ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಸಂಸಾರ ಸಂಭ್ರಮಕ್ಕೆ ಕೊನೆಯಿಲ್ಲ! ಇದನ್ನ ತಮಿಳುನಾಡಿನ ದಂಪತಿ ಒಂದು ಪ್ರೂವ್ ಮಾಡಿ ತೋರಿಸಿದೆ. ಇದೀಗ 100ನೇ ವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆ ಆಗಿದೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ತಮಿಳುನಾಡು: ತಮಿಳುನಾಡಿನ ನಾಗಪಟ್ಟಣಂನಲ್ಲಿ ಒಂದು ಅಪರೂಪದ ವಿದ್ಯಾಮಾನ ಸಂಭವಿಸಿದೆ. 100 ವರ್ಷ ಪೂರೈಸಿ ಶತಾಯುಷಿ ಆಗಿರುವ ದಂಪತಿಗೆ ಅವರ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳು ಸೇರಿ ಸಾಂಪ್ರದಾಯಿಕವಾಗಿ ಮರು ಮದುವೆ (ಕನಕಾಭಿಷೇಕ) ನೆರವೇರಿಸಿ ಖುಷಿಪಟ್ಟಿದ್ದಾರೆ.
ತಾಳಿ ಕಟ್ಟಿದ ತಾತ
ಸಂಭ್ರಮದಿಂದ ಕೂಡಿದ್ದ ವಿವಾಹದಲ್ಲಿ ಹಿರಿಯ ದಂಪತಿ ಮದುಮಕ್ಕಳಂತೆ ಕಂಗೊಳಿಸಿದರು. ಮದುಮಗ ಅಜ್ಜ ಹಿರಿಯಜ್ಜ ಅವರು ಸಾಂಪ್ರದಾಯಿಕ ಪಂಚೆ, ಶಲ್ಯ ಧರಿಸಿ ಹಣೆಗೆ ವಿಭೂತಿ ಇಟ್ಟುಕೊಂಡು ಕಂಗೊಳಿಸಿದ್ದಾರೆ. ಮದುಮಗಳು ಅಜ್ಜಿ ರೇಷ್ಮೆ ಸೀರೆ ಉಟ್ಟು ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದರು. ವೇದಿಕೆ ಮೇಲೆ ಹಿರಿಯಜ್ಜ, ಅಜ್ಜಿಯ ಕೊರಳಿಗೆ ಮತ್ತೊಮ್ಮೆ ತಾಳಿ ಕಟ್ಟಿ, ಹಾರ ಬದಲಾಯಿಸಿಕೊಂಡರು. ಸುಂದರವಾದ ಭಾವನಾತ್ಮಕ ಕ್ಷಣಕ್ಕೆ ಇಡೀ ಕುಟುಂಬ ಹೂಮಳೆ ಸುರಿಸಿ, ಅಕ್ಷತೆ ಹಾಕಿ ಶುಭ ಹಾರೈಸಿದರು.
ಮದುವೆಯಲ್ಲಿ ಕೇಕ್ ಕೂಡ ತರಲಾಗಿತ್ತು. ದಂಪತಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 100 years ಎಂದು ಬರೆದು ಕಟ್ ಮಾಡಲಾಗಿತ್ತು. ಇನ್ನು ಮದುವೆ ಸಮಾರಂಭದಲ್ಲಿ ನಾಲ್ಕು ತಲೆಮಾರಿನ ನೂರಾರು ಕುಟುಂಬಸ್ಥರು ಪಾಲ್ಗೊಂಡಿದ್ದರು. ಇನ್ನು, ಮರಿಮಕ್ಕಳು, ಯುವಕರು ಮದುವೆ ಸಮಾರಾಂಭದ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಕುಣಿದು ಸಂಭ್ರಮಿಸಿದರು. ನಂತರ ಇಡೀ ಕುಟುಂಬ ಫೋಟೋ ಶೂಟ್ ಮಾಡಿಸಿಕೊಂಡಿದೆ.
ಸನಾತನ ಸಂಪ್ರದಾಯದಲ್ಲಿ 60 ವರ್ಷ ತುಂಬಿದಾಗ ಷಷ್ಠ್ಯಬ್ದಪೂರ್ತಿ, 80 ವರ್ಷಕ್ಕೆ ಸಹಸ್ರ ಚಂದ್ರದರ್ಶನ ಶಾಂತಿ ಹಾಗೂ ವ್ಯಕ್ತಿಯೊಬ್ಬರು 100 ವರ್ಷ ಪೂರೈಸಿದಾಗ ಅಥವಾ ಮರಿಮಕ್ಕಳನ್ನು ನೋಡಿದಾಗ ಕನಕಾಭಿಷೇಕ ಮಾಡುವ ಸಂಪ್ರದಾಯವಿದೆ. ಶತಾಯುಷಿ ದಂಪತಿಯನ್ನು ದೇವತಾ ಸ್ವರೂಪಿಗಳೆಂದು ಭಾವಿಸಲಾಗುತ್ತದೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ಶಾಸ್ತ್ರೋಕ್ತವಾಗಿ ವಿವಾಹ ಶಾಂತಿ ನೆರವೇರಿಸಿ ಅವರ ಆಶೀರ್ವಾದ ಪಡೆಯಲಾಗುತ್ತದೆ. ಇದು ಮಂಗಳಕರವೆಂದು ನಂಬಲಾಗುತ್ತದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಶತಾಯುಷಿ ದಂಪತಿಗೆ ನೆಟ್ಟಿಗರು ಶುಭ ಹಾರೈಸುತ್ತಿದ್ದಾರೆ. ವೃದ್ಧ ದಂಪತಿಯನ್ನ ಕಣ್ತುಂಬಿಕೊಂಡ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.



