ಮಾಜಿ ಕೇಂದ್ರ ರೈಲ್ವೈ ಸಚಿವ ಮುಕುಲ್ ರಾಯ್ ಸೊಸೆ ನೇಪಾಳ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಕೈಲಾಸ ಹಾಗೂ ಮಾನಸ ಸರೋವರ ಯಾತ್ರೆಯಲ್ಲಿದ್ದ ಮುಕುಲ್ ರಾಯ್ ಸೊಸೆ ಕುರಿತು ಯಾವುದೇ ಸುಳಿವು ಪತ್ತೆಯಾಗಿಲ್ಲ.

ಟಿಬೇಟ್ (ಆ.27) ನೇಪಾಳ ಪ್ರವಾಹದಲ್ಲಿ 288ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ. ಬಹುತೇಕರು ಕೈಲಾಸ-ಮಾನಸ ಸರೋವರ ಯಾತ್ರೆಯಲ್ಲಿದ್ದರೆ, ಮತ್ತೆ ಕೆಲವರು ಪ್ರವಾಸದಲ್ಲಿದ್ದರು. ದಿಢೀರ್ ಸಂಭವಿಸಿದ ಭೀಕರ ಪ್ರವಾಹದಲ್ಲಿ ಉತ್ತರ ನೇಪಾಳ ಹಾಗೂ ಟಿಬೇಡ್ ಗಡಿ ಅಕ್ಷರಶಃ ಕೊಚ್ಚಿ ಹೋಗಿದೆ. ಸಾವಿನ ಸಂಖ್ಯೆ 162ಕ್ಕೆ ಏರಿಕೆಯಾಗಿದೆ. ಒಟ್ಟು 1000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಪೈಕಿ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿದ್ದ ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ಸೊಸೆ, ಟಿಎಂಸಿ ಮಾಜಿ ಶಾಸಕ ಸುಬ್ರಾಂಶು ರಾಯ್ ಪತ್ನಿ ನಾಪತ್ತೆಯಾಗಿದ್ದಾರೆ.

ಸಂಪರ್ಕಕ್ಕೆ ಸಿಗದ ಶರ್ಮಿಷ್ಟ ಬೌಮಿಕ್ ರಾಯ್

ಕೇಂದ್ರದಲ್ಲಿ ಮಾಜಿ ರೈಲ್ವೇ ಸಚಿವರಾಗಿದ್ದ ಮುಕುಲ್ ರಾಯ್ ಸೊಸೆ ಶರ್ಮಿಷ್ಟ ಬೌಮಿಕ್ ರಾಯ್ ಬಂಗಾಳದಿಂದ ಕೈಲಾಸ ಹಾಗೂ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದರು. ಟ್ರಾವೆಲ್ ಎಜೆನ್ಸಿ ಆಯೋಜಿಸಿದ ಈ ಯಾತ್ರೆಯಲ್ಲಿ ಉತ್ತರ ಪರಗಣ ಜಿಲ್ಲೆಯ 32 ಮಂದಿ ಪ್ರಯಾಣ ಮಾಡಿದ್ದರು. ಈ ಪೈಕಿ ಶರ್ಮಿಷ್ಟಾ ಬೌಮಿಕ್ ರಾಯ್ ಕೂಡ ಒಬ್ಬರಾಗಿದ್ದರು. ಟಿಬೇಡ್ ಗಡಿ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲಾಗಿತ್ತು. ಇದರ ನಡುವೆ ದಿಢೀರ್ ಸಂಭವಿಸಿದ ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ. ಶರ್ಮಿಷ್ಟಾ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದೇ ವೇಳೆ ಶರ್ಮಿಷ್ಠ ಜೊತೆಗಿದ್ದ 32 ಮಂದಿಯೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಆಗಸ್ಟ್ 21 ರಂದು ಶರ್ಮಿಷ್ಠಾ ಬೌಮಿಕ್ ರಾಯ್ ನೇಪಾಳ ಪ್ರವಾಸ ಕೈಗೊಂಡಿದ್ದರು. ಟ್ರಾವೆಲ್ ಎಜೆನ್ಸಿ ಆಯೋಜಿಸಿದ ಈ ಯಾತ್ರೆಯಲ್ಲಿ 30 ಯಾತ್ರಿಕರು ಹಾಗೂ ಇಬ್ಬರು ಮಾರ್ಗದರ್ಶಿಗಳು ಸೇರಿದಂತೆ ಒಟ್ಟು 32 ಮಂದಿ ಇದ್ದರು. ಆಗಸ್ಟ್ 22 ರಂದು ನೇಪಾಳ ತಲುಪಿದ ಈ ಯಾತ್ರಿಕರ ಗುಂಪು, ಆಗಸ್ಟ್ 26ರ ಬೆಳಗ್ಗೆ ನೇಪಾಳ ಟಿಬೆಟ್ ಗಡಿ ಪ್ರದೇಶ ರಸುವಾಘಡಿ ತಲುಪಿದ್ದರು. ಬೆಳಗ್ಗೆ 8.30ರ ವೇಳೆ ಇಮಿಗ್ರೇಶನ್ ಪ್ರಕ್ರಿಯೆ ಪೂರೈಸಿದ್ದರು. ಬಳಿಕ ಈ ಗುಂಪಿನ ಯಾವ ಸದಸ್ಯರು ಸಂಪರ್ಕಕ್ಕೆ ಸಿಗುತ್ತಿಲ್ಲ.

ಶರ್ಮಿಷ್ಠ ಬೌಮಿಕ್ ರಾಯ್ ಇತರ ಯಾತ್ರಿಕರ ಜೊತೆ ಕೈಲಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದರು. ಈ ಸದಸ್ಯರ ಪೈಕಿ ಮುಕುಲ್ ರಾಯ್ ಇತರ ಕುಟುಂಬ ಸದಸ್ಯರು ಇರಲಿಲ್ಲ. ಇದೀಗ ತೀವ್ರ ಕಾರ್ಯಾಚರಣೆಗಳು ಆರಂಭಗೊಂಡಿದೆ. ನೇಪಾಳ ಟಿಬೇಟ್ ಗಡಿ , ಉತ್ತರ ನೇಪಾಳದಲ್ಲಿ ಭಾರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಯಾವ ಸುಳಿವು ಸಿಗುತ್ತಿಲ್ಲ.