2026ರ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಹಿರಿಯ ನಟ ವಿ.ರವಿಚಂದ್ರನ್ ಅವರನ್ನು ಜಿಲ್ಲಾಡಳಿತ ಆಹ್ವಾನಿಸಿದೆ. ಅಕ್ಟೋಬರ್ 15ರಿಂದ 18ರವರೆಗೆ ನಡೆಯುವ ಈ ಅದ್ಧೂರಿ ಉತ್ಸವಕ್ಕೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಆಹ್ವಾನ ಪತ್ರಿಕೆ ನೀಡಲಾಗಿದೆ.
ಮಂಡ್ಯ (ಸೆ.21): 2026ನೇ ಸಾಲಿನ ಐತಿಹಾಸಿಕ ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ 'ಕ್ರೇಜಿಸ್ಟಾರ್' ವಿ.ರವಿಚಂದ್ರನ್ ಅವರನ್ನು ಜಿಲ್ಲಾಡಳಿತ ಅಧಿಕೃತವಾಗಿ ಆಹ್ವಾನಿಸಿದೆ.
ಕ್ಷೇತ್ರದ ಶಾಸಕರೂ ಹಾಗೂ ಸೆಸ್ಕ್ (CESC) ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ಅವರ ನೇತೃತ್ವದಲ್ಲಿ, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಭಾನುವಾರ ಬೆಂಗಳೂರಿನಲ್ಲಿರುವ ವಿ.ರವಿಚಂದ್ರನ್ ಅವರ ನಿವಾಸಕ್ಕೆ ತೆರಳಿ, ಶಲ್ಯ ಹೊದಿಸಿ, ಫಲಪುಷ್ಪ ನೀಡಿ ಗೌರವಪೂರ್ವಕವಾಗಿ ದಸರಾ ಉದ್ಘಾಟನೆಗೆ ಆಹ್ವಾನ ಪತ್ರಿಕೆ ನೀಡಿದರು.
ಅಕ್ಟೋಬರ್ 15ರಿಂದ 18ರವರೆಗೆ ಅದ್ಧೂರಿ ಆಚರಣೆ:
ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಅಕ್ಟೋಬರ್ 15ರಿಂದ 18ರವರೆಗೆ ಮೂರು ದಿನಗಳ ಕಾಲ ದಸರಾ ಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಅದ್ಧೂರಿಯಾಗಿ ಜರುಗಲಿದೆ. ಈ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸುವಂತೆ ನಟ ವಿ.ರವಿಚಂದ್ರನ್ ಅವರಿಗೆ ಮನವಿ ಮಾಡಲಾಗಿದ್ದು, ಅವರು ಸರ್ಕಾರದ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿವರ್ಷದಂತೆ ಈ ಬಾರಿಯೂ ದಸರಾವನ್ನು ಕಲಾತ್ಮಕ ಹಾಗೂ ಅಂದವಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಕೈಗೊಂಡಿದೆ.


