ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಶತಮಾನಕ್ಕೂ ಹಳೆಯದಾದ ಹಿಂದೂ ದೇಗುಲವನ್ನು ಧ್ವಂಸಗೊಳಿಸಲಾಗಿದೆ. ದೇಗುಲದ ಜಾಗವನ್ನು ಪಕ್ಕದ ಮದರಸಾಕ್ಕೆ ಸೇರಿಸುವ ಉದ್ದೇಶದಿಂದ ಮತಾಂಧರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಸರ್ಕಾರವು ಮಳೆಯಿಂದಾಗಿ ನಾಶವಾಗಿದೆ ಎಂದು ಹೇಳಿದೆ.

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿನ ಶತಮಾನಕ್ಕೂ ಹಳೆಯದಾದ ಹಿಂದೂ ದೇಗುಲವೊಂದನ್ನು ಮತಾಂಧರು ಧ್ವಂಸಗೊಳಿಸಿದ್ದಾರೆ. ದೇವಸ್ಥಾನದ ಜಾಗವನ್ನು ಪಕ್ಕದ ಮದರಸಾಕ್ಕೆ ಸೇರಿಸುವ ಉದ್ದೇಶದಿಂದ ಈ ದುಷ್ಕೃತ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸುಮಾರು 1,000 ಚ. ಮೀ. ಭೂಮಿಯಲ್ಲಿ ನೆಲೆಗೊಂಡಿದ್ದ ಈ 100-125 ವರ್ಷಗಳಷ್ಟು ಹಳೆಯ ದೇವಾಲಯವು, ಲಾಹೋರ್‌ನಿಂದ ಸುಮಾರು 130 ಕಿ.ಮೀ. ದೂರದಲ್ಲಿರುವ ನರೋವಾಲ್‌ನ ಸಿರಾಜ್ ಗ್ರಾಮದಲ್ಲಿತ್ತು. ನಿಷೇಧಿತ ತೀವ್ರಗಾಮಿ ಇಸ್ಲಾಮಿಕ್ ಪಕ್ಷ ‘ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ’ಕ್ಕೆ ಸೇರಿದವರು ಆ.21ರಂದು ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ. ದೇಗುಲದ ಜಾಗವನ್ನು ಪಕ್ಕದ ಮದರಸಾಕ್ಕೆ ಸೇರಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಧಾರಾಕಾರ ಮಳೆಯಿಂದಾಗಿ ಅದು ನಾಶವಾಗಿದೆ ಎಂದು ಸರ್ಕಾರ ಹೇಳಿಕೆ ನೀಡಿದೆ.

ಏರಿಂಡಿಯಾ ವಿಮಾನದ ಟಿಶ್ಯೂ ಪೇಪರಲ್ಲಿ ಬಾಂಬ್‌ ಬೆದರಿಕೆ ಸಂದೇಶ

ಸೌದಿ ಅರೇಬಿಯಾದ ದಮ್ಮಾಮ್‌ನಿಂದ 32 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಬಾಂಬ್‌ ಇರುವ ಬೆದರಿಕೆ ಇದ್ದ ಟಿಶ್ಯೂ ಪೇಪರ್‌ ಪತ್ತೆಯಾದ ಬೆನ್ನಲ್ಲೇ ಅದನ್ನು ಸೋಮವಾರ ಸಂಜೆ ಗುಜರಾತ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ.

‘ಬಾಂಬ್‌’ ಎಂದಷ್ಟೇ ಬರೆದಿದ್ದ ಟಿಶ್ಯೂ ಪೇಪರ್‌ ಪತ್ತೆಯಾಗುತ್ತಿದ್ದಂತೆ, ಪೈಲಟ್‌ ದೆಹಲಿಗೆ ಹೋಗಬೇಕಾದ ವಿಮಾನವನ್ನು ಅಹಮದಾಬಾದ್‌ನತ್ತ ತಿರುಗಿಸಿದರು. ಅಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.