ಟೀಂ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ರಯಾನ್ ಟೆನ್ ಡೋಸ್ಕಾಟೆ, ಕೋಲ್ಕತಾ ನೈಟ್ ರೈಡರ್ಸ್ ಮಾಲೀಕತ್ವದ 'ನೈಟ್ ರೈಡರ್ಸ್ ಸ್ಪೋರ್ಟ್ಸ್' ಸಂಸ್ಥೆಯ ಜಾಗತಿಕ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಭಾರತ ತಂಡದಿಂದ ಹೊರನಡೆದ ಅವರು, ನೈಟ್ ರೈಡರ್ಸ್‌ನ ಜಾಗತಿಕ ಫ್ರಾಂಚೈಸಿಗಳಿಗೂ ಸಹಾಯಕ ಕೋಚ್ ಆಗಿ ಕೆಲಸ ಮಾಡಲಿದ್ದಾರೆ.
ಮುಂಬೈ: ಟೀಂ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ 24 ಗಂಟೆ ಕಳೆಯುವುದರೊಳಗೆ, ನೆದರ್ಲೆಂಡ್ಸ್‌ನ ಮಾಜಿ ಆಲ್‌ರೌಂಡರ್ ರಯಾನ್ ಟೆನ್ ಡೋಸ್ಕಾಟೆ ಹೊಸ ಜವಾಬ್ದಾರಿಯೊಂದನ್ನು ವಹಿಸಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಭಾರತ ತಂಡದಿಂದ ಹೊರನಡೆದಿದ್ದ ಅವರು, ಇದೀಗ ಕೋಲ್ಕತಾ ನೈಟ್ ರೈಡರ್ಸ್ (KKR) ಮಾಲೀಕತ್ವದ 'ನೈಟ್ ರೈಡರ್ಸ್ ಸ್ಪೋರ್ಟ್ಸ್' ಸಂಸ್ಥೆಯ ಜಾಗತಿಕ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ (Head of Global Cricket Strategy) ನೇಮಕಗೊಂಡಿದ್ದಾರೆ. 2027ರವರೆಗೆ ಒಪ್ಪಂದವನ್ನು ಮುಂದುವರಿಸುವ ಬಿಸಿಸಿಐ ಆಫರ್ ಅನ್ನು ತಿರಸ್ಕರಿಸಿ ಡೋಸ್ಕಾಟೆ ಟೀಂ ಇಂಡಿಯಾದಿಂದ ಹೊರಬಂದಿದ್ದರು. ಇದರ ಬೆನ್ನಲ್ಲೇ ಅವರು ಕೋಲ್ಕತಾ ತಂಡದಲ್ಲಿ ಹೊಸ ಹುದ್ದೆ ಸ್ವೀಕರಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಕೋಲ್ಕತಾದ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ, ನೈಟ್ ರೈಡರ್ಸ್‌ನ ಜಾಗತಿಕ ಫ್ರಾಂಚೈಸಿಗಳಿಗೆ ಪ್ರತಿಭಾನ್ವಿತ ಆಟಗಾರರನ್ನು ಹುಡುಕುವುದು (ಸ್ಕೌಟಿಂಗ್), ನೇಮಕಾತಿ, ತಂಡದ ಯೋಜನೆ ಮತ್ತು ಆಟಗಾರರ ಪ್ರದರ್ಶನವನ್ನು ವಿಶ್ಲೇಷಿಸುವ ಜವಾಬ್ದಾರಿಯನ್ನು ಡೋಸ್ಕಾಟೆ ಹೊತ್ತಿದ್ದಾರೆ. ಇದರ ಜೊತೆಗೆ, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್, ಐಎಲ್‌ಟಿ20ಯಲ್ಲಿ ಅಬುದಾಬಿ ನೈಟ್ ರೈಡರ್ಸ್ ಮತ್ತು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಗಳ ಸಹಾಯಕ ಕೋಚ್ ಆಗಿಯೂ ಅವರು ಕೆಲಸ ಮಾಡಲಿದ್ದಾರೆ.
ಡೋಸ್ಕಾಟೆಯನ್ನು ಆತ್ಮೀಯವಾಗಿ ಸ್ವಾಗತಿಸಿದ ಕೆಕೆಆರ್ ಫ್ರಾಂಚೈಸಿ
"ಡೋಸ್ಕಾಟೆಯವರನ್ನು ಮತ್ತೆ ನೈಟ್ ರೈಡರ್ಸ್ ಕುಟುಂಬಕ್ಕೆ ಸ್ವಾಗತಿಸಲು ನಮಗೆ ಬಹಳ ಸಂತೋಷವಿದೆ. ನಮ್ಮ ತಂಡದ ಗುರಿ ಮತ್ತು ಶೈಲಿಯ ಬಗ್ಗೆ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇದೆ. ಅವರ ಅನುಭವ ಈ ಜವಾಬ್ದಾರಿಗೆ ಸೂಕ್ತವಾಗಿದೆ," ಎಂದು ನೈಟ್ ರೈಡರ್ಸ್ ಸ್ಪೋರ್ಟ್ಸ್ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ 45 ವರ್ಷದ ಡೋಸ್ಕಾಟೆ, "ನೈಟ್ ರೈಡರ್ಸ್ ಬಳಗಕ್ಕೆ ಮರಳಿರುವುದು ಖುಷಿ ತಂದಿದೆ. ಜಾಗತಿಕ ಮಟ್ಟದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸುವುದು ಮತ್ತು ದೀರ್ಘಾವಧಿಯ ಕ್ರಿಕೆಟ್ ತಂತ್ರಗಳನ್ನು ರೂಪಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ," ಎಂದರು.
ಡೋಸ್ಕಾಟೆ ಮತ್ತು ಕೋಲ್ಕತಾ ತಂಡಕ್ಕೆ ದಶಕಗಳ ಸಂಬಂಧವಿದೆ. 2011ರಲ್ಲಿ ಆಟಗಾರನಾಗಿ ತಂಡ ಸೇರಿದ್ದ ಅವರು, 2012 ಮತ್ತು 2014ರಲ್ಲಿ ತಂಡ ಚಾಂಪಿಯನ್ ಆದಾಗ ಪ್ರಮುಖ ಪಾತ್ರ ವಹಿಸಿದ್ದರು. 2022ರಲ್ಲಿ ನಿವೃತ್ತಿ ನಂತರ ಕೋಚಿಂಗ್ ಸಿಬ್ಬಂದಿಯಾಗಿ ತಂಡಕ್ಕೆ ಮರಳಿದ್ದರು. ಗೌತಮ್ ಗಂಭೀರ್ ಮೆಂಟರ್‌ಶಿಪ್‌ನಲ್ಲಿ ಕೋಲ್ಕತಾ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಾಗ, ಡೋಸ್ಕಾಟೆ ಸಹಾಯಕ ಸಿಬ್ಬಂದಿಯ ಪ್ರಮುಖ ಭಾಗವಾಗಿದ್ದರು.
ಟೀಂ ಇಂಡಿಯಾ ಸಹಾಯಕ ಕೋಚ್ ಹುದ್ದೆಗೆ ಗುಡ್‌ಬೈ
2024ರ ಜುಲೈನಲ್ಲಿ ಗೌತಮ್ ಗಂಭೀರ್ ಭಾರತ ತಂಡದ ಹೆಡ್ ಕೋಚ್ ಆದಾಗ, ಡೋಸ್ಕಾಟೆ ಸಹಾಯಕ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅವಧಿಯಲ್ಲಿ ಭಾರತ ತಂಡ 2025ರ ಏಷ್ಯಾ ಕಪ್ ಮತ್ತು 2026ರ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. 2027ರವರೆಗೆ ಒಪ್ಪಂದ ಮುಂದುವರಿಸಲು ಬಿಸಿಸಿಐ ಕೇಳಿಕೊಂಡರೂ, ನಿರಂತರ ಪ್ರಯಾಣವನ್ನು ತಪ್ಪಿಸಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವರು ಒಪ್ಪಂದವನ್ನು ನವೀಕರಿಸಲಿಲ್ಲ. ಸದ್ಯ ಅವರು ಅಂತರರಾಷ್ಟ್ರೀಯ ಪ್ರವಾಸಗಳ ಬದಲು ಫ್ರಾಂಚೈಸಿ ಲೀಗ್‌ಗಳ ಮೇಲೆ ಗಮನ ಹರಿಸಲು ನಿರ್ಧರಿಸಿದ್ದಾರೆ.


