ರಿಲಯನ್ಸ್ ಜಿಯೋ ಮತ್ತು ಟಿ-ಮೊಬೈಲ್ ವಿಶ್ವದ ಮೊದಲ 5G SA ರೋಮಿಂಗ್ ಸೌಲಭ್ಯವನ್ನು ಯಶಸ್ವಿಯಾಗಿ ಸಾಧಿಸಿವೆ. ಇದರಿಂದ ಜಿಯೋ ಬಳಕೆದಾರರು ಅಮೆರಿಕಕ್ಕೆ ಪ್ರಯಾಣಿಸಿದಾಗ ಸಿಮ್ ಬದಲಾಯಿಸದೆ 5G ನೆಟ್‌ವರ್ಕ್ ಪಡೆಯಬಹುದು. ಈ ತಂತ್ರಜ್ಞಾನವು ಹೆಚ್ಚಿನ ವೇಗ ಮತ್ತು ನಿರಂತರ ಸಂಪರ್ಕವನ್ನು ಒದಗಿಸುತ್ತದೆ.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಎರಡು ದೈತ್ಯ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಟಿ-ಮೊಬೈಲ್ ವಿಶ್ವದ ಮೊದಲ 5G SA (Standalone Architecture) ರೋಮಿಂಗ್ ಸೌಲಭ್ಯವನ್ನು ಯಶಸ್ವಿಯಾಗಿ ಸಾಧಿಸಿವೆ. Syniverse ಸಹಯೋಗದ ಮೂಲಕ ಈ ಸೌಲಭ್ಯ ಸಾಧ್ಯವಾಗಿದೆ ಎಂದು ಟಿ-ಮೊಬೈಲ್(T-Mobile) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಯೋ ಬಳಕೆದಾರರು ಅಮೆರಿಕದಲ್ಲೂ ನೆಟ್ವರ್ಕ್ ಪಡೆಯಬಹುದು!

5G SA ರೋಮಿಂಗ್ ಸೌಲಭ್ಯ ಒದಗಿಸುವ ಯಶಸ್ವಿ ಸಾಧನೆಯಿಂದಾಗಿ ಇದಿಗ ಜಿಯೋ ಬಳಕೆದಾರರು ಪ್ರವಾಸ, ಉದ್ಯೋಗ ಇನ್ನಿತರ ಕಾರ್ಯಗಳಿಗೆ ಅಮೆರಿಕಕ್ಕೆ ಹೊರಟರೆ ಅಲ್ಲಿ ಸಿಮ್ ಬದಲಾಯಿಸಬೇಕಿಲ್ಲ. ಅಲ್ಲಿಯದು ಪ್ರತ್ಯೇಕ ಸಿಮ್ ಖರೀದಿಸಬೇಕಿಲ್ಲ. ಜಿಯೋ ಬಳಕೆದಾರರು ಅಮೆರಿಕಕ್ಕೆ (US) ಪ್ರಯಾಣಿಸಿದಾಗ 5G SA ನೆಟ್‌ವರ್ಕ್ ಸೌಲಭ್ಯ ಪಡೆಯಬಹುದು. ಅದೇ ರೀತಿಯಲ್ಲಿ ಟಿ-ಮೊಬೈಲ್(T-Mobile) ಗ್ರಾಹಕರು ಭಾರತಕ್ಕೆ ಬಂದಾಗ 5G SA ಸೇವೆ ಬಳಸಬಹುದು. ಟಿ-ಮೊಬೈಲ್‌ ರಿಲಯನ್ಸ್ ಜಿಯೋ ರೀತಿಯಲ್ಲೇ ದೈತ್ಯ ಟೆಲಿಕಾಂ ಕಂಪನಿಯಾಗಿದ್ದು, ಕೋಟ್ಯಂತರ ಬಳಕೆದಾರರಿದ್ದಾರೆ. ಅವರು ವಿದೇಶಕ್ಕೆ ಪ್ರಯಾಣಿಸುವಾಗ 5G SA ಮೂಲಕ ಹೆಚ್ಚಿನ ವೇಗ, ಕಡಿಮೆ ಲೇಟೆನ್ಸಿ ಮತ್ತು ಹೆಚ್ಚು ವಿಶ್ವಾಸಾರ್ಹ ಸಂಪರ್ಕವನ್ನು ಪಡೆಯಲು ಸಾಧ್ಯವಾಗಲಿದೆ. ಜಿಯೋ ಮತ್ತು ಟಿ-ಮೊಬೈಲ್ ನಡುವಿನ ಈ ಸಾಧನೆ ವಿಶ್ವದಲ್ಲೇ ಇದು ಮೊದಲ ಪ್ರಯತ್ನವಾಗಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ 5G SA ನೆಟ್‌ವರ್ಕ್ ಹೊಂದಿದ ಏಕೈಕ ಟೆಲಿಕಾಂ ಆಪರೇಟರ್ ಜಿಯೋ

ಈ ರೋಮಿಂಗ್ ಸಂಪರ್ಕ ವ್ಯವಸ್ಥೆಯನ್ನು Syniverse ಒದಗಿಸಿದೆ. ಇದು ಎರಡೂ ಟೆಲಿಕಾಂ ನೆಟ್‌ವರ್ಕ್‌ಗಳ ನಡುವೆ ಸುರಕ್ಷಿತ ಮತ್ತು ನಿರಂತರ ಸಂಪರ್ಕ ಸೌಲಭ್ಯ ನೀಡಿದೆ. ಜೊತೆಗೆ ಮುಂದಿನ ಪೀಳಿಗೆಯ ತಂತ್ರಜ್ಞಾನದ ಜಾಗತಿಕ ಬಳಕೆಗೂ ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ದೇಶಾದ್ಯಂತ 5G SA (Standalone) ನೆಟ್‌ವರ್ಕ್ ಹೊಂದಿರುವ ಏಕೈಕ ಟೆಲಿಕಾಂ ಆಪರೇಟರ್ ಜಿಯೋ ಆಗಿದೆ.

ಟಿ-ಮೊಬೈಲ್‌ನ ಮುಖ್ಯ ನೆಟ್‌ವರ್ಕ್ ಅಧಿಕಾರಿ ಅಂಕುರ್ ಕಪೂರ್ ಹೇಳಿದ್ದೇನು?

ಟಿ-ಮೊಬೈಲ್‌ನ ಮುಖ್ಯ ನೆಟ್‌ವರ್ಕ್ ಅಧಿಕಾರಿಯಾಗಿರುವ ಅಂಕುರ್ ಕಪೂರ್ ಈ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಜಾಗತಿಕ ವೈರ್‌ಲೆಸ್ ಸಂಪರ್ಕ ಕ್ಷೇತ್ರದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಇದರ ನೇತೃತ್ವ ವಹಿಸುತ್ತಿರುವುದಕ್ಕೆ ಟಿ-ಮೊಬೈಲ್ ಹೆಮ್ಮೆಪಡುತ್ತದೆ. 5G Standalone ಭವಿಷ್ಯಕ್ಕಾಗಿ ನಾವು 2020ರಲ್ಲೇ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದೆವು. ಇದೀಗ ಜಿಯೋ ಇಂಡಿಯಾದೊಂದಿಗೆ ಜಾಗತಿಕ ಮಟ್ಟದಲ್ಲಿ ಈ ನಾಯಕತ್ವವನ್ನು ಮುಂದುವರಿಸುತ್ತಿದ್ದೇವೆ. ಒಂದು ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ತಲುಪಿದರೂ ನಿಮ್ಮ 5G ನೆಟ್ವರ್ಕ್ ಸೌಲಭ್ಯದಲ್ಲಿ ಯಾವುದೇ ಅಡಚಣೆ, ವ್ಯತ್ಯಾಸವಾಗುವುದಿಲ್ಲ. ನೀವು ವಿಡಿಯೋ ಸ್ಟ್ರೀಮಿಂಗ್ ಮಾಡುತ್ತಿರಲಿ, ಪ್ರವಾಸದ ರೀಲ್ಸ್ ಹಂಚಿಕೊಳ್ಳುತ್ತಿರಲಿ ಅಥವಾ ಬಿಸಿನೆಸ್ ಆ್ಯಪ್‌ಗಳನ್ನು ಬಳಸುತ್ತಿರಲಿ, ಸಂಪರ್ಕ ನಿರಂತರವಾಗಿರುತ್ತದೆ. ಇದೇ ಈ ತಂತ್ರಜ್ಞಾನದ ಮಹತ್ವದ ಸಾಧನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಸರಾ ಹಬ್ಬಕ್ಕೆ ಮೊದಲೇ ಜಿಯೋ ಗ್ರಾಹಕರಿಗೆ ಬಂಪರ್ ಗಿಫ್ಟ್: ಇಷ್ಟು ಕಡಿಮೆ ಬೆಲೆಗೆ 5G ಡೇಟಾ ಪಡೆಯೋದು ಹೇಗೆ?

ಜಿಯೋ ಸಂಸ್ಥೆಯ ಅಂತಾರಾಷ್ಟ್ರೀಯ ನೆಟ್‌ವರ್ಕ್, ಪಾಲುದಾರಿಕೆ ಮತ್ತು ಸೇವೆಗಳ ಮುಖ್ಯಸ್ಥ ಮಾರ್ಕ್ ಯಾರ್ಕೋಸ್ಕಿ ಮಾತನಾಡಿ, 'ಇದೊಂದು ಮಹತ್ವದ ಬದಲಾವಣೆಯ ಮೈಲಿಗಲ್ಲಾಗಿದೆ. ಇದು ಕೇವಲ ರೋಮಿಂಗ್ ಸೇವೆಯಲ್ಲ. ಎರಡು ಪ್ರಮುಖ 5G Standalone ನೆಟ್‌ವರ್ಕ್‌ಗಳು ಪರಸ್ಪರ ಸಂಪರ್ಕ ಹೊಂದಿದಾಗ ಏನೆಲ್ಲ ಸಾಧ್ಯವಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಟಿ-ಮೊಬೈಲ್ ಮತ್ತು ಜಿಯೋ ಒಟ್ಟಾಗಿ 5G Standalone ತಂತ್ರಜ್ಞಾನದ ಮೂಲಕ ಗ್ರಾಹಕರು ಮತ್ತು ಉದ್ಯಮಗಳಿಗೆ ಹೊಸ ರೀತಿಯ ಸೇವೆಗಳು ಹಾಗೂ ಅನುಭವಗಳಿಗೆ ಅಡಿಪಾಯ ಹಾಕುತ್ತಿವೆ. AI ಆಧಾರಿತ ಸೇವೆಗಳನ್ನೂ ಇದರಲ್ಲಿ ಬಳಸಿಕೊಳ್ಳಬಹುದಾಗಿದೆ.

ಇದೇ 5G SA ತಂತ್ರಜ್ಞಾನದ ಭವಿಷ್ಯ. ಇದು ನಿರಂತರ ಸಂಪರ್ಕ, ಪರಸ್ಪರ ಕಾರ್ಯನಿರ್ವಹಣೆ ಮತ್ತು ಹೊಸ ರೀತಿಯ ಸೇವೆಗಳು ಹಾಗೂ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.