ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ಮರುನೇಮಕವನ್ನು ಟಾಟಾ ಟ್ರಸ್ಟ್ಸ್ ತೀವ್ರವಾಗಿ ವಿರೋಧಿಸಿದ್ದು, ಇದು ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿದೆ. ಈ ಆಡಳಿತಾತ್ಮಕ ಬಿಕ್ಕಟ್ಟು ಮತ್ತು ಐಪಿಒ ಭಿನ್ನಾಭಿಪ್ರಾಯದಿಂದಾಗಿ ಎರಡೂ ಬಣಗಳು ಬೃಹತ್ ಕಾನೂನು ಹೋರಾಟಕ್ಕೆ ಸಿದ್ಧವಾಗಿವೆ.
ಮುಂಬೈ: ದೇಶದ ಪ್ರಮುಖ ಕೈಗಾರಿಕಾ ಸಂಸ್ಥೆಯಾದ ಟಾಟಾ ಗ್ರೂಪ್‌ನಲ್ಲಿ (Tata Group) ಆಡಳಿತಾತ್ಮಕ ಬಿಕ್ಕಟ್ಟು ತೀವ್ರಗೊಂಡಿದೆ. ಟಾಟಾ ಸನ್ಸ್ ಸೆ.17 ರಂದು ಎನ್. ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿದ ನಿರ್ಧಾರದ ಸಿಂಧುತ್ವವನ್ನು ಟಾಟಾ ಟ್ರಸ್ಟ್ ಪ್ರಶ್ನಿಸಿದೆ. ಏಕೆಂದರೆ ಟಾಟಾ ಟ್ರಸ್ಟ್‌ನ ನಾಮನಿರ್ದೇಶಿತ ನಿರ್ದೇಶಕರ ಕಡ್ಡಾಯ ಬೆಂಬಲವನ್ನು ಪಡೆಯಲಾಗಿಲ್ಲ. ಇದು ನಿಯಮಗಳ ಉಲ್ಲಂಘನೆ ಆಗಿದೆ. ಹೀಗಾಗಿ ನೇಮಕವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಟಾಟಾ ಟ್ರಸ್ಟ್ ಭಾನುವಾರ ತಿಳಿಸಿದೆ. ಸೆ.17 ರಂದು ಇಬ್ಬರು ನಾಮನಿರ್ದೇಶಿತರಲ್ಲಿ ಒಬ್ಬರು ನಿರ್ಣಯದ ವಿರುದ್ಧ ಮತ ಚಲಾಯಿಸಿದರು. ಅಂದರೆ ಅಗತ್ಯವಾದ ದೃಢೀಕರಣದ ಬೆಂಬಲ ಲಭ್ಯವಿಲ್ಲ ಎಂದು ಟ್ರಸ್ಟ್ ಹೇಳಿದೆ.
ಟಾಟಾ ಸನ್ಸ್‌ನ (Tata Sons) ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರನ್ನು ಮತ್ತೆ ಐದು ವರ್ಷಗಳ ಅವಧಿಗೆ ಮರುನೇಮಕ ಮಾಡಿರುವುದು ಟಾಟಾ ಟ್ರಸ್ಟ್ಸ್ (Tata Trusts) ಮತ್ತು ಟಾಟಾ ಸನ್ಸ್ ಮಂಡಳಿಯ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ. ಈ ನಿರ್ಧಾರದ ಸಿಂಧುತ್ವವನ್ನು ಪ್ರಶ್ನಿಸಿರುವ ನೋಯೆಲ್ ಟಾಟಾ ನೇತೃತ್ವದ ಟಾಟಾ ಟ್ರಸ್ಟ್ಸ್, ಇದನ್ನು ಕಾನೂನುಬಾಹಿರ ಎಂದು ಕರೆದಿದೆ. ಪ್ರಸ್ತುತ ಎರಡೂ ಬಣಗಳು ದೇಶದ ಪ್ರಖ್ಯಾತ ಹಿರಿಯ ವಕೀಲರನ್ನು ಮತ್ತು ಕಾನೂನು ಸಂಸ್ಥೆಗಳನ್ನು ಅಖಡಕ್ಕಿಳಿಸಿದ್ದು, ಬೃಹತ್ ನ್ಯಾಯಾಲಯದ ಹೋರಾಟಕ್ಕೆ ಸಿದ್ಧತೆ ನಡೆಸಿವೆ.
ಮತದಾನದ ಬಿಕ್ಕಟ್ಟು ಮತ್ತು ಕಂಪನಿ ನಿಯಮಾವಳಿಗಳ ಶರತ್ತು
ಸೆಪ್ಟೆಂಬರ್ 17 ರಂದು ನಡೆದ ಟಾಟಾ ಸನ್ಸ್ ಮಂಡಳಿ ಸಭೆಯಲ್ಲಿ ಎನ್. ಚಂದ್ರಶೇಖರನ್ ಅವರನ್ನು ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಮರುನೇಮಕ ಮಾಡುವ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಯಿತು. ಆದರೆ, ಈ ಪ್ರಕ್ರಿಯೆಯು ಕಂಪನಿಯ 'ಸಂಘದ ವಿಧಿಗಳಿಗೆ' (Articles of Association - AoA) ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟಾಟಾ ಸನ್ಸ್‌ನಲ್ಲಿ ಶೇಕಡಾ 66 ರಷ್ಟು ಪಾಲನ್ನು ಹೊಂದಿರುವ ಟಾಟಾ ಟ್ರಸ್ಟ್ಸ್, ಈ ಮರುನೇಮಕ ನಿರ್ಣಯವು ಆರಂಭದಿಂದಲೇ ಅಸಿಂಧು ಮತ್ತು ಕಾನೂನುಬಾಹಿರ ಎಂದು ಹೇಳುತ್ತಲೇ ಬಂದಿದೆ.
ಟಾಟಾ ಸನ್ಸ್ ನಿಯಮಾವಳಿಗಳ ಪ್ರಕಾರ, ಟಾಟಾ ಟ್ರಸ್ಟ್ಸ್‌ನಿಂದ ನಾಮನಿರ್ದೇಶನಗೊಂಡ ಇಬ್ಬರೂ ನಿರ್ದೇಶಕರ ಬೆಂಬಲ ಈ ರೀತಿಯ ಪ್ರಮುಖ ನಿರ್ಧಾರಗಳಿಗೆ ಅತ್ಯಗತ್ಯ.
ಸಭೆಯಲ್ಲಿ ಟ್ರಸ್ಟ್ ನಾಮನಿರ್ದೇಶಿತ ನಿರ್ದೇಶಕರಾದ ನೋಯೆಲ್ ಟಾಟಾ ಅವರು ಚಂದ್ರಶೇಖರನ್ ಮರುನೇಮಕದ ವಿರುದ್ಧ ಮತ ಚಲಾಯಿಸಿದರೆ, ಮತ್ತೊಬ್ಬ ನಾಮನಿರ್ದೇಶಿತ ನಿರ್ದೇಶಕ ವೇಣು ಶ್ರೀನಿವಾಸನ್ ಬೆಂಬಲಿಸಿದರು.
ಟ್ರಸ್ಟ್ ನಿಯಮಗಳ ಪ್ರಕಾರ ಇಬ್ಬರೂ ನಾಮನಿರ್ದೇಶಿತರ ಒಮ್ಮತ (ಬಹುಮತ) ಅಗತ್ಯವಿತ್ತು. ಆದರೆ ಇಬ್ಬರಲ್ಲಿ ಒಬ್ಬರು ವಿರೋಧಿಸಿದ ಕಾರಣ ನಿರ್ಣಯಕ್ಕೆ ಟ್ರಸ್ಟ್ಸ್ ಬೆಂಬಲ ಸಿಕ್ಕಿಲ್ಲ ಎಂಬುದು ನೋಯೆಲ್ ಟಾಟಾ ವಾದ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹರೀಶ್ ಮನ್ವಾನಿ ಅವರು ತಮ್ಮ 'ನಿರ್ಣಾಯಕ ಮತ' ಬಳಸಿ ಚಂದ್ರಶೇಖರನ್ ಪರವಾಗಿ ನಿರ್ಧಾರ ಪ್ರಕಟಿಸಿದರು.
ಮಂಡಳಿಯಲ್ಲಿ ಸಮಾನ ಮತಗಳಿದ್ದಾಗ ಮಾತ್ರ ಅಧ್ಯಕ್ಷರ ನಿರ್ಣಾಯಕ ಮತ ಬಳಸಬಹುದು, ಆದರೆ ಟ್ರಸ್ಟ್ ನಾಮನಿರ್ದೇಶಿತರ ಕಡ್ಡಾಯ ಬೆಂಬಲಕ್ಕೆ ಪರ್ಯಾಯವಾಗಿ ಅದನ್ನು ಬಳಸಲಾಗದು ಎಂದು ಟ್ರಸ್ಟ್ಸ್ ವಾದಿಸಿದೆ.
ಇದಲ್ಲದೆ, 2022 ರಲ್ಲಿ ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡುವಾಗ 'ಆರ್ಟಿಕಲ್ 118' ಬಳಸಲಾಗಿತ್ತು, ಆದರೆ ಈ ಬಾರಿ 'ಆರ್ಟಿಕಲ್ 121' ಅನ್ನು ತಪ್ಪಾಗಿ ಅನ್ವಯಿಸಿ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ನೋಯೆಲ್ ಟಾಟಾ ಸುಪ್ರಕಾಶ್ ಮುಖೋಪಾಧ್ಯಾಯ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಐಪಿಒ (IPO) ಮತ್ತು ಸಾರ್ವಜನಿಕ ಕಂಪನಿ ಮಾಡುವ ಕುರಿತು ಭಿನ್ನಾಭಿಪ್ರಾಯ
ಚಂದ್ರಶೇಖರನ್ ಮರುನೇಮಕದ ಜೊತೆಗೆ, ಟಾಟಾ ಸನ್ಸ್ ಸಂಸ್ಥೆಯನ್ನು ಶೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವ (IPO) ವಿಚಾರದಲ್ಲೂ ಎರಡೂ ಬಣಗಳ ನಡುವೆ ಭಾರಿ ಭಿನ್ನಾಭಿಪ್ರಾಯವಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಗಳಂತೆ ಟಾಟಾ ಸನ್ಸ್ ಕೋರ್ ಹೂಡಿಕೆ ಕಂಪನಿಯಾಗಿ (NBFC) ಸಾರ್ವಜನಿಕವಾಗಿ ಪಟ್ಟಿಯಾಗಬೇಕಿತ್ತು. ಆದರೆ ಟಾಟಾ ಟ್ರಸ್ಟ್ಸ್ ಐಪಿಒಗೆ ಬರುವುದನ್ನು ನಿರಂತರವಾಗಿ ವಿರೋಧಿಸುತ್ತಿದೆ.
ಆರ್‌ಬಿಐಗೆ ನೀಡಿರುವ ಸ್ವಯಂಪ್ರೇರಿತ ಅರ್ಜಿಯ ನಂತರವೂ ಇತರ ಪರ್ಯಾಯ ಆಡಳಿತಾತ್ಮಕ ಮಾರ್ಗಗಳನ್ನು ಹುಡುಕಬೇಕೇ ಹೊರತು ಕಂಪನಿಯನ್ನು ತಕ್ಷಣ ಪಟ್ಟಿ ಮಾಡಬಾರದು ಎಂದು ಟ್ರಸ್ಟ್ಸ್ ಪಟ್ಟು ಹಿಡಿದಿದೆ. ಇನ್ನೊಂದೆಡೆ, ಟಾಟಾ ಸನ್ಸ್ ಜಾಗತಿಕ ಮಟ್ಟದ ಪಾರದರ್ಶಕತೆ ಹೊಂದಲು ಸಾರ್ವಜನಿಕ ಕಂಪನಿಯಾಗುವುದು ಅಗತ್ಯ ಎಂಬ ವಾದವೂ ಕೇಳಿಬರುತ್ತಿದೆ.
ಎರಡೂ ಬಣಗಳಿಂದ ದೇಶದ ಅಗ್ರಗಣ್ಯ ವಕೀಲರ ದಂಡು
ಸಂಭಾವ್ಯ ಕೋರ್ಟ್ ಹೋರಾಟಕ್ಕೆ ಎರಡೂ ಕಡೆಯವರು ದೇಶದ ಅತ್ಯುನ್ನತ ಕಾನೂನು ತಜ್ಞರನ್ನು ನೇಮಿಸಿಕೊಂಡಿದ್ದಾರೆ. ಟಾಟಾ ಟ್ರಸ್ಟ್ಸ್ ಮತ್ತು ನೋಯೆಲ್ ಟಾಟಾ ಪರ 'ಸಿರಿಲ್ ಅಮರ್‌ಚಂದ್ ಮಂಗಲದಾಸ್' (ವ್ಯವಸ್ಥಾಪಕ ಪಾಲುದಾರ ಸಿರಿಲ್ ಶ್ರಾಫ್ ಮತ್ತು ಇಂದ್ರಾನಿಲ್ ದೇಶಮುಖ್) ಕಾನೂನು ಸಂಸ್ಥೆ. ಹಿರಿಯ ವಕೀಲರುಗಳಾದ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹತ್ಗಿ, ಆಸ್ಪಿ ಚಿನೋಯ್, ಮತ್ತು ಜನಕ್ ದ್ವಾರಕದಾಸ್ ನೇಮಕ ಮಾಡಲಾಗಿದ್ದು ಸಲಹೆಗಾರರಾಗಿ ಟಾಟಾ ಸನ್ಸ್‌ನ ಮಾಜಿ ಗ್ರೂಪ್ ಜನರಲ್ ಕೌನ್ಸೆಲ್ ಭರತ್ ವಾಸನಿ ಇದ್ದಾರೆ.
ಟಾಟಾ ಸನ್ಸ್ ಮತ್ತು ಎನ್. ಚಂದ್ರಶೇಖರನ್ ಪರವಾಗಿ ಕಾನೂನು ಸಂಸ್ಥೆ: 'ಅನಗ್ರಾಮ್ ಪಾರ್ಟ್‌ಪರ್ಸ್' (ಶುವ ಮಂಡಲ್ - 2016 ರಲ್ಲಿ ಸೈರಸ್ ಮಿಸ್ತ್ರಿ ಪ್ರಕರಣದಲ್ಲಿ ಟಾಟಾ ಪರ ವಾದಿಸಿದ್ದ ಪ್ರಮುಖರು). ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ರವಿ ಕದಮ್ ನೇಮಿಸಲಾಗಿದೆ.
ಮುಂಬರುವ ಪರಿಣಾಮಗಳು
ಸೈರಸ್ ಮಿಸ್ತ್ರಿ ಪ್ರಕರಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಟಾಟಾ ಟ್ರಸ್ಟ್ಸ್ ಹೊಂದಿರುವ ವಿಶೇಷ ಹಕ್ಕುಗಳನ್ನು ಎತ್ತಿಹಿಡಿದಿತ್ತು ಎಂಬುದನ್ನು ಟ್ರಸ್ಟ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಈ ಆಡಳಿತಾತ್ಮಕ ಬಿಕ್ಕಟ್ಟು ನ್ಯಾಯಾಲಯದ ಮೆಟ್ಟಿಲೇರಿದರೆ, ಟಾಟಾ ಗ್ರೂಪ್‌ನ ಪ್ರಮುಖ ಕಾರ್ಯತಂತ್ರದ ನಿರ್ಧಾರಗಳು ಮತ್ತು ಹೂಡಿಕೆ ಯೋಜನೆಗಳು ವಿಳಂಬವಾಗುವ ಸಾಧ್ಯತೆಯಿದೆ.

