ಭಾರತೀಯ ಸಂಗೀತಲೋಕದ ಮಹಾನ್ ಗಾಯಕಿ ‘ಎಂ.ಎಸ್. ಸುಬ್ಬುಲಕ್ಷ್ಮಿ’ ಅಮ್ಮನವರ ಬಯೋಪಿಕ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನಡೆದಿದೆ. ಆದರೆ ಇದೀಗ ನೆಟ್ಟಿಗರು ಮಾತ್ರ ಪಾತ್ರದ ಆಯ್ಕೆ ಬಗ್ಗೆ ಕಿಡಿ ಕಾರಿದ್ದಾರೆ. ಇದು ಸರಿಯಾದ ಆಯ್ಕೆ ಅಲ್ಲ ಎಂದು ಹೇಳಿದ್ದಾರೆ.

‘ಎಂ.ಎಸ್. ಸುಬ್ಬುಲಕ್ಷ್ಮಿ’ ಅಮ್ಮನ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅಮ್ಮನವರ ಜೀವನಾಧಾರಿತ ಚಿತ್ರ (ಬಯೋಪಿಕ್) ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ. ​ಇತ್ತೀಚೆಗೆ ಅದ್ದೂರಿಯಾಗಿ ಸಿನಿಮಾ ಮುಹೂರ್ತ ಕೂಡ ನೆರವೇರಿದೆ. ಈ ಐತಿಹಾಸಿಕ ಸಿನಿಮಾದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅಮ್ಮನವರ ಪಾತ್ರವನ್ನು ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಪೋಷಿಸುತ್ತಿದ್ದಾರೆ. ಕೇವಲ ಒಬ್ಬ ಗಾಯಕಿಯಾಗಿ ಮಾತ್ರವಲ್ಲದೆ, ಸುಬ್ಬುಲಕ್ಷ್ಮೀ ಅಮ್ಮನವರ ಜೀವನದ ಭಾವನೆಗಳು, ಹೋರಾಟಗಳು, ಆಧ್ಯಾತ್ಮಿಕ ಪಯಣ ಹಾಗೂ ಶಕ್ತಿಯನ್ನು ಪ್ರೇಕ್ಷಕರ ಮುಂದೆ ತೋರಿಸಲು ರಶ್ಮಿಕಾ ಮಂದಣ್ಣ ತಯಾರಾಗಿದ್ದಾರೆ.

ಈ ಮಹತ್ವದ ಐತಿಹಾಸಿಕ ಸಿನಿಮಾವನ್ನು ಖ್ಯಾತ ನಿರ್ದೇಶಕ ಗೌತಮ್ ತಿನ್ನನೂರಿ ನಿರ್ದೇಶನ ಮಾಡಲಿದ್ದು, ಯುವಜನರ ನೆಚ್ಚಿನ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಪ್ರಮುಖ ನಿರ್ಮಾಪಕರಾದ ಅಲ್ಲು ಅರವಿಂದ್, ರಾಕ್‌ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸೆಪ್ಟೆಂಬರ್ 16ರಂದು ಸುಬ್ಬುಲಕ್ಷ್ಮೀ ಅಮ್ಮನವರ 110ನೇ ಜನ್ಮದಿನದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಸಿನಿಮಾದ ಮುಹೂರ್ತ ನೆರವೇರಿದ್ದು, ಖ್ಯಾತ ನಟ ಕಮಲ್ ಹಾಸನ್ ಸಿನಿಮಾಗೆ ಕ್ಲಾಪ್ ಮಾಡಿದ್ದರು. ಎಲ್ಲಾ ಸರಿಯಾಗಿಯೇ ನಡೆದಿರುವಾಗ, ಇದೀಗ ನೆಟ್ಟಿಗರು ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ಆಯ್ಕೆ ಮಾಡಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಸರಿಯಾದ ಆಯ್ಕೆ ಅಲ್ಲವೇ?

ನೆಟ್ಟಿಗರು ಹೇಳುವಂತೆ, ರಶ್ಮಿಕಾ ಮಂದಣ್ಣ ‘ಎಂ.ಎಸ್. ಸುಬ್ಬುಲಕ್ಷ್ಮಿ’ ಅಮ್ಮನ ಪಾತ್ರಕ್ಕೆ ಸರಿಯಾದ ಆಯ್ಕೆ ಅಲ್ಲವಂತೆ. ರಶ್ಮಿಕಾ ಅದ್ಭುತ ನಟಿ ಇರಬಹುದು, ಆದರೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ಸಾಯಿ ಪಲ್ಲವಿ, ವಿದ್ಯಾ ಬಾಲನ್ ಅಥವಾ ಕೀರ್ತಿ ಸುರೇಶ್ ಅವರಂತಹ ನಟಿಯರು ನಟಿಸಬೇಕಿತ್ತು ಎಂದು ನೆಟ್ಟಿಗರು ಹೇಳಿದ್ದಾರೆ. ಈ ಮೊದಲು ಸುಬ್ಬುಲಕ್ಷ್ಮೀ ಅಮ್ಮನವರ ಪಾತ್ರವನ್ನು ಸಾಯಿ ಪಲ್ಲವಿ ಮಾಡುವುದು ಎನ್ನುವುದಾಗಿ ಸುದ್ದಿಯಾಗಿತ್ತು, ಅದಕ್ಕೂ ಮುನ್ನ ವಿದ್ಯಾ ಬಾಲನ್ ಕೂಡ ಅಮ್ಮನವರ ಗೆಟಪ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇತ್ತೀಚೆಗೆ ರುಕ್ಮಿಣಿ ವಸಂತ್ ಆ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿತ್ತು. ಆ ನಟಿಯರಲ್ಲಿ ಒಬ್ಬರು ಈ ಪಾತ್ರಕ್ಕೆ ಹೇಳಿಮಾಡಿಸಿದಂತಿತ್ತು, ಆದರೆ ರಶ್ಮಿಕಾ ಮಂದಣ್ಣ ಈ ಪಾತ್ರಕ್ಕೆ ಸರಿಯಾದ ಆಯ್ಕೆ ಅಲ್ಲ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಸದ್ಯದ ಅತ್ಯಂತ ಬ್ಯುಸಿ ನಟಿಯಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ‘ರಣಬಾಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ‘ಮೈಸಾ’ ಎನ್ನುವ ಹಾರರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಅಲ್ಲು ಅರ್ಜುನ್ ಜೊತೆ ‘ರಾಕಾ’ ಸಿನಿಮಾ, ಹಾಗೂ ಇದೀಗ ‘ಎಂ.ಎಸ್. ಸುಬ್ಬುಲಕ್ಷ್ಮಿ’ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ.