ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ವೇಳೆ, ಇಮ್ರಾನ್ ಖಾನ್ ಮಕ್ಕಳ ಸಂದರ್ಶನ ಪ್ರಸಾರ ಮಾಡಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಪಂದ್ಯ ಬಹಿಷ್ಕಾರದ ಬೆದರಿಕೆ ಹಾಕಿತ್ತು. ಆದರೆ, ಸ್ಕೈ ಸ್ಪೋರ್ಟ್ಸ್ ಸಂದರ್ಶನವನ್ನು ಪ್ರಸಾರ ಮಾಡಿಯೇ ಬಿಟ್ಟಿತು, ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ಮಧ್ಯಪ್ರವೇಶದ ನಂತರ ಪಂದ್ಯ ಮುಂದುವರೆಯಿತು.

ಲಂಡನ್: ಪಾಕಿಸ್ತಾನ ಕ್ರಿಕೆಟ್‌ನಲ್ಲಿ ರಾಜಕೀಯ ಬೆರೆಸಬೇಡಿ ಅಂತ ಹೇಳೋದು ವ್ಯರ್ಥ. ಯಾಕಂದ್ರೆ ಅಲ್ಲಿ ಎರಡೂ ಒಂದೇ. ಈಗ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿ ವೇಳೆ ನಡೆದ ಒಂದು ಘಟನೆ ಇದಕ್ಕೆ ಮತ್ತೊಂದು ಸಾಕ್ಷಿ ಒದಗಿಸಿದೆ.

ಲಾರ್ಡ್ಸ್‌ನಲ್ಲಿ ನಡೆಯುತ್ತಿದ್ದ ಎರಡನೇ ಟೆಸ್ಟ್‌ನ ಮೊದಲ ದಿನ, ಲಂಚ್ ಬ್ರೇಕ್ ವೇಳೆ ಈ ಹೈಡ್ರಾಮಾ ನಡೆದಿದೆ. ಪಾಕ್ ಮಾಜಿ ನಾಯಕ ಇಮ್ರಾನ್ ಖಾನ್ ಮಕ್ಕಳ ಸಂದರ್ಶನವನ್ನು ಪ್ರಸಾರ ಮಾಡಬಾರದು ಅಂತ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಬ್ರಾಡ್‌ಕಾಸ್ಟರ್ ಆದ ಸ್ಕೈ ಸ್ಪೋರ್ಟ್ಸ್‌ಗೆ ತಾಕೀತು ಮಾಡಿತ್ತು. ಒಂದು ವೇಳೆ ನಮ್ಮ ಮಾತು ಕೇಳದಿದ್ದರೆ, ಪಂದ್ಯವನ್ನೇ ಬಹಿಷ್ಕರಿಸುವುದಾಗಿ ಪಾಕ್ ಬೆದರಿಕೆ ಹಾಕಿತ್ತು. ಆದರೆ, ಸ್ಕೈ ಸ್ಪೋರ್ಟ್ಸ್ ಈ ಬೆದರಿಕೆಗೆ ಕ್ಯಾರೇ ಅನ್ನಲಿಲ್ಲ, ಸಂದರ್ಶನವನ್ನು ಪ್ರಸಾರ ಮಾಡಿಯೇ ಬಿಟ್ಟಿತು. ಇದರಿಂದ ಕೆರಳಿದ ಪಿಸಿಬಿ, ಲಂಚ್ ನಂತರ ಆಟಗಾರರು ಮೈದಾನಕ್ಕೆ ಇಳಿಯಬಾರದು ಎಂದು ಸೂಚನೆ ನೀಡಿತು. ಇದಾದ ಸ್ವಲ್ಪ ಹೊತ್ತಿನ ನಂತರ ಕೊನೆಗೂ ಪಾಕಿಸ್ತಾನ ಆಟಗಾರರು ಮೈದಾನಕ್ಕಿಳಿದರು

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ಅಥರ್ಟನ್ ಈ 18 ನಿಮಿಷಗಳ ಸಂದರ್ಶನವನ್ನು ನಡೆಸಿಕೊಟ್ಟಿದ್ದರು. ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿ ಪಾಕ್ ಪ್ರಧಾನಿಗೆ ಪತ್ರ ಬರೆದಿದ್ದ 21 ಮಾಜಿ ನಾಯಕರಲ್ಲಿ ಅಥರ್ಟನ್ ಕೂಡ ಒಬ್ಬರು. ಇಮ್ರಾನ್ ಖಾನ್ 2023ರ ಆಗಸ್ಟ್‌ನಿಂದ ಜೈಲಿನಲ್ಲಿದ್ದಾರೆ.

ಕ್ರೀಡೆಯಲ್ಲೂ ರಾಜಕೀಯ ತಂಡ ಪಾಕಿಸ್ತಾನ ಕ್ರಿಕೆಟ್ ಬೋರ್ಡ್

ಟೆಸ್ಟ್ ಪಂದ್ಯದ ವೇಳೆ ಇಮ್ರಾನ್ ಖಾನ್ ಮಕ್ಕಳಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುವುದನ್ನು ಪಿಸಿಬಿ ರಾಜಕೀಯ ದೃಷ್ಟಿಯಿಂದ ನೋಡುತ್ತಿದೆ. ಹೀಗಾಗಿ, ಪಂದ್ಯವನ್ನು ನಿಲ್ಲಿಸುವಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಪಿಸಿಬಿ ಮುಂದಾಗಿತ್ತು ಎಂದು ಕ್ರಿಕ್‌ಇನ್ಫೋ ಮತ್ತು ದಿ ಗಾರ್ಡಿಯನ್‌ನಂತಹ ಮಾಧ್ಯಮಗಳು ವರದಿ ಮಾಡಿವೆ. ಟಿವಿಯಲ್ಲಿ ಸಂದರ್ಶನ ಬಂದರೆ ಪಾಕಿಸ್ತಾನ ಕ್ರಿಕೆಟ್ ತಂಡ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಬೋರ್ಡ್ ಖಡಕ್ ನಿಲುವು ತಳೆದಿತ್ತು. ಪಿಸಿಬಿ ಬೆದರಿಕೆ ನಡುವೆಯೂ ಸಂದರ್ಶನ ಪ್ರಸಾರವಾಯಿತು. ಕೊನೆಗೆ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ಮಧ್ಯಪ್ರವೇಶಿಸಿದ ನಂತರ ಪಾಕಿಸ್ತಾನ ತಂಡ ಲಂಚ್ ನಂತರದ ಸೆಷನ್‌ಗೆ ಮೈದಾನಕ್ಕಿಳಿಯಲು ಒಪ್ಪಿಕೊಂಡಿತು.

ಸಂದರ್ಶನದಲ್ಲಿ, ಜೈಲಿನಲ್ಲಿರುವ ತಮ್ಮ ತಂದೆಯ ಸ್ಥಿತಿಯ ಬಗ್ಗೆ ಇಮ್ರಾನ್ ಮಕ್ಕಳಾದ ಸುಲೈಮಾನ್ ಮತ್ತು ಕಾಸಿಮ್ ಖಾನ್ ಆತಂಕ ವ್ಯಕ್ತಪಡಿಸಿದರು. 'ಅವರು ಏನು ಮಾಡುತ್ತಿದ್ದಾರೆಂದು ಸ್ಪಷ್ಟವಾಗಿಲ್ಲ, ಜೈಲಿನಲ್ಲಿಯೇ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಸಾಧ್ಯವಾದಷ್ಟು ಕಾಲ ಅವರನ್ನು ಜೈಲಿನಲ್ಲಿಟ್ಟು, ಮೌನವಾಗಿಸಲು ನೋಡುತ್ತಿದ್ದಾರೆ' ಎಂದು ಕಾಸಿಮ್ ಖಾನ್ ಸಂದರ್ಶನದಲ್ಲಿ ಹೇಳಿದರು.

ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಸ್ಥಿತಿ ಬಗ್ಗೆ ವಿಶ್ವ ಕ್ರಿಕೆಟ್‌ನ ಮಾಜಿ ನಾಯಕರು ಪಾಕ್ ಪ್ರಧಾನಿಗೆ ಎರಡು ಬಾರಿ ಪತ್ರ ಬರೆದಿದ್ದರು. ಫೆಬ್ರವರಿಯಲ್ಲಿ ಮೊದಲ ಪತ್ರ ಬರೆದಾಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಇತ್ತೀಚೆಗೆ ಇಮ್ರಾನ್ ಅವರನ್ನು ವೈದ್ಯಕೀಯ ತಪಾಸಣೆ ನಂತರ ಮತ್ತೆ ಅಡಿಯಾಲಾ ಜೈಲಿಗೆ ಕರೆದೊಯ್ದಾಗ, ಈ ವಾರ ಎರಡನೇ ಪತ್ರವನ್ನು ಕಳುಹಿಸಲಾಗಿತ್ತು.

ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಕ್ರಿಕೆಟ್ ದಂತಕಥೆ ಇಮ್ರಾನ್ ಖಾನ್, 2022ರ ಏಪ್ರಿಲ್‌ನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರ ಕಳೆದುಕೊಂಡಿದ್ದರು. ಭ್ರಷ್ಟಾಚಾರ, ಅಧಿಕೃತ ರಹಸ್ಯಗಳನ್ನು ಸೋರಿಕೆ ಮಾಡಿದಂತಹ ಹಲವು ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ, 2023ರ ಆಗಸ್ಟ್‌ನಿಂದ ಅವರನ್ನು ಜೈಲಿನಲ್ಲಿಡಲಾಗಿದೆ. ಜೈಲಿನಲ್ಲಿನ ಕಠಿಣ ಏಕಾಂತ ವಾಸದಿಂದ ಅವರ ಆರೋಗ್ಯ ಹದಗೆಟ್ಟಿದೆ. ಅವರ ಬಲಗಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೋಗಿದೆ ಎಂದು ಅವರ ವಕೀಲರು ಆರೋಪಿಸಿದ್ದರು.

ಲಾರ್ಡ್ಸ್‌ ಟೆಸ್ಟ್‌ನಲ್ಲಿ ಪಾಕಿಸ್ತಾನ ಉತ್ತಮ ಆರಂಭ

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನವೇ ದಿಟ್ಟ ಆರಂಭ ಪಡೆದಿದೆ. ಮೊದಲ ದಿನದಾಟದಂತ್ಯಕ್ಕೆ ಪಾಕಿಸ್ತಾನ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 9 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿದೆ. ಇಂಗ್ಲೆಂಡ್ ಪರ ಜೇಮಿ ಸ್ಮಿತ್ 61 ಹಾಗೂ ಜೋರ್ಡನ್ ಕಾಕ್ಸ್ ಆಕರ್ಷಕ 55 ರನ್ ಬಾರಿಸಿದರೆ, ಪಾಕಿಸ್ತಾನ ಪರ ಮೊಹಮ್ಮದ್ ಅಬ್ಬಾಸ್ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.