ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕುಟುಂಬದಲ್ಲಿ 7 ಮಂದಿ ಉನ್ನತ ಅಧಿಕಾರಿಗಳಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಕುರಿತು ರಾಜಕೀಯ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಐಎಎಸ್ ಅಧಿಕಾರಿಗಳ ಸಂಘವು ವೈಯಕ್ತಿಕ ನಿಂದನೆಯನ್ನು ಕಟುವಾಗಿ ಖಂಡಿಸಿದೆ.

ನವದೆಹಲಿ:ಭಾರತದ ಮುಖ್ಯ ಚುನಾವಣಾ ಆಯುಕ್ತರಾದ (CEC) ಜ್ಞಾನೇಶ್ ಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ತೀವ್ರ ರಾಜಕೀಯ ಮತ್ತು ಮಾಧ್ಯಮಗಳ ಗಮನ ಸೆಳೆದಿದ್ದಾರೆ. ಚುನಾವಣಾ ಆಯೋಗದ ಒಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಗಳ ಬೆನ್ನಲ್ಲೇ, ಅವರ ವೈಯಕ್ತಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಒಳಗೊಂಡ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಇಡೀ ಕುಟುಂಬವೇ ದೇಶದ ಅತ್ಯುನ್ನತ ನಾಗರಿಕ ಸೇವೆಗಳಲ್ಲಿ (Civil Services) ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಈ ಅಪರೂಪದ "ಬ್ಯೂರೋಕ್ರಸಿ ಫ್ಯಾಮಿಲಿ ಟ್ರೀ" ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಒಂದೇ ಕುಟುಂಬದಲ್ಲಿ 7 ಸೂಪರ್ ಆಫೀಸರ್ಸ್!

1988ರ ಬ್ಯಾಚ್‌ನ ಕೇರಳ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್ ಅವರು ಐಐಟಿ ಕಾನ್ಪುರ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಅವರ ಕುಟುಂಬದಲ್ಲಿ ಬರೋಬ್ಬರಿ ನಾಲ್ಕು ಐಎಎಸ್ (IAS), ಇಬ್ಬರು ಐಆರ್‌ಎಸ್ (IRS) ಹಾಗೂ ಒಬ್ಬರು ಐಪಿಎಸ್ (IPS) ಅಧಿಕಾರಿಗಳಿದ್ದಾರೆ. ಇವರ ಹಿರಿಯ ಮಗಳಾದ ಮೇಧಾ ರೂಪಮ್ (IAS) ಪ್ರಸ್ತುತ ಗೌತಮ್ ಬುದ್ಧ ನಗರ (ನೋಯ್ಡಾ) ಜಿಲ್ಲಾಧಿಕಾರಿಯಾಗಿದ್ದರೆ (DM), ಇವರ ಪತಿ ಮನೀಶ್ ಬನ್ಸಾಲ್ (IAS) ಸಹಾರನ್‌ಪುರದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಇವರ ಎರಡನೇ ಮಗಳಾದ ಅಭಿಶ್ರೀ (IRS) ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕಿಯಾಗಿದ್ದು, ಇವರ ಪತಿ ಅಕ್ಷಯ್ ಲಾಬ್ರೂ (IAS) ಶ್ರೀನಗರದ ಜಿಲ್ಲಾಧಿಕಾರಿಯಾಗಿದ್ದಾರೆ. ಇಷ್ಟೇ ಅಲ್ಲದೆ, ಜ್ಞಾನೇಶ್ ಕುಮಾರ್ ಅವರ ಸಹೋದರ ಮನೀಶ್ ಕುಮಾರ್ (IRS) ಮತ್ತು ಬಾವ ಉಪೇಂದ್ರ ಜೈನ್ (IPS) ಆಗಿ ದೇಶದ ವಿವಿಧೆಡೆ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.

ವೈರಲ್ ಪೋಸ್ಟರ್ ಮತ್ತು ಅಸಲೀಯತೆ!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರದಲ್ಲಿ, "ಆಡಳಿತಾತ್ಮಕ ಸೇವೆಗಳಲ್ಲಿ ಪತಿ ಮತ್ತು ಪತ್ನಿ ಇಬ್ಬರಿಗೂ ಒಂದೇ ರಾಜ್ಯದಲ್ಲಿ ಪೋಸ್ಟಿಂಗ್ ಸಿಗುವ ಅವಕಾಶ ಶೇಕಡಾ 1ಕ್ಕಿಂತ ಕಡಿಮೆ ಇರುತ್ತದೆ, ಆದರೆ ಈ ಅಪರೂಪದ ವಿದ್ಯಮಾನ ಜ್ಞಾನೇಶ್ ಕುಮಾರ್ ಅವರ ಇಬ್ಬರು ಹೆಣ್ಣುಮಕ್ಕಳ ವಿಷಯದಲ್ಲಿ ನಡೆದಿದೆ" ಎಂದು ಪ್ರತಿಪಾದಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ನಿಯಮಗಳನ್ನು ಗಮನಿಸಿದರೆ, ನಾಗರಿಕ ಸೇವೆಗಳಲ್ಲಿ (Civil Services) ನಿಯಮಾವಳಿಗಳ ಪ್ರಕಾರ ವಿವಾಹಿತ ಐಎಎಸ್/ಐಪಿಎಸ್ ದಂಪತಿಗಳು ಒಂದೇ ರಾಜ್ಯದ ಕೇಡರ್‌ನಲ್ಲಿ ಕೆಲಸ ಮಾಡಲು ವಿಶೇಷ ಅವಕಾಶವಿರುತ್ತದೆ. ಈ ನಿಯಮದ ಅಡಿಯಲ್ಲೇ ಅವರ ಹೆಣ್ಣುಮಕ್ಕಳು ಹಾಗೂ ಅಳಿಯಂದಿರು ಕ್ರಮವಾಗಿ ಉತ್ತರ ಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.

ರಾಜಕೀಯ ಟೀಕೆ ಹಾಗೂ ಐಎಎಸ್ ಅಧಿಕಾರಿಗಳ ಸಂಘದ ಆಕ್ಷೇಪ!

ಇತ್ತೀಚೆಗೆ ಚುನಾವಣಾ ಆಯೋಗದ ನಿರ್ಧಾರಗಳ ಕುರಿತು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಈ ಕೌಟುಂಬಿಕ ವಿವರಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳನ್ನು ಮಾಡಲಾಗಿತ್ತು. ಆದರೆ, ಈ ವೈಯಕ್ತಿಕ ದಾಳಿಗಳ ವಿರುದ್ಧ ಕಟು ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿಯ ಐಎಎಸ್ ಅಧಿಕಾರಿಗಳ ಸಂಘ (IAS Officers' Association), "ಅಧಿಕಾರಿಗಳ ಸ್ವಂತ ಅರ್ಹತೆ, ಪ್ರಾಮಾಣಿಕತೆ ಮತ್ತು ಸೇವೆಯನ್ನು ಅವರ ಕುಟುಂಬದ ಸದಸ್ಯರ ಸಾಂವಿಧಾನಿಕ ಹುದ್ದೆಯೊಂದಿಗೆ ಜೋಡಿಸಿ ವೈಯಕ್ತಿಕವಾಗಿ ನಿಂದಿಸುವುದು ಸರಿಯಲ್ಲ" ಎಂದು ಕಟುವಾಗಿ ಖಂಡಿಸಿದೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿಗಳ ಘನತೆಯನ್ನು ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದೆ.

ಗಮನ ಸೆಳೆದ ಶೈಕ್ಷಣಿ ವೃತ್ತಿಪರತೆ!

ಒಂದು ಕಡೆ ಆಯೋಗದ ಆಂತರಿಕ ನಿರ್ಧಾರಗಳ ಕುರಿತು ಹಾಗೂ ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿಯ ಬಗ್ಗೆ ರಾಜಕೀಯ ಬಿರುಗಾಳಿ ಎದ್ದಿದ್ದರೆ, ಇನ್ನೊಂದೆಡೆ ದೇಶದ ಅತಿ ದೊಡ್ಡ ಆಡಳಿತಾತ್ಮಕ ಕುಟುಂಬವೆಂದೇ ಗುರುತಿಸಿಕೊಂಡಿರುವ ಜ್ಞಾನೇಶ್ ಕುಮಾರ್ ಅವರ ಕುಟುಂಬದ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆ ಇಡೀ ದೇಶದ ಗಮನ ಸೆಳೆದಿದೆ. ಪ್ರಜಾಪ್ರಭುತ್ವದ ಅತಿ ದೊಡ್ಡ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿ ಜ್ಞಾನೇಶ್ ಕುಮಾರ್ ಅವರು ಎದುರಿಸುತ್ತಿರುವ ಸವಾಲುಗಳ ನಡುವೆಯೂ, ಅವರ ಕುಟುಂಬದ ಈ ಯಶೋಗಾಥೆ ಮತ್ತು ಅದರ ಸುತ್ತ ನಡೆಯುತ್ತಿರುವ ರಾಜಕೀಯ ಚರ್ಚೆಗಳು ಪ್ರಸ್ತುತ ದೇಶದ ಪ್ರಮುಖ ಸುದ್ದಿಯಾಗಿ ಮಾರ್ಪಟ್ಟಿವೆ.