ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ ಟ್ರಕ್ ಮತ್ತು ಬಸ್ ವಿಭಾಗವನ್ನು ₹525 ಕೋಟಿಗೆ 'ಎಸ್‌ಎಮ್‌ಎಲ್ ಮಹೀಂದ್ರಾ'ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಬೃಹತ್ ಪುನರ್ರಚನೆಯು ಕಂಪನಿಯ ವಾಣಿಜ್ಯ ವಾಹನಗಳ ಉದ್ಯಮವನ್ನು ಒಂದೇ ಸೂರಿನಡಿ ತಂದು, ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ.
ಮುಂಬೈ (ಜು.29): ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಹೀಂದ್ರಾ ಅಂಡ್ ಮಹೀಂದ್ರಾ (M&M), ತನ್ನ ವಾಣಿಜ್ಯ ವಾಹನಗಳ (Commercial Vehicles) ಉದ್ಯಮವನ್ನು ಒಂದೇ ಸೂರಿನಡಿ ತರುವ ಬೃಹತ್ ಯೋಜನೆಗೆ ಚಾಲನೆ ನೀಡಿದೆ. ಇದರ ಭಾಗವಾಗಿ ಕಂಪನಿಯ ಆಡಳಿತ ಮಂಡಳಿಯು ತನ್ನ ಟ್ರಕ್ ಮತ್ತು ಬಸ್ ವಿಭಾಗವನ್ನು (MTBD) ತನ್ನದೇ ಅಂಗಸಂಸ್ಥೆಯಾದ 'ಎಸ್‌ಎಮ್‌ಎಲ್ ಮಹೀಂದ್ರಾ'ಗೆ (SML Mahindra) ₹525 ಕೋಟಿಗೆ ಮಾರಾಟ ಮಾಡಲು ಜುಲೈ 29 ರಂದು ಅನುಮೋದನೆ ನೀಡಿದೆ.
ಈ ವ್ಯವಹಾರವನ್ನು 'ಸ್ಲಂಪ್ ಸೇಲ್' (Slump Sale) ಆಧಾರದ ಮೇಲೆ ನಡೆಸಲಾಗುತ್ತಿದ್ದು, ಇದರಡಿ ಪ್ರಸಕ್ತ ವಿಭಾಗದ ಆಸ್ತಿಪಾಸ್ತಿಗಳು, ಸಿಬ್ಬಂದಿ, ಪರವಾನಗಿಗಳು ಹಾಗೂ ಸಾಲ ಬಾಧ್ಯತೆಗಳು ಎಸ್‌ಎಮ್‌ಎಲ್ ಮಹೀಂದ್ರಾಗೆ ವರ್ಗಾವಣೆಯಾಗಲಿವೆ ಎಂದು ಕಂಪನಿಯು ಶೇರ್ ಎಕ್ಸ್‌ಚೇಂಜ್ ಸಲ್ಲಿಕೆಯಲ್ಲಿ ತಿಳಿಸಿದೆ.
ಈ ನಿರ್ಧಾರದ ಕುರಿತು ಮಾತನಾಡಿದ ಮಹೀಂದ್ರಾ ಗ್ರೂಪ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನೀಶ್ ಶಾ, "ಈ ಯೋಜನೆಯು ಮಹೀಂದ್ರಾ ಗ್ರೂಪ್‌ನ ವಾಣಿಜ್ಯ ವಾಹನ ರಚನೆಯನ್ನು ಸರಳೀಕರಿಸುತ್ತದೆ. ಟ್ರಕ್ ಹಾಗೂ ಬಸ್ ಕಾರ್ಯಾಚರಣೆಗಳನ್ನು ಎಸ್‌ಎಮ್‌ಎಲ್ ಮಹೀಂದ್ರಾ ಅಡಿಯಲ್ಲಿ ಕ್ರೋಢೀಕರಿಸುವ ಮೂಲಕ, ವಾಣಿಜ್ಯ ವಾಹನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಬೆಳವಣಿಗೆ ಮತ್ತು ನಾಯಕತ್ವ ಸಾಧಿಸಲು ಏಕೀಕೃತ ಸಂಸ್ಥೆಯನ್ನು ರೂಪಿಸಲಾಗುತ್ತಿದೆ," ಎಂದು ಹೇಳಿದ್ದಾರೆ.
ಮೌಲ್ಯಮಾಪನ ಕಾರ್ಯದ ನಂತರ ₹525 ಕೋಟಿ ಮೊತ್ತದ ಈ ಒಪ್ಪಂದ ಅಂತಿಮಗೊಂಡಿದ್ದು, ಆದಾಯಗಳ ಹೊಂದಾಣಿಕೆಗೆ ಒಳಪಟ್ಟಿರುತ್ತದೆ. ಉದ್ಯಮ ವರ್ಗಾವಣೆ ಒಪ್ಪಂದಕ್ಕೆ (BTA) ಆಗಸ್ಟ್ 7 ರಂದು ಅಥವಾ ಅದಕ್ಕೂ ಮುನ್ನ ಸಹಿ ಬೀಳಲಿದ್ದು, ನಿಯಂತ್ರಕ ಪ್ರಾಧಿಕಾರಗಳ ಅನುಮೋದನೆಗಳ ನಂತರ ಜನವರಿ 31, 2027 ರೊಳಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಉದ್ಯಮ ಪುನರ್ರಚನೆ ಹಿನ್ನೆಲೆ
ಸುಮಾರು ಒಂದು ವರ್ಷದ ಹಿಂದೆ, ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯು 'ಸುಮಿಟೊಮೊ ಕಾರ್ಪೊರೇಷನ್' ಮತ್ತು 'ಇಸುಜು ಮೋಟಾರ್ಸ್'ನಿಂದ 'ಎಸ್‌ಎಮ್‌ಎಲ್ ಇಸುಜು' (ಈಗಿನ ಎಸ್‌ಎಮ್‌ಎಲ್ ಮಹೀಂದ್ರಾ) ಕಂಪನಿಯ ಶೇಕಡಾ 58.97 ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಇದೀಗ ಎರಡು ಉದ್ಯಮಗಳನ್ನು ಒಂದೇ ಸೂರಿನಡಿ ತರುವುದರಿಂದ ವ್ಯಾಪಕ ಉತ್ಪನ್ನ ಪೋರ್ಟ್‌ಫೋಲಿಯೋ, ವಿಶಾಲವಾದ ಮಾರುಕಟ್ಟೆ ವ್ಯಾಪ್ತಿ ಹಾಗೂ ಕಾರ್ಯಾಚರಣೆಯ ದಕ್ಷತೆ ಹೆಚ್ಚಲಿದೆ.
ಪ್ರಸ್ತುತ ಎಸ್‌ಎಮ್‌ಎಲ್ ಮಹೀಂದ್ರಾ ಕಂಪನಿಯು ವರ್ಷಕ್ಕೆ 24,000 ಚಾಸಿಸ್ (Chassis) ಹಾಗೂ 12,000 ಬಸ್ ಯೂನಿಟ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಇನ್ನೊಂದೆಡೆ, ಪುಣೆ ಬಳಿಯ ಚಾಕಣ್‌ನಲ್ಲಿ ಎಮ್&ಎಮ್ ಸಂಸ್ಥೆಯು ವರ್ಷಕ್ಕೆ 35,000 ದಿಂದ 40,000 ಟ್ರಕ್ ಮತ್ತು ಬಸ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಅರ್ಧದಷ್ಟು ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿದೆ.
2025-26ರ ಹಣಕಾಸು ವರ್ಷದಲ್ಲಿ ಟ್ರಕ್ ಮತ್ತು ಬಸ್ ವಿಭಾಗವು (MTBD) ₹ 2,989 ಕೋಟಿ ಆದಾಯ ಗಳಿಸಿದ್ದು, ಇದು ಎಮ್&ಎಎಮ್‌ನ ಒಟ್ಟು ಕಾರ್ಯಾಚರಣೆಯ ಆದಾಯದ ಶೇ. 2.02 ರಷ್ಟಾಗಿದೆ. ಮಾಚ್ 31, 2026 ರ ಲೆಕ್ಕಪತ್ರದಂತೆ ಈ ಉದ್ಯಮದ ಪುಸ್ತಕ ಮೌಲ್ಯ ₹ 481 ಕೋಟಿ ಆಗಿತ್ತು.
ಉಭಯ ಕಂಪನಿಗಳ ಒಟ್ಟು ಮಾರಾಟದ ಪ್ರಮಾಣವನ್ನು ಲೆಕ್ಕಹಾಕಿದರೆ ದೇಶದ ವಾಣಿಜ್ಯ ವಾಹನ ವಲಯದಲ್ಲಿ ಜಂಟಿ ಸಂಸ್ಥೆಯು 4ನೇ ಸ್ಥಾನಕ್ಕೇರಲಿದೆ. ಎರಡೂ ಸಂಸ್ಥೆಗಳು ಸೇರಿ ಪ್ರಸ್ತುತ 200 ಡೀಲರ್‌ಶಿಪ್ ಹಾಗೂ 650 ಟಚ್‌ಪಾಯಿಂಟ್‌ಗಳನ್ನು ಹೊಂದಿದ್ದು, ಮುಂದಿನ 18 ತಿಂಗಳಲ್ಲಿ 20-25 ಹೊಸ ಡೀಲರ್‌ಶಿಪ್ ಹಾಗೂ 50-60 ಸರ್ವಿಸ್ ಸ್ಟೇಷನ್‌ಗಳನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಎಸ್‌ಎಮ್‌ಎಲ್ ಮಹೀಂದ್ರಾ ಎಮ್&ಎಮ್‌ನ ಪಟ್ಟಿಮಾಡಲ್ಪಟ್ಟ ಅಂಗಸಂಸ್ಥೆಯಾಗಿದ್ದರೂ, ಈ ವ್ಯವಹಾರವನ್ನು ಸಂಪೂರ್ಣ ಪಾರದರ್ಶಕ ನಿಯಮಗಳಡಿ ನಡೆಸಲಾಗಿದೆ. ಪ್ರಕ್ರಿಯೆಯ ನಂತರವೂ ಮಹೀಂದ್ರಾ ಒಪ್ಪಂದದ ಆಧಾರದ ಮೇಲೆ ಉತ್ಪಾದನೆಯನ್ನು ಮುಂದುವರಿಸಲಿದ್ದು, ಎಸ್‌ಎಮ್‌ಎಲ್ ಮಹೀಂದ್ರಾ ಸಂಸ್ಥೆಯು ಉದ್ಯಮದ ಸಂಪೂರ್ಣ ನಿರ್ವಹಣೆ ವಹಿಸಿಕೊಳ್ಳಲಿದೆ.


