Kanpur Rs 16 offer chaos: ಮಧ್ಯರಾತ್ರಿ 12 ಗಂಟೆ.. ಮಾರುಕಟ್ಟೆಯಲ್ಲಿ ಸಾವಿರಾರು ಜನರ ಕಿರುಚಾಟ, ಪೊಲೀಸರ ಲಾಠಿ ಪ್ರಹಾರ, ರಸ್ತೆಯಲ್ಲೆಲ್ಲಾ ಬಿದ್ದಿರುವ ಚಪ್ಪಲಿಗಳ ರಾಶಿ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಕೇವಲ 16 ರೂಪಾಯಿಯ ಒಂದು ಆಫರ್ ಇಡೀ ನಗರವನ್ನೇ ಬೆಚ್ಚಿಬೀಳಿಸಿದ್ದು ಹೇಗೆ? ಆಫರ್ ಘೋಷಿಸಿದ ಮಾಲೀಕ ತನ್ನದೇ ಅಂಗಡಿಗೆ ಬೀಗ ಹಾಕಿ ಪ್ರಾಣ ಉಳಿಸಿಕೊಳ್ಳಲು ಓಡಿಹೋಗಿದ್ದೇಕೆ?

ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರಕ್ಕಾಗಿ ನೀಡುವ ಆಫರ್ ಅಥವಾ ಪಬ್ಲಿಸಿಟಿ ಸ್ಟಂಟ್‌ಗಳು ಕೆಲವೊಮ್ಮೆ ವ್ಯಾಪಾರಿಗಳಿಗೇ ಪ್ರಾಣ ಸಂಕಟ ತಂದಿಡುತ್ತವೆ. ಕಾನ್ಪುರದ ಬಟ್ಟೆ ವ್ಯಾಪಾರಿಯೊಬ್ಬರಿಗೆ ಇಂತಹದ್ದೇ ಒಂದು ಘಟನೆ ಎದುರಾಗಿದೆ. ಆಗಸ್ಟ್ 15ರ ಮಧ್ಯರಾತ್ರಿ ಅವರು ನೀಡಿದ ಕೇವಲ 16 ನಿಮಿಷಗಳ ಒಂದು ಸ್ಪೆಷಲ್ ಆಫರ್, ಪೊಲೀಸರು ಲಾಠಿ ಪ್ರಹಾರ ನಡೆಸುವಷ್ಟು ದೊಡ್ಡ ಮಟ್ಟದ ಗಲಭೆಗೆ ಕಾರಣವಾಯಿತು.

ಏನಿದು 16 ರೂಪಾಯಿಯ ಆಫರ್?

ಕಾನ್ಪುರದ ಅಲಮ್ ಮಾರ್ಕೆಟ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುವ ರಯೀಸ್ ಅಲಮ್ ಎಂಬುವವರು ತಮ್ಮ ಮಗನ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಚಿತ್ರ ಜಾಹೀರಾತು ನೀಡಿದ್ದರು. ಆಗಸ್ಟ್ 15ರ ಮಧ್ಯರಾತ್ರಿ 11:59 ರಿಂದ ಸರಿಯಾಗಿ 16 ನಿಮಿಷಗಳ ಕಾಲ ತಮ್ಮ ಅಂಗಡಿಯಲ್ಲಿರುವ ಯಾವುದೇ ಸಿದ್ಧ ಉಡುಪುಗಳನ್ನು (ಶರ್ಟ್, ಜೀನ್ಸ್, ಸೂಟ್ ಇತ್ಯಾದಿ) ಕೇವಲ 16 ರೂಪಾಯಿಗೆ ಮಾರಾಟ ಮಾಡುವುದಾಗಿ ಅವರು ಘೋಷಿಸಿದ್ದರು.

ಮಧ್ಯರಾತ್ರಿ ಮಾರುಕಟ್ಟೆಯಲ್ಲಿ ಜನಸಾಗರ

ಈ ಸುದ್ದಿ ಕ್ಷಣಾರ್ಧದಲ್ಲಿ ವೈರಲ್ ಆಗಿ, ನಿಗದಿತ ಸಮಯಕ್ಕಿಂತ ಮುಂಚೆಯೇ ಅಂದರೆ ರಾತ್ರಿ 11:30ರ ಹೊತ್ತಿಗೆ ಸಾವಿರಾರು ಜನ ಮಾರುಕಟ್ಟೆಗೆ ಲಗ್ಗೆ ಇಟ್ಟರು. ಸುಮಾರು 3,000 ದಿಂದ 4,000 ಜನರು ಜಮಾಯಿಸಿದ್ದರಿಂದ ಇಡೀ ರಸ್ತೆ ಜನಜಂಗುಳಿಯಿಂದ ತುಂಬಿಹೋಯಿತು. ಬಟ್ಟೆ ಪಡೆಯುವ ಧಾವಂತದಲ್ಲಿ ಜನರ ನಡುವೆ ತೀವ್ರ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ರಸ್ತೆಯಲ್ಲೆಲ್ಲ ಚಪ್ಪಲಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಮತ್ತು ಈ ನೂಕುನುಗ್ಗಲಿನಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾದವು.

ಅಂಗಡಿ ಮುಚ್ಚಿ ಮಾಲೀಕ ಪರಾರಿ

ಒಮ್ಮೆಗೆ ಮುಗಿಬಿದ್ದ ಜನಸಾಗರವನ್ನು ಕಂಡು ಬೆಚ್ಚಿಬಿದ್ದ ಮಾಲೀಕ ರಯೀಸ್ ಅಲಮ್, ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಕೂಡಲೇ ಅಂಗಡಿಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾದರು. ಜನರನ್ನು ನಿಯಂತ್ರಿಸಲು ಏಳು ಪೊಲೀಸ್ ಠಾಣೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಬೇಕಾಯಿತು. ಮೈಕ್ ಮೂಲಕ ಎಚ್ಚರಿಕೆ ನೀಡಿದರೂ ಜನ ಚದುರದಿದ್ದಾಗ ಪೊಲೀಸರು ಲಘು ಲಠಿ ಪ್ರಹಾರ ನಡೆಸಿದರು.

ಕಾನೂನು ಕ್ರಮ

ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಮತ್ತು ಶಾಂತಿಭಂಗಕ್ಕೆ ಕಾರಣವಾಗುವಂತೆ ಇಂತಹ ಆಫರ್ ಘೋಷಿಸಿದ್ದಕ್ಕಾಗಿ ಪೊಲೀಸರು ರಯೀಸ್ ಅಲಮ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಗಾಗಿ ಅವರ ಸಹೋದರನನ್ನು ವಶಕ್ಕೆ ಪಡೆಯಲಾಗಿದೆ. ಅತಿಯಾದ ಪ್ರಚಾರದ ಹಪಾಹಪಿಯಿಂದ ನೀಡಿದ ಈ ಒಂದು ಆಫರ್ ಇಡೀ ಕಾನ್ಪುರದಲ್ಲಿ ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಾಯಿತು.

ಕೇವಲ 1 ರೂಪಾಯಿಗೆ ಬಿರಿಯಾನಿ

ಕಾನ್ಪುರದ ಘಟನೆಯಂತೆಯೇ, ತಮಿಳುನಾಡಿನ ಮಧುರೈನಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಅಲ್ಲಿ ಹೊಸದಾಗಿ ಆರಂಭವಾದ ಹೋಟೆಲ್ ಒಂದರ ಮಾಲೀಕರು ಪ್ರಚಾರಕ್ಕಾಗಿ "ಕೇವಲ 1 ರೂಪಾಯಿಗೆ ಬಿರಿಯಾನಿ" ನೀಡುವುದಾಗಿ ಘೋಷಿಸಿದ್ದರು.

ಆಮೇಲೇನಾಯ್ತು?

ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಬೆಳಗ್ಗೆಯಿಂದಲೇ ಸಾವಿರಾರು ಜನರು ಹೋಟೆಲ್ ಮುಂದೆ ಜಮಾಯಿಸಿದರು. ಜನಸಂಖ್ಯೆ ಎಷ್ಟಿತ್ತೆಂದರೆ, ಹೋಟೆಲ್ ಇದ್ದ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.

ಪರಿಣಾಮ..

ಬಿರಿಯಾನಿಗಾಗಿ ಜನರು ಪರಸ್ಪರ ಕಿತ್ತಾಡಲು ಶುರುಮಾಡಿದರು. ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಂತಿಮವಾಗಿ, ಕೋವಿಡ್ ನಿಯಮಗಳ ಉಲ್ಲಂಘನೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಪೊಲೀಸರು ಹೋಟೆಲ್ ಅನ್ನು ಮುಚ್ಚಿಸಿ, ಮಾಲೀಕರ ಮೇಲೆ ದಂಡ ವಿಧಿಸಿದ್ದರು.

View post on Instagram