ಮಹೀಂದ್ರಾ ಕಂಪನಿಯು ಜುಲೈ 10 ರಿಂದ ತನ್ನ ಎಸ್‌ಯುವಿ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಏರಿಕೆ ಮಾಡುತ್ತಿದೆ. ಈ ಬೆಲೆ ಏರಿಕೆಯ ನಡುವೆಯೂ, ಸ್ಕಾರ್ಪಿಯೋ ಎನ್, ಎಕ್ಸ್‌ಯುವಿ700 ನಂತಹ ಜನಪ್ರಿಯ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಲವಾಗಿ ಮುಂದುವರಿದಿದೆ.

ಮುಂಬೈ (ಜು.8): ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯ ಬಲಿಷ್ಠ ಎಸ್‌ಯುವಿ (SUV) ಕಾರುಗಳನ್ನು ಖರೀದಿಸಲು ಪ್ಲ್ಯಾನ್‌ ಮಾಡ್ತಾ ಇರುವ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ. ಜುಲೈ 10 ರಿಂದ ಮಹೀಂದ್ರಾ & ಮಹೀಂದ್ರಾ ಕಂಪನಿಯ ವಾಹನಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಲಿದೆ. ಕಂಪನಿಯು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಜುಲೈ 10 ರಿಂದ ಅನ್ವಯವಾಗುವಂತೆ ತನ್ನ ಇಡೀ ಎಸ್‌ಯುವಿ ಶ್ರೇಣಿಯ ಕಾರುಗಳ ಬೆಲೆಯನ್ನು ಸರಾಸರಿ ಶೇ. 2.7 ರಷ್ಟು ಮತ್ತು ಕಮರ್ಷಿಯಲ್ (ವಾಣಿಜ್ಯ) ವಾಹನಗಳ ದರವನ್ನು ಸರಾಸರಿ ಶೇ. 2 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಆದರೆ, ಈ ಬೆಲೆ ಏರಿಕೆಯು ಕಾರಿನ ವಿವಿಧ ಮಾಡೆಲ್ ಹಾಗೂ ವೇರಿಯೆಂಟ್‌ಗಳ ಆಧಾರದ ಮೇಲೆ ಬದಲಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಸ್‌ಯುವಿ ಕಾರುಗಳಿಗೆ ಅಭೂತಪೂರ್ವ ಬೇಡಿಕೆ ಇರುವ ಸಂದರ್ಭದಲ್ಲೇ ಕಂಪನಿಯು ಈ ನಿರ್ಧಾರ ಕೈಗೊಂಡಿದೆ. ಸದ್ಯ ದೇಶದಲ್ಲಿ ಎಸ್‌ಯುವಿ ಸೆಗ್ಮೆಂಟ್ ಕಾರುಗಳ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಮಹೀಂದ್ರಾ ಮಾರಾಟದಲ್ಲಿ ಸತತ ಪ್ರಗತಿ ದಾಖಲಿಸುತ್ತಿದೆ. ವಿಶೇಷವೆಂದರೆ, ಮಹೀಂದ್ರಾದ ಪ್ಯಾಸೆಂಜರ್ ವೆಹಿಕಲ್ ಪೋರ್ಟ್‌ಫೋಲಿಯೊದಲ್ಲಿ ಕೇವಲ ಎಸ್‌ಯುವಿ ಕಾರುಗಳು ಮಾತ್ರವೇ ಶಾಮೀಲಾಗಿವೆ. ಇದಲ್ಲದೆ, ಕಳೆದ ಕೆಲವು ತಿಂಗಳುಗಳಿಂದ ಕಂಪನಿಯ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳ ಬೇಡಿಕೆಯಲ್ಲೂ ಭಾರಿ ಜಿಗಿತ ಕಂಡುಬಂದಿದೆ.

ಬೆಲೆ ಏರಿಕೆಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವೇ ಕಾರಣ

ಮಹೀಂದ್ರಾ ಕಂಪನಿಗಿಂತ ಮುಂಚಿತವಾಗಿ ದೇಶದ ಹಲವು ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಈಗಾಗಲೇ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ. ಕಾರುಗಳ ತಯಾರಿಕೆಗೆ ಬಳಸಲಾಗುವ ಕಚ್ಚಾ ವಸ್ತುಗಳಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದೇ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಕಂಪನಿ ಸ್ಪಷ್ಟಪಡಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಹೆಚ್ಚಾದ ಉತ್ಪಾದನಾ ವೆಚ್ಚದ ಬಹುದೊಡ್ಡ ಪಾಲನ್ನು ಕಂಪನಿಯೇ ಭರಿಸುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ವೆಚ್ಚ ಮಿತಿಮೀರುತ್ತಿರುವುದರಿಂದ ಅದರ ಸ್ವಲ್ಪ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಮಹೀಂದ್ರಾ ಹೇಳಿದೆ.

ಬೆಲೆ ಏರಿಕೆಯ ನಡುವೆಯೂ ಮುಗಿಬಿದ್ದ ಗ್ರಾಹಕರು

ಬೆಲೆ ಏರಿಕೆಯ ಮುನ್ಸೂಚನೆ ನಡುವೆಯೂ ಮಹೀಂದ್ರಾ ಕಂಪನಿಯ ಹಲವು ಎಸ್‌ಯುವಿ ಕಾರುಗಳ ಮಾರಾಟ ಅತ್ಯಂತ ಬಲಿಷ್ಠವಾಗಿ ಮುಂದುವರಿದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕಂಪನಿಯು ವಾರ್ಷಿಕ ಆಧಾರದ ಮೇಲೆ ಎರಡಂಕಿ ಪ್ರಗತಿಯನ್ನು ದಾಖಲಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಕಂಪನಿಯ ಜನಪ್ರಿಯ ಮಾದರಿಗಳಾದ ಸ್ಕಾರ್ಪಿಯೋ ಎನ್ (Scorpio N), ಎಕ್ಸ್‌ಯುವಿ700 (XUV700), ಥಾರ್ ರಾಕ್ಸ್ (Thar Roxx), ಎಕ್ಸ್‌ಯುವಿ 3ಎಕ್ಸ್‌ಒ (XUV 3XO) ಮತ್ತು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಂಪನಿಯ ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ದೇಶದ ಅಗ್ರಗಣ್ಯ ಎಸ್‌ಯುವಿ ತಯಾರಿಕಾ ಕಂಪನಿಗಳಲ್ಲಿ ಮಹೀಂದ್ರಾ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

ಹೊಸ ಮಾದರಿಗಳ ಮೇಲೆ ತೀವ್ರ ನಿಗಾ

ಮಹೀಂದ್ರಾ ಕಂಪನಿಯು ತನ್ನ ಪ್ರಾಡಕ್ಟ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಗ್ರಾಹಕರಿಗೆ ಮತ್ತಷ್ಟು ಪ್ರೀಮಿಯಂ ಅನುಭವವನ್ನು ನೀಡುವ ಸಲುವಾಗಿ ಕಂಪನಿಯು ಇತ್ತೀಚೆಗಷ್ಟೇ ತನ್ನ ಜನಪ್ರಿಯ ಇವಿ ಮಾದರಿಯಾದ ಎಕ್ಸ್‌ಇವಿ 9ಇ (XEV 9e) ಕಾರಿನ ಹೊಸ ‘ಸಿನೆಲಕ್ಸ್ ಎಡಿಷನ್’ (Cineluxe Edition) ಅನ್ನು ಪರಿಚಯಿಸಿದೆ. ಇದರಲ್ಲಿ ಹೊಸ ಎಕ್ಸ್‌ಟೀರಿಯರ್ ಕಲರ್ ಮತ್ತು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.

ಇದರ ಜೊತೆಗೆ ಕಂಪನಿಯು ಹಲವು ಹೊಸ ಆಕರ್ಷಕ ಕಾರುಗಳ ತಯಾರಿಕೆಯಲ್ಲೂ ತೊಡಗಿಸಿಕೊಂಡಿದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ತನ್ನ ‘ವಿಷನ್ ಎಸ್’ (Vision S) ಕಾನ್ಸೆಪ್ಟ್ ಆಧಾರಿತ ಹೊಚ್ಚಹೊಸ ಎಸ್‌ಯುವಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರು ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾಗೆ ಸಿಲುಕಿದೆ. ಅಷ್ಟೇ ಅಲ್ಲದೆ, ಕಂಪನಿಯು ಭವಿಷ್ಯದ ತನ್ನ ಹೊಸ ಮಾಡೆಲ್‌ಗಾಗಿ ‘SXT’ ಎಂಬ ಹೆಸರಿನ ಹೊಸ ಟ್ರೇಡ್‌ಮಾರ್ಕ್ (ನೇಮ್‌ಪ್ಲೇಟ್) ಅನ್ನು ಸಹ ನೋಂದಾಯಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಮಹೀಂದ್ರಾದಿಂದ ಮತ್ತೊಂದು ಧಮಾಕಾ ಕಾರು ಮಾರುಕಟ್ಟೆಗೆ ಬರುವುದು ಖಚಿತವಾಗಿದೆ.