ಭಾರತದಲ್ಲಿ ಪ್ರತಿ 90 ನಿಮಿಷಕ್ಕೆ ಒಂದರಂತೆ ವರದಕ್ಷಿಣೆ ಸಾವು ಸಂಭವಿಸುತ್ತಿದ್ದು, ನಟಿ ತ್ವಿಷಾ ಶರ್ಮಾ ಪ್ರಕರಣವು ಈ ಕರಾಳ ಸತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ದೌರ್ಜನ್ಯ ಸಹಿಸಿಕೊಳ್ಳುವ ಬದಲು ವಿಚ್ಛೇದನ ಪಡೆಯುವುದು ಉತ್ತಮವೇ ಎಂಬ ಬಗ್ಗೆ ನ್ಯಾಯಾಲಯಗಳು ಮತ್ತು ಸಮಾಜದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಈ ಲೇಖನ ವಿಶ್ಲೇಷಿಸುತ್ತದೆ.
ಭಾರತದಲ್ಲಿ ಇಂದಿಗೂ ಪ್ರತಿ 90 ನಿಮಿಷಕ್ಕೆ ಒಂದರಂತೆ ವರದಕ್ಷಿಣೆ ಸಾವು ನಡೆಯುತ್ತಿದೆ ಎಂದು ಈಚೆಗೆ ಬಂದಿರುವ ಅಂಕಿ ಅಂಶ ಹೇಳುತ್ತದೆ. ಎಷ್ಟೋಕೇಸ್ಗಳಲ್ಲಿ ಸಾಕ್ಷ್ಯಾಧಾರಗಳೇ ಇಲ್ಲದೇ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ ಕೇಸ್ಗಳನ್ನು ಹೆಣ್ಣುಮಕ್ಕಳು ಎಷ್ಟು ದುರುಪಯೋಗ ಮಾಡಿಕೊಂಡು ಗಂಡನ ಮನೆಯವರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆಯೋ ಅದಕ್ಕಿಂತಲೂ ಹೆಚ್ಚು ಘಟನೆಗಳಲ್ಲಿ ವರದಕ್ಷಿಣೆಗಾಗಿ ಆಕೆಯ ಕೊ*ಲೆ ಆಗುತ್ತಿದೆ. ಕೆಲವೊಂದು ಹೈಪ್ರೊಫೈಲ್ ಕೇಸ್ಗಳಾದರೆ ಅದು ರಾತ್ರೋರಾತ್ರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ದೇಶಾದ್ಯಂತ ಚರ್ಚೆಯಾದರೆ, ಇನ್ನೆಷ್ಟೋ ಕೇಸ್ಗಳಲ್ಲಿ ಕೊನೆಯ ಪಕ್ಷ ಆ ಹೆಣ್ಣಿನ ಸಾವಿಗೆ ಕಾರಣವಾದ ಕ್ರೂರಿಗಳಿಗೆ ಶಿಕ್ಷೆಯೂ ಆಗದೇ ಹೋಗುವುದು ದೊಡ್ಡ ದುರಂತ.

ತ್ವಿಷಾ ಶರ್ಮಾ ಕೇಸ್
ಇದೀಗ, ನಟಿ, ಮಾಡೆಲ್, ಮಿಸ್ ಪುಣೆ ತ್ವಿಷಾ ಶರ್ಮಾ ಕೇಸ್ನಿಂದ ಈ ವಿಷಯಗಳನ್ನು ಬಹುತೇಕ ಕೋರ್ಟ್ಗಳು ಕೂಡ ಚರ್ಚೆ ಮಾಡುತ್ತಿವೆ. ಮದುವೆಯಾಗಿ ಐದೇ ತಿಂಗಳಿಗೆ ಕೊ*ಲೆಯಾಗಿರುವ ತ್ವಿಷಾ ಶರ್ಮಾಳ ಅಪರಾಧಿಗಳಾದ ಮಾಜಿ ನ್ಯಾಯಾಧೀಶೆ ಅತ್ತೆ ಕೂಡ ತಪ್ಪಿಸಿಕೊಳ್ಳಲು ಎಲ್ಲಾಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ಆಕೆಯನ್ನು ಇನ್ನೂ ಅರೆಸ್ಟ್ ಮಾಡಿಲ್ಲ ಎಂದು ಜೋರಾಗಿ ಪ್ರತಿಭಟನೆಗಳೂ ನಡೆಯುತ್ತಿವೆ. ಈ ಘಟನೆಯಿಂದಾಗಿ ಇದೀಗ ಬಹುತೇಕ ಕೋರ್ಟ್ಗಳಲ್ಲಿಯೂ ನ್ಯಾಯಾಧೀಶರು ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದಾರೆ.
ಅಷ್ಟಕ್ಕೂ ತ್ವಿಷಾ ಶರ್ಮಾ ಕೇಸ್ನಲ್ಲಿ ಆಕೆ ಕಿರುಕುಳ ಸಹಿಸಲಾಗದೇ ವಾಪಸ್ ತವರಿಗೆ ಬರುವುದಾಗಿ ಹೇಳಿದ್ದಳು. ಅದರಂತೆ ಸಿದ್ಧತೆ ಕೂಡ ಮಾಡಿಕೊಂಡಿದ್ದಳು. ಅಷ್ಟರಲ್ಲಿಯೇ ಹೆಣವಾದಳು. ಆದರೆ ಅದೆಷ್ಟು ಮನೆಗಳಲ್ಲಿ ಹೆಣ್ಣನ್ನು ತವರಿನವರು ವಾಪಸ್ ಕರೆಸಿಕೊಳ್ಳುತ್ತಾರೆ ಹೇಳಿ. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ, ಗಂಡನ ಮನೆಯೇ ಅವಳಿಗೆ ಎಲ್ಲವೂ. ಏನಾದರೂ ಅಡ್ಜಸ್ಟ್ ಮಾಡಿಕೊಳ್ಳಿ ಎನ್ನುವ ಕುಟುಂಬಗಳೇ ಹಲವು. ಏಕೆಂದರೆ, ಅವರಿಗೆ ಮಗಳು ವಾಪಸ್ ಬಂದರೆ ಸಮಾಜ ಏನು ಹೇಳುತ್ತದೆ ಎನ್ನುವ ಭಯ. ಅಷ್ಟಕ್ಕೂ ಡಿವೋರ್ಸ್ ಆಗಿ ಬಂದವರನ್ನು ನೋಡಿದಾಗ ಕುಹಕ ಆಡುವವರು ಕಡಿಮೆಯೆ, ಅದರಲ್ಲಿಯೂ ಹೆಂಗಸರೇ ಇದರಲ್ಲಿ ಒಂದುಕೈ ಮುಂದೆ ಎನ್ನಬಹುದು. ಅದಕ್ಕಾಗಿಯೇ ಹೆಣ್ಣು ಏನೇ ಆದರೂ ತವರು ಮನೆಯಲ್ಲಿ ಹೇಳುವುದೇ ಇಲ್ಲ, ಹೇಳಿದರೂ ಸಹಿಸಿಕೊಂಡು ಹೋಗು ಎನ್ನುವ ಉತ್ತರ. ಹೆಣ್ಣಿನ ಹುಟ್ಟು ತವರಿನಲ್ಲಿ ಆಕೆಯ ಶವ ಬರಬೇಕಾದದ್ದು ಗಂಡನ ಮನೆಯಿಂದ ಎನ್ನುವ ಮಾತಿದೆ. ಈಗಲೂ ಹಾಗೆಯೇ ಆಗುತ್ತಿದೆ.
ಡಿವೋರ್ಸ್ ಮಗಳು ಬೇಕಾ...?
ಇದರ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬಂದಾಗ ಸಾಲಿಸಿಟರಲ್ ಜನರ್ ಎಸ್.ಜಿ.ಮೆಹ್ತಾ ಅವರು ಡಿವೋರ್ಸ್ ಆಗಿರೋ ಮಗಳು ಬೇಕಾ, ಅಥವಾ ಅವಳ ಹೆಣ ಬೇಕಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಹೆಣಕ್ಕಿಂತಲೂ ಡಿವೋರ್ಸ್ ಒಳ್ಳೆಯದು ಎಂದು ಹೇಳಿದ್ದಾರೆ. ಅದೇ ರೀತಿ ಕರ್ನಾಟಕ ಹೈಕೋರ್ಟ್ನಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಬಗೆಗಿನ ವಿಚಾರಣೆ ವೇಳೆ, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಹೆಣ್ಣುಮಕ್ಕಳು ತಮಗೆ ತೊಂದರೆ ಆಗುತ್ತಿದೆ ಎಂದ ತಕ್ಷಣವೇ ಕಂಪ್ಲೇಂಟ್ ಕೊಡುವುದಿಲ್ಲ. ಗೋಡೆಗೆ ಹೋಗಿ ಅವರನ್ನು ಗುದ್ದುವವರೆಗೂ ಸಹಿಸಿಕೊಂಡು ಇರುತ್ತಾರೆ. ಹೀಗೆ ಏಕೆ ಸಹಿಸಿಕೊಳ್ಳಬೇಕು, ಹೆಣ್ಣುಮಕ್ಕಳು ಹೀಗೆಲ್ಲಾ ಮಾಡಬಾರದು ಎಂದಿದ್ದಾರೆ. ಪ್ರತಿ ಬಾರಿಯೂ ಅಡ್ಜಸ್ಟ್ ಮಾಡಿಕೊಂಡು ಹೋಗೋಣ ಎಂದುಕೊಳ್ಳುವುದು ತಪ್ಪು ಎಂದಿದ್ದಾರೆ.


