ಅಮೆರಿಕವು ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ 'ಆನ್‌-ಅರ್ಬಿಟ್' ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದಾಗಿ ಅಧಿಕೃತವಾಗಿ ಒಪ್ಪಿಕೊಂಡಿದೆ. ಚೀನಾ ಮತ್ತು ರಷ್ಯಾದಂತಹ ಎದುರಾಳಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಈ ಕ್ರಮ, ಇದು ಭವಿಷ್ಯದ ಬಾಹ್ಯಾಕಾಶ ಯುದ್ಧದ ಸ್ವರೂಪವನ್ನು ಬದಲಾಯಿಸುವ ಸೂಚನೆ ನೀಡಿದೆ.

ಭವಿಷ್ಯದ ಯುದ್ಧಗಳು ಮತ್ತಷ್ಟು ಘನಘೋರವಾಗಿರಲಿದೆ. ಇಲ್ಲಿವರೆಗೆ ನಡೆಯುತ್ತಿದ್ದ ಯುದ್ಧಗಳೇ ಬೇರೆ, ಭವಿಷ್ಯದಲ್ಲಿ ನಡೆಯಬಹುದಾದ ಯುದ್ಧಗಳೇ ಬೇರೆಯಾಗಿರಲಿವೆ. ಈ ಹಿಂದೆ ಗಡಿಯಲ್ಲಿ ಸೈನಿಕರ ಮುಖಾಮುಖಿ ನಡೆಯುತ್ತಿದ್ದ ಸಂಪ್ರಾದಾಯಿಕ ಯುದ್ಧಗಳ ಕಾಲ ಮುಗಿಯಿತು. ಇನ್ನೇನಿದ್ರೂ ಮುಂದೆ ನಡೆಯುವ ಯುದ್ಧಗಳು ನೆಲದಲ್ಲಾಗುವ ಯುದ್ಧಕ್ಕಿಂತ ಬಾಹ್ಯಾಕಾಶಲ್ಲಾಗುವ ಯುದ್ಧಗಳು ಭೀಕರವಾಗಿರಲಿವೆ. ಅದರ ಭಾಗವಾಗಿ ಅಮೆರಿಕ ಬಾಹ್ಯಾಕಾಶ ಪಡೆ ಸಜ್ಜುಗೊಳಿಸಿದೆ.

ಬಾಹ್ಯಾಕಾಶದಲ್ಲಿ ಅಮೆರಿಕ ಅಪಾಯಕಾರಿ ವೆಪನ್!

ನೆಲದ ಮೇಲೆ ಅಷ್ಟೇ ಅಲ್ಲದೆ ಬಾಹ್ಯಾಕಾಶದಲ್ಲೂ ಅಪಾಯಕಾರಿ ವೆಪನ್‌ಗಳನ್ನ ನಿಯೋಜಿಸಿರುವ ಬಗ್ಗೆ ಅಮೆರಿಕದ ಸ್ಪೇಸ್ ಫೋರ್ಸ್ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಮೂಲಕ ಬಾಹ್ಯಾಕಾಶದಲ್ಲಿ ಆಕ್ರಮಣಕಾರಿ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಹೊಂದಿರುವುದನ್ನು ಅಮೆರಿಕ ಬಹಿರಂಗಪಡಿಸಿದೆ.

ಏನಿದು ಆನ್‌-ಅರ್ಬಿಟ್ ಶಸ್ತ್ರಾಸ್ತ್ರ?

ಮೇರಿಲ್ಯಾಂಡ್‌ನ ನ್ಯಾಷನಲ್ ಹಾರ್ಬರ್‌ನಲ್ಲಿ ನಡೆದ ವಾರ್ಷಿಕ ಏರ್, ಸ್ಪೇಸ್ ಆ್ಯಂಡ್ ಸೈಬರ್ ಸಮ್ಮೇಳನದಲ್ಲಿ ಮಾತನಾಡಿದ ಅಮೆರಿಕ ವಾಯುಪಡೆಯ ಕಾರ್ಯದರ್ಶಿ ಟ್ರಾಯ್ ಮೈಂಕ್, ಅಮೆರಿಕದ ಮೇಲೆ ಶತ್ರು ಪಡೆಗಳ ದಾಳಿಯಿಂದ ರಕ್ಷಿಸಿಕೊಳ್ಳಲು 'ಆನ್‌-ಅರ್ಬಿಟ್' ಶಸ್ತ್ರಾಸ್ತ್ರ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಮೂಲಕ ಚೀನಾ, ರಷ್ಯಾಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ ಬಾಹ್ಯಾಕಾಶದಲ್ಲಿ ಯಾವ ರೀತಿಯ ಶಸ್ತ್ರಾಸ್ತ್ರವನ್ನು ನಿಯೋಜಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಯುದ್ಧ ಸ್ವರೂಪಗಳ ಬದಲಾಗುತ್ತಿರುವ ಹಿನ್ನೆಲೆ ಅಮೆರಿಕದ ಬಾಹ್ಯಾಕಾಶ ರಕ್ಷಣೆಗೆ ಈ ಶಸ್ತ್ರಾಸ್ತ್ರವನ್ನು ಬಳಸಲಾಗುತ್ತದೆ ಎಂಬ ಸುಳಿವು ನೀಡಿದ್ದಾರೆ..

ಅಮೆರಿಕವನ್ನು ಕ್ಷಿಪಣಿಗಳು, ಇತರೆ ವಾಯು ದಾಳಿ ಬೆದರಿಕೆಗಳಿಂದ ರಕ್ಷಿಸಲು ಟ್ರಂಪ್ ಆಡಳಿತ ‘ಗೋಲ್ಡನ್ ಡೋಮ್’ ಕ್ಷಿಪಣಿ ರಕ್ಷಣಾ ವ್ಯವಸ್ಥೆ ವೇಗವಾಗಿ ಅಭಿವೃದ್ಧಿಪಡಿಸುತ್ತಿರುವ ಸಂದರ್ಭದಲ್ಲೇ ಟ್ರಾಯ್ ಮೈಂಕ್ ಬಾಹ್ಯಾಕಾಶದಲ್ಲಿ ವೆಪನ್ ನಿಯೋಜಿಸಿರುವ ಕುರಿತು ಬಹಿರಂಗಪಡಿಸಿರುವುದು ಗಮನರ್ಹವಾಗಿದೆ.

ಹಾಗೆ ನೋಡಿದರೆ ಬಾಹ್ಯಾಕಾಶದಲ್ಲಿ ಸೇನೆ, ಶಸ್ತ್ರಾಸ್ತ್ರ ನಿಯೋಜಿಸುವುದು ಹೊಸದೇನಲ್ಲ. ಈ ಹಿಂದೆ 1957ರಲ್ಲಿ ಸೋವಿಯತ್ ಒಕ್ಕೂಟ ‘ಸ್ಪುಟ್ನಿಕ್’ ಉಪಗ್ರಹವನ್ನು ಕಕ್ಷೆಗೆ ಉಡಾಯಿಸಿದ ಬಳಿಕವೇ ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಹಾಗೂ ಉಪಗ್ರಹಗಳನ್ನು ನಾಶಪಡಿಸುವ ಮಾರ್ಗಗಳ ಕುರಿತು ಪರಿಶೀಲನೆ ಆರಂಭಿಸಿದ್ದವು.

ಒಂದು ಕಾಲದಲ್ಲಿ ಬಾಹ್ಯಾಕಾಶದಲ್ಲಿ ಅಣ್ವಸ್ತ್ರಗಳ ನಿಯೋಜನೆಯೇ ದೊಡ್ಡ ಆತಂಕವಾಗಿತ್ತು. ಆದರೆ 1967ರಲ್ಲಿ ಅಮೆರಿಕ, ಸೋವಿಯತ್ ಒಕ್ಕೂಟ ಸೇರಿದಂತೆ ಹಲವು ದೇಶಗಳು ‘ಔಟರ್ ಸ್ಪೇಸ್ ಟ್ರೀಟಿ’ಗೆ ಸಹಿ ಹಾಕಿದವು. ಈ ಒಪ್ಪಂದದ ಪ್ರಕಾರ ಕಕ್ಷೆಯಲ್ಲಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದನ್ನು ನಿಷೇಧಿಸಲಾಗಿದೆ. ಆದರೆ ನಂತರ ಅಮೆರಿಕ, ರಷ್ಯಾ, ಚೀನಾ ಮತ್ತು ಭಾರತ ಸೇರಿದಂತೆ ಹಲವು ಪ್ರಮುಖ ದೇಶಗಳು ಈ ಒಪ್ಪಂದದ ವ್ಯಾಪ್ತಿಗೆ ನೇರವಾಗಿ ಬಾರದ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿವೆ. ಇದರಲ್ಲಿ ಎದುರಾಳಿ ದೇಶಗಳ ಉಪಗ್ರಹಗಳನ್ನು ಗುರಿಯಾಗಿಸುವ ತಂತ್ರಜ್ಞಾನವೂ ಸೇರಿದೆ. ಉಪಗ್ರಹಗಳು ಸೇನಾ ಸಂವಹನ, ಕಣ್ಗಾವಲು ಮತ್ತು ನ್ಯಾವಿಗೇಷನ್‌ಗೆ ಪ್ರಮುಖವಾಗಿವೆ.

ಅಮೆರಿಕ ಹೇಳಿದ್ದೇನು?

ಅಮೆರಿಕದ ಬಾಹ್ಯಾಕಾಶ ಪಡೆ ವಕ್ತಾರರು ಹೇಳುವ ಪ್ರಕಾರ, ಶತ್ರುಗಳ ದಾಳಿಯಿಂದ ಅಮೆರಿಕದ ಜಂಟಿ ಸೇನಾಪಡೆಗಳನ್ನು ರಕ್ಷಿಸಲು ಅಗತ್ಯವಿರುವ ಬಾಹ್ಯಾಕಾಶ ನಿಯಂತ್ರಣ ಶಸ್ತ್ರಾಸ್ತ್ರಗಳು ಅಮೆರಿಕದ ಬಳಿಯ ಕಕ್ಷೆಯಲ್ಲಿ ಇವೆ ಎಂದು ತಿಳಿಸಿದ್ದಾರೆ.

ಬಾಹ್ಯಾಕಾಶ ನಿಯಂತ್ರ ಎಂದರೇನು?

‘ಬಾಹ್ಯಾಕಾಶ ನಿಯಂತ್ರಣ’ ಎಂದರೆ ಬಾಹ್ಯಾಕಾಶ ವಲಯದಲ್ಲಿ ಎದುರಾಳಿಗಳ ಸಾಮರ್ಥ್ಯವನ್ನು ನಿಯಂತ್ರಿಸಲು ಮತ್ತು ತಡೆಯಲು ಕೈಗೊಳ್ಳುವ ಕಾರ್ಯಾಚರಣೆಗಳು ಎಂದು ಬಾಹ್ಯಾಕಾಶ ಪಡೆ ವಿವರಿಸಿದೆ. ಇದಕ್ಕಾಗಿ ನೇರ ದಾಳಿ ನಡೆಸುವ ಹಾಗೂ ದಾಳಿ ಮಾಡದೇ ತಡೆಯುವಂತಹ ವಿವಿಧ ವಿಧಾನಗಳನ್ನು ಬಳಸಬಹುದು. ಈ ಸಾಮರ್ಥ್ಯಗಳನ್ನು ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಉದ್ದೇಶಗಳಿಗೂ ಬಳಸಬಹುದು ಎಂದು ತಿಳಿಸಿದೆ.

ಹಾಗಾದರೆ ರಷ್ಯಾ ಮತ್ತು ಚೀನಾ ಏನು ಮಾಡುತ್ತಿವೆ?

ಅಮೆರಿಕದ ಎರಡು ಪ್ರಮುಖ ಭೌಗೋಳಿಕ-ರಾಜಕೀಯ(Geopolitical) ಎದುರಾಳಿಗಳಾದ ರಷ್ಯಾ ಮತ್ತು ಚೀನಾ ಬಾಹ್ಯಾಕಾಶದಲ್ಲಿ ಅಮೆರಿಕದ ಹಿತಾಸಕ್ತಿಗಳಿಗೆ ಸಂಭಾವ್ಯ ಬೆದರಿಕೆಯಾಗಿವೆ. ಅದರಲ್ಲೂ ಚೀನಾ ತನ್ನ ಸೇನಾ ಆಧುನೀಕರಣದ ಭಾಗವಾಗಿ ಬಾಹ್ಯಾಕಾಶ ಹಾಗೂ ಎದುರಾಳಿ ದೇಶಗಳ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಎದುರಿಸುವ ತಂತ್ರಜ್ಞಾನಗಳನ್ನು ವೇಗವಾಗಿ ಅಭಿವೃದ್ಧಿಪಡಿಸುತ್ತಿದೆ ಅಷ್ಟೇ ಅಲ್ಲ ಅವುಗಳನ್ನು ಬಳಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಪಡೆ ಹೇಳಿದೆ.

ಅದೇ ರೀತಿ, ರಷ್ಯಾ ಬಾಹ್ಯಾಕಾಶವನ್ನು ಯುದ್ಧದ ಪ್ರಮುಖ ವಲಯವೆಂದು ಪರಿಗಣಿಸಿದೆ. ಭವಿಷ್ಯದ ಸಂಘರ್ಷಗಳಲ್ಲಿ ಬಾಹ್ಯಾಕಾಶದ ಮೇಲಿನ ಪ್ರಾಬಲ್ಯ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ನಿಲುವನ್ನು ರಷ್ಯಾ ಹೊಂದಿದೆ ಎಂದು ಅಮೆರಿಕದ ಬಾಹ್ಯಾಕಾಶ ಪಡೆ ತಿಳಿಸಿದೆ.