ದೇಶದಾದ್ಯಂತ ಒಟ್ಟು 6 ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಸಿ ಶೋ ಆರಂಭವಾಗಿದೆ. ಆದರೆ, ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಹೋಗಿದ್ದ 22 ವರ್ಷದ ಯುವಕ ಕಾಲನ್ನೇ ಕಳೆದುಕೊಂಡು ಅಂಗವಿಕಲನಾಗಿದ್ದಾನೆ. ಈ ಕಾರ್ಯಕ್ರಮದಲ್ಲಿ ಸಂಭವಿಸಿದ ಭೀಕರ ದುರಂತದಿಂದ ಯುವಕ ಹೊರ ಬರಲಾಗದೇ ತನಗೆ 830 ಕೋಟಿ ರೂ. ಪರಿಹಾರ ಕೊಡುವಂತೆ ಕೋರ್ಟ್ ಮೆಟ್ಟಿಲೇರಿದ್ದಾನೆ.
ಸಾಹಸ ಮತ್ತು ಜನಪ್ರಿಯತೆಯ ಆಸೆಯಿಂದ ರಿಯಾಲಿಟಿ ಶೋಗೆ ಹೆಜ್ಜೆ ಇಟ್ಟಿದ್ದ 22 ವರ್ಷದ ತರುಣನೊಬ್ಬ, ಚಿತ್ರೀಕರಣ ತಂಡದ ಬೇಜವಾಬ್ದಾರಿಯಿಂದಾಗಿ ತನ್ನ ಕಾಲನ್ನೇ ಕಳೆದುಕೊಂಡು ಬದುಕುಪೂರ್ತಿ ನರಳುವಂತಾಗಿದೆ. ಜನಪ್ರಿಯ ‘ಸರ್ವೈವರ್ ಗ್ರೀಸ್’ (Survivor Greece) ಕಾರ್ಯಕ್ರಮದಲ್ಲಿ ಸಂಭವಿಸಿದ ಈ ಭೀಕರ ದುರಂತ ಇಡೀ ಜಾಗತಿಕ ಮನರಂಜನಾ ಲೋಕವನ್ನೇ ಬೆಚ್ಚಿಬೀಳಿಸಿದೆ. ಪ್ರಾಣಾಪಾಯದಿಂದ ಪಾರಾದರೂ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿರುವ ಯುವ ಸ್ಪರ್ಧಿ ಸ್ಟಾವ್ರೊಸ್ ಫ್ಲೋರೋಸ್ (Stavros Floros), ಈಗ ಶೋ ನಿರ್ಮಾಪಕರ ವಿರುದ್ಧ ಸುಮಾರು 100 ಮಿಲಿಯನ್ ಡಾಲರ್ (ಅಂದಾಜು ₹830 ಕೋಟಿ ರೂ.) ಬೃಹತ್ ಮೊತ್ತದ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಸಮುದ್ರದಲ್ಲಿ ನಡೆದಿದ್ದೇನು?
ಡೊಮಿನಿಕನ್ ಕರಾವಳಿಯ ತೆರೆದ ಸಮುದ್ರದಲ್ಲಿ ಈ ರಿಯಾಲಿಟಿ ಶೋನ ಚಿತ್ರೀಕರಣ ನಡೆಯುತ್ತಿತ್ತು. ನಿಯಮದ ಪ್ರಕಾರ ಬದುಕುಳಿಯಲು ಬೇಕಾದ ಆಹಾರಕ್ಕಾಗಿ ಸ್ಪರ್ಧಿಗಳು ಸಮುದ್ರದಲ್ಲಿ ಈಜಿ ಮೀನು ಹಿಡಿಯಬೇಕಿತ್ತು. ಸ್ಪರ್ಧಿ ಸ್ಟಾವ್ರೊಸ್ ಫ್ಲೋರೋಸ್ ನೀರಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ, ವೇಗವಾಗಿ ಬಂದ ಪ್ರವಾಸಿ ದೋಣಿಯೊಂದು (Tourist Boat) ಅವರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ದೋಣಿಯ ಚಾಲಕನ ನಿಯಂತ್ರಣದಲ್ಲಿದ್ದ ಪ್ರೊಪೆಲ್ಲರ್ (ಫ್ಯಾನ್ ಬ್ಲೇಡ್) ನೇರವಾಗಿ ಅವರ ಕಾಲುಗಳಿಗೆ ತಗುಲಿದೆ. ಪರಿಣಾಮ, ಅವರ ಬಲಗಾಲು ಜಜ್ಜುಜಜ್ಜಾಗಿದ್ದು, ಎಡಗಾಲನ್ನು ಮೊಣಕಾಲಿನಿಂದ ಕೆಳಗೆ ತಕ್ಷಣವೇ ಕತ್ತರಿಸಬೇಕಾಗಿ ಬಂತು.
ಜೀವ ಉಳಿಸಿದ ಸಮಯಪ್ರಜ್ಞೆ, 61 ದಿನಗಳ ನರಕಯಾತನೆ!
ಅದೃಷ್ಟವಶಾತ್, ಆ ದೋಣಿಯಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ತಕ್ಷಣವೇ ರಕ್ತಸ್ರಾವ ತಡೆಯಲು ತುರ್ತು ಬ್ಯಾಂಡೇಜ್ (ಟೂರ್ನಿಕೆಟ್) ಕಟ್ಟಿ ರಕ್ತ ನಿಲ್ಲುವಂತೆ ಮಾಡಿದ್ದಾರೆ. ಇದರಿಂದಾಗಿ ತೀವ್ರ ರಕ್ತಸ್ರಾವದಿಂದ ಸಂಭವಿಸಬಹುದಾಗಿದ್ದ ಸಾವು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಕೂಡಲೇ ಅವರನ್ನು ಏರ್‌ಲಿಫ್ಟ್ ಮೂಲಕ ಅಮೆರಿಕದ ಫ್ಲೋರಿಡಾ ರಾಜ್ಯದ ಮಿಯಾಮಿ ಆಸ್ಪತ್ರೆಗೆ ದಾಖಲಿಸಲಾಯಿತು. ಬರೋಬ್ಬರಿ 61 ದಿನಗಳ ಕಾಲ ಐಸಿಯು ಮತ್ತು ಆಸ್ಪತ್ರೆಯಲ್ಲಿದ್ದ ಅವರಿಗೆ ಸಾಲು ಸಾಲು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು.
ಭದ್ರತೆ ಇಲ್ಲ, ರಕ್ಷಣಾ ದೋಣಿಗಳಿಲ್ಲ: ನಿರ್ಮಾಪಕರ ವಿರುದ್ಧ ಕಿಡಿ
ಫ್ಲೋರಿಡಾ ನ್ಯಾಯಾಲಯದಲ್ಲಿ ಹೂಡಲಾದ ದೂರಿನಲ್ಲಿ, ಕಾರ್ಯಕ್ರಮ ನಿರ್ಮಾಣ ಸಂಸ್ಥೆಯಾದ ಟರ್ಕಿಯ ‘ಅಕುನ್‌ಮೆಡಿಯಾ’ (Acun Medya) ಮತ್ತು ಗ್ರೀಕ್‌ನ ‘ಸ್ಕೈ ಟಿವಿ’ (Skai TV) ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಆ ಸಮುದ್ರ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಬೋಟ್‌ಗಳ ಸಂಚಾರವಿರುತ್ತದೆ ಎಂದು ತಿಳಿದಿದ್ದರೂ ಯಾವುದೇ ಎಚ್ಚರಿಕಾ ಬ್ಯಾರಿಕೇಡ್‌ಗಳು ಅಥವಾ ಸಿಗ್ನಲ್‌ಗಳನ್ನು ಹಾಕಿರಲಿಲ್ಲ. ಸ್ಪರ್ಧಿಗಳು ಈಜುವಾಗ ಅವರ ರಕ್ಷಣೆಗೆ ಯಾವುದೇ ವಾಚ್‌ಮ್ಯಾನ್ (ಸ್ಪಾಟರ್) ಅಥವಾ ಮುನ್ನೆಚ್ಚರಿಕಾ ದೋಣಿಗಳನ್ನು ನಿಯೋಜಿಸಿರಲಿಲ್ಲ. ಟಿಆರ್‌ಪಿ (TRP) ಮತ್ತು ಶೋನ ರೋಮಾಂಚನ ಹೆಚ್ಚಿಸಲು ಸ್ಪರ್ಧಿಗಳನ್ನು ಯಾವುದೇ ಭದ್ರತೆ ಇಲ್ಲದೆ ಸಾವಿನ ದವಡೆಗೆ ತಳ್ಳಲಾಗಿತ್ತು ಎಂದು ದೂರಿನಲ್ಲಿ ವಾದಿಸಲಾಗಿದೆ.
ನಾನು ಜೀವಂತವಾಗಿದ್ದರೂ ನಿಧಾನವಾಗಿ ಸಾಯುತ್ತಿದ್ದೇನೆ...
ದುರಂತದ ಕುರಿತು ಕಣ್ಣೀರಿಟ್ಟ ಸಂತ್ರಸ್ತ ಯುವಕ ಫ್ಲೋರೋಸ್, 'ನಾನು 22 ವರ್ಷದ ಸದೃಢ, ಆರೋಗ್ಯವಂತ ಯುವಕನಾಗಿ ಈ ಶೋಗೆ ಪ್ರವೇಶಿಸಿದ್ದೆ. ಆದರೆ ಕೇವಲ ನಿರ್ಮಾಪಕರ ಬೇಜವಾಬ್ದಾರಿಯಿಂದ ಕಾಲು ಕಳೆದುಕೊಂಡು ಅಂಗವಿಕಲನಾಗಿ ಹೊರಬಂದಿದ್ದೇನೆ. ದುರಂತ ನಡೆದ ಬಳಿಕ ಆ ತಂಡ ನನ್ನನ್ನು ಕಡೆಗಣಿಸಿತು. ದಿನ ಕಳೆದಂತೆ ನಾನು ಬದುಕಿದ್ದರೂ ನಿಧಾನವಾಗಿ ಸಾಯುತ್ತಿರುವಂತೆ ಭಾಸವಾಗುತ್ತಿದೆ. ನನಗೆ ಈ ಅನ್ಯಾಯಕ್ಕೆ ನ್ಯಾಯ ಬೇಕು' ಎಂದು ಅಳಲು ತೋಡಿಕೊಂಡಿದ್ದಾರೆ.
ರಿಯಾಲಿಟಿ ಶೋಗಳ ಹೆಸರಿನಲ್ಲಿ ಸ್ಪರ್ಧಿಗಳ ಜೀವದೊಂದಿಗೆ ಚೆಲ್ಲಾಟವಾಡುವ ನಿರ್ಮಾಣ ಸಂಸ್ಥೆಗಳ ಅಮಾನವೀಯ ಧೋರಣೆಗೆ ಈ ಪ್ರಕರಣ ಹಿಡಿದ ಕೈಗನ್ನಡಿಯಾಗಿದ್ದು, ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ.


