ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.10 ಕೋಟಿ ನಿವ್ವಳ ಲಾಭ ಗಳಿಸಿದ್ದು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಘೋಷಿಸಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು 'ಎಸ್.ಎಸ್.ಸಿ.ಬಿ.ಎಲ್- ಎಂ-ಪಾಸ್‌ಬುಕ್ ಆ್ಯಪ್' ಅನ್ನು ಸಹ ಪರಿಚಯಿಸಿದೆ.

ಬೆಂಗಳೂರು (ಸೆ.13): ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪ್ರಸಕ್ತ ಸಾಲಿನಲ್ಲಿ 1.10 ಕೋಟಿ ರು.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರಿ ರತ್ನ ಡಿ.ಆರ್.ವಿಜಯ ಸಾರಥಿ ಘೋಷಿಸಿದರು.

ಸೌತ್ ಎಂಡ್ ಸರ್ಕಲ್‌ನ ಚಾಮರಾಜ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಬ್ಯಾಂಕ್‌ನ ಮಹಿಳಾ ಖಾತೆದಾರರು ಸಾಲ ಪಡೆದಾಗ ಸಾಮಾನ್ಯ ಬಡ್ಡಿದರಕ್ಕಿಂತ ಶೇ.1ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಮಹಿಳೆಯರಿಗೆ ವಿಶೇಷ ಬಡ್ಡಿದರ ರಿಯಾಯಿತಿ ನೀಡುವ ಮೂಲಕ ಅವರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಉದ್ದೇಶ ಎಂದು ತಿಳಿಸಿದರು.

ಬ್ಯಾಂಕ್ ಪ್ರಸ್ತುತ 33,755 ಸದಸ್ಯರನ್ನು ಹೊಂದಿದ್ದು, ಕಳೆದ 7 ವರ್ಷಗಳಿಂದ ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ಘೋಷಿಸಲಾಗುತ್ತಿದೆ. ಆರ್‌ಬಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿ ಮುನ್ನಡೆಯುತ್ತಿದೆ. ಪ್ರಸಕ್ತ ಸಾಲಿನ ಅಂತ್ಯಕ್ಕೆ ಒಟ್ಟು ಎನ್‌ಪಿಎ ಶೇ10.22, ನಿವ್ವಳ ಎನ್‌ಪಿಎ ಶೇ2.03 ಹಾಗೂ ಸಿಆರ್‌ಎಆರ್ ಶೇ.17.90ರಷ್ಟಿದೆ ಎಂದು ವಿಜಯ ಸಾರಥಿ ವಿವರಿಸಿದರು.

ಡಿಜಿಟಲ್ ಪಾವತಿಗೆ ಹೆಚ್ಚಿನ ಸೌಲಭ್ಯ: 

ಸದಸ್ಯರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಒದಗಿಸಲು ಬ್ಯಾಂಕ್ ಫೋನ್‌ಪೇ, ಗೂಗಲ್‌ಪೇ ಹಾಗೂ ಮರ್ಚೆಂಟ್ ಪೇಮೆಂಟ್ ಸ್ಕ್ಯಾನರ್ ಸೌಲಭ್ಯ ಕಲ್ಪಿಸುತ್ತಿದೆ. ಈ ಮೂಲಕ ಗ್ರಾಹಕರು ಹಣ ವರ್ಗಾವಣೆ ಹಾಗೂ ವಿವಿಧ ಪಾವತಿಗಳನ್ನು ಸುಲಭವಾಗಿ ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸಬಹುದು. ಜೊತೆಗೆ ಖಾತೆ ವ್ಯವಹಾರಗಳ ಮಾಹಿತಿಯನ್ನು ಸುಲಭವಾಗಿ ಪಡೆಯಲು ‘ಎಸ್.ಎಸ್.ಸಿ.ಬಿ.ಎಲ್- ಎಂ-ಪಾಸ್‌ಬುಕ್ ಆ್ಯಪ್’ ಪರಿಚಯಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರು ಹಾಗೂ ಉಪಾಧ್ಯಕ್ಷ ಡಾ. ಕೆ.ಎಂ. ರಂಗಧಾಮಶೆಟ್ಟಿ, ಪ್ರಭಾರ ಪ್ರಧಾನ ವ್ಯವಸ್ಥಾಪಕ ಹರೀಶ್ ಬಿ.ಜೆ., ಪೂರ್ಣಾವಧಿ ಸಲಹೆಗಾರ ಬಿ.ಆರ್. ನಾಗರಾಜ್, ಬ್ಯಾಂಕಿನ ಪದಾಧಿಕಾರಿಗಳು ಇದ್ದರು.