ನೇಪಾಳದ ಭೀಕರ ಪ್ರವಾಹದ ಅವಶೇಷಗಳಡಿ ಮೂರು ದಿನಗಳ ಕಾಲ ಹೂತುಹೋಗಿದ್ದ ಆರು ವರ್ಷದ ಬಾಲಕಿ ಪವಾಡಸದೃಶವಾಗಿ ಜೀವಂತವಾಗಿ ಪತ್ತೆಯಾಗಿದ್ದು, ಸಾವಿನ ದವಡೆಯಿಂದ ಬಂದ ಆಕೆಯ ಕಥೆ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಪುಟ್ಟ ಕಂದಮ್ಮ ಶೀಘ್ರವೇ ಗುಣಮುಖಳಾಗಿ, ತನ್ನ ಕುಟುಂಬವನ್ನು ಮರಳಿ ಸೇರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.
ನೇಪಾಳದಲ್ಲಿ ಪ್ರಕೃತಿ ವಿಕೋಪ ಅಟ್ಟಹಾಸ ಮೆರೆಯುತ್ತಿದೆ. ನೂರಾರು ಜೀವಗಳು ಮಣ್ಣಿನ ಪಾಲಾಗಿವೆ, ಸಾವಿರಾರು ಮಂದಿ ಕಾಣೆಯಾಗಿದ್ದಾರೆ. ಇಡೀ ದೇಶವೇ ಕಣ್ಣೀರಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ, ಒಂದು ಪುಟ್ಟ ಮಗುವಿನ ರಕ್ಷಣೆ ಭರವಸೆಯ ಕಿರಣವಾಗಿ ಮೂಡಿಬಂದಿದೆ. ಸಾಕ್ಷಾತ್ ಯಮನ ದವಡೆಯಿಂದಲೇ ಈ ಮಗು ಪಾರಾಗಿ ಬಂದ ಕಥೆ ಇದು!
ಅದು ನೇಪಾಳದ ರಸುವಾ ಜಿಲ್ಲೆಯ ತಿಮೂರೆ ಗ್ರಾಮ. ಭೋರ್ಗರೆಯುವ ಭೋಟ್ ಕೋಶಿ ನದಿಯ ಪ್ರವಾಹ ಈ ಗ್ರಾಮವನ್ನು ಅಕ್ಷರಶಃ ನುಂಗಿ ಹಾಕಿತ್ತು. ಎಲ್ಲೆಡೆ ಮಣ್ಣು, ಕಲ್ಲು ಮತ್ತು ಕಟ್ಟಡಗಳ ಅವಶೇಷಗಳು. ಈ ವಿನಾಶದ ನಡುವೆ ಯಾರಾದರೂ ಬದುಕುಳಿದಿರುತ್ತಾರೆ ಎಂಬ ಆಶಾವಾದ ಕ್ಷೀಣಿಸುತ್ತಿತ್ತು. ಆದರೆ ಶುಕ್ರವಾರ ಸಂಜೆ ಒಂದು ಪವಾಡ ನಡೆಯಿತು..
ಸಶಸ್ತ್ರ ಪೊಲೀಸ್ ಪಡೆ (APF) ಸಿಬ್ಬಂದಿ ಅವಶೇಷಗಳ ನಡುವೆ ಬದುಕುಳಿದವರಿಗಾಗಿ ಹುಡುಕಾಡುತ್ತಿದ್ದಾಗ ದಪ್ಪನೆಯ ಮಣ್ಣಿನ ಪದರದ ಒಳಗಿನಿಂದ ಅಸ್ಪಷ್ಟವಾಗಿ ಕೇಳಿಸಿದ ಕ್ಷೀಣ ದನಿ ಅವರನ್ನು ಬೆಚ್ಚಿಬೀಳಿಸಿತು. ಅದು ಅಳುವ ದನಿಯಾಗಿತ್ತು! ತಕ್ಷಣ ಕಾರ್ಯಪ್ರವೃತ್ತರಾದ ರಕ್ಷಣಾ ತಂಡ, ಮಣ್ಣನ್ನು ಅಗೆಯಲಾರಂಭಿಸಿತು. ಸುಮಾರು ಮೂರು ದಿನಗಳ ಕಾಲ ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ 6 ವರ್ಷದ ಪುಟ್ಟ ಬಾಲಕಿ 'ಮನೀಶಾ ಮಗರ್' ಕೊನೆಗೂ ಸುದೈವವಶಾತ್ ಜೀವಂತವಾಗಿ ಹೊರಬಂದಳು.
ಜೀವಕ್ಕಾಗಿ ಹೋರಾಟ
ಹೊರತೆಗೆದಾಗ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಶಿಬಿರದಲ್ಲಿ ಉಪಚರಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಆಕೆಯನ್ನು ಕಾಠ್ಮಂಡುವಿಗೆ ಏರ್‌ಲಿಫ್ಟ್ ಮಾಡಲು ನಿರ್ಧರಿಸಲಾಯಿತು. ದುರಾದೃಷ್ಟವಶಾತ್, ಕೆಟ್ಟ ಹವಾಮಾನ ಮತ್ತು ಮಂಜಿನ ಕಾರಣದಿಂದ ಹೆಲಿಕಾಪ್ಟರ್ ಹಾರಾಟ ವಿಳಂಬವಾಯಿತು. ಆದರೂ ರಕ್ಷಣಾ ಸಿಬ್ಬಂದಿ ಧೈರ್ಯಗುಂದದೆ ಶನಿವಾರದವರೆಗೆ ಆಕೆಯನ್ನು ಸುರಕ್ಷಿತವಾಗಿ ನೋಡಿಕೊಂಡರು. ಹವಾಮಾನ ತಿಳಿಯಾಗುತ್ತಿದ್ದಂತೆ ಶನಿವಾರ ಮಧ್ಯಾಹ್ನ ಆಕೆಯನ್ನು ಕಾಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ತಜ್ಞ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಕ್ಷಣಾ ಪಡೆಗಳ ಸಾಹಸಕ್ಕೆ ಜನ ಕೈಮುಗಿದು ನಮಿಸುತ್ತಿದ್ದಾರೆ. "ಎಲ್ಲಾ ಆಸೆಗಳು ಕೈಬಿಟ್ಟಾಗ ಈ ಮಗು ಸಿಕ್ಕಿದೆ, ಇದು ದೈವಲೀಲೆ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ದುರಂತವೆಂದರೆ ಮನೀಶಾಳ ಕುಟುಂಬದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮನೀಶಾ ಮಗರ್ ಎಂಬ ಈ ಬಾಲಕಿಯನ್ನು ಗುರುತಿಸುವವರು ಅಥವಾ ಆಕೆಯ ಕುಟುಂಬದ ಬಗ್ಗೆ ಮಾಹಿತಿ ಇರುವವರು ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗುತ್ತಿದೆ. ಆ ಪುಟ್ಟ ಕಂದಮ್ಮ ತನ್ನವರನ್ನು ಮತ್ತೆ ಸೇರುವಂತಾಗಲಿ ಎಂಬುದು ಎಲ್ಲರ ಪ್ರಾರ್ಥನೆ.
ನೇಪಾಳದಲ್ಲಿ ಸಂಭವಿಸಿದ ಈ ಮಹಾ ಪ್ರವಾಹಕ್ಕೆ ಇದುವರೆಗೆ 675 ಜನರು ಬಲಿಯಾಗಿದ್ದಾರೆ ಮತ್ತು 2,400ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ವಿದೇಶಾಂಗ ಸಚಿವ ಶಿಶಿರ್ ಖಾನಾಲ್ ಅವರ ಪ್ರಕಾರ, ದೇಶದ ಪುನರ್ನಿರ್ಮಾಣಕ್ಕೆ ಬಿಲಿಯನ್ ಗಟ್ಟಲೆ ಡಾಲರ್ ಹಣದ ಅಗತ್ಯವಿದೆ. ಈ ಭೀಕರ ವಿನಾಶದ ನಡುವೆಯೂ ಮನೀಶಾಳ ರಕ್ಷಣೆ ನೇಪಾಳಕ್ಕೆ ಹೊಸ ಭರವಸೆ ನೀಡಿದೆ.


