಗಾದ ನಂತರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬೆಂಗಳೂರು: ಟೀಂ ಇಂಡಿಯಾ ಮಾಜಿ ಹಂಗಾಮಿ ನಾಯಕ, ದಿಗ್ಗಜ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಅಜಿಂಕ್ಯ ರಹಾನೆ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಭಾರತ ತಂಡವು 2020-21ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿತ್ತು. ಇದೀಗ ಪದೇ ಪದೇ ಆಯ್ಕೆ ಸಮಿತಿಯಿಂದ ಕಡೆಗಣನೆಗೆ ಒಳಗಾಗಿದ್ದ ರಹಾನೆ, ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭಾವನಾತ್ಮಕ ವಿದಾಯ ಘೋಷಿಸಿದ್ದಾರೆ.
ಭಾರತ ಪರ 85 ಟೆಸ್ಟ್, 90 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನಾಡಿ 8,000ಕ್ಕೂ ಅಧಿಕ ರನ್ ಬಾರಿಸಿರುವ ಅಜಿಂಕ್ಯ ರಹಾನೆ, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಕೌಶಲ್ಯದ ಮೂಲಕ ಗಮನ ಸೆಳೆದಿದ್ದರು. ಅಜಿಂಕ್ಯ ರಹಾನೆ 2023ರಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಪಂದ್ಯವನ್ನಾಡಿದ್ದರು. ಇನ್ನು ಏಕದಿನ ಮಾದರಿಯಲ್ಲಿ ರಹಾನೆ 2018ರಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ವೆಸ್ಟ್ ಇಂಡೀಸ್ ವಿರುದ್ದ 2016ರಲ್ಲಿ ಕೊನೆಯ ಬಾರಿಗೆ ಭಾರತ ಟಿ20 ತಂಡದಲ್ಲಿ ಅಜಿಂಕ್ಯ ರಹಾನೆ ಸ್ಥಾನ ಪಡೆದಿದ್ದರು.
'ಕ್ಯಾಪ್ 278 ವಿದಾಯ ಹೇಳುತ್ತಿದೆ. ಇಷ್ಟು ವರ್ಷಗಳ ಕಾಲ ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ಸದಾ ಕೃತಜ್ಞನಾಗಿರುತ್ತೇನೆ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮುಂಬೈ ಮೂಲದ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
2013ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ:
ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರಂತಹ ದಿಗ್ಗಜರ ಯುಗಾಂತ್ಯದ ಬಳಿಕ ಅಜಿಂಕ್ಯ ರಹಾನೆ 2013ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿ ಗುರುತಿಸಿಕೊಂಡಿದ್ದ ರಹಾನೆ, 38.46ರ ಬ್ಯಾಟಿಂಗ್ ಸರಾಸರಿಯಲ್ಲಿ 5077 ರನ್ ಸಿಡಿಸಿದ್ದಾರೆ. ಇದರಲ್ಲಿ 12 ಶತಕಗಳು ಸೇರಿವೆ.
ಭಾರತ ಪರ ಕಮ್‌ಬ್ಯಾಕ್ ಮಾಡುವ ಕನಸು ಕಂಡಿದ್ದ ರಹಾನೆ:
2023ರ ಬಳಿಕ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಅಜಿಂಕ್ಯ ರಹಾನೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಕನಸು ಕಂಡಿದ್ದರು. ಹಲವಾರು ಸಂದರ್ಶನಗಳಲ್ಲೂ ರಹಾನೆ, ಮತ್ತೆ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಬಿಸಿಸಿಐ ಆಯ್ಕೆ ಸಮಿತಿಯು ಲಂಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದಾಗ ಅಲ್ಲಿ ರಹಾನೆ ಹೆಸರಿರಲಿಲ್ಲ. ಯುವ ಆಟಗಾರರಿಗೆ ಬಿಸಿಸಿಐ ಆಯ್ಕೆ ಸಮಿತಿ ಹೆಚ್ಚು ಒಲವು ತೋರುತ್ತಿರುವುದರಿಂದ, ರಹಾನೆಗೆ ಅವಕಾಶ ಸಿಕ್ಕಿರಲಿಲ್ಲ. ಇದರ ಬೆನ್ನಲ್ಲೇ ಮುಂಬೈ ಮೂಲದ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ಕೆಕೆಆರ್ ತಂಡದ ನಾಯಕತ್ವಕ್ಕೂ ರಹಾನೆ ಗುಡ್ ಬೈ:
ಇನ್ನು ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ಆದರೆ ರಹಾನೆ ನಾಯಕತ್ವದಲ್ಲಿ ಕೆಕೆಆರ್ ತಂಡವು ಒಮ್ಮೆಯೂ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ. ಎರಡು ಬಾರಿಯೂ ಕೆಕೆಆರ್ ತಂಡವು ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ 2027ರ ಐಪಿಎಲ್ ಟೂರ್ನಿಗೂ ಮುನ್ನ ರಹಾನೆ ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು ವರದಿಯಾಗಿದೆ.


